ADVERTISEMENT

PV Web Exclusive: ‘ಪಂಜಾಬ್‌ ಪುತ್ರ’ನ ಕ್ರಿಕೆಟ್‌ ಪ್ರೀತಿ...

ಜಿ.ಶಿವಕುಮಾರ
Published 28 ಡಿಸೆಂಬರ್ 2020, 19:30 IST
Last Updated 28 ಡಿಸೆಂಬರ್ 2020, 19:30 IST
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಶುಭಮನ್‌ ಗಿಲ್‌ ಬ್ಯಾಟಿಂಗ್‌ ವೈಖರಿ –ಎಎಫ್‌ಪಿ ಚಿತ್ರ 
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಶುಭಮನ್‌ ಗಿಲ್‌ ಬ್ಯಾಟಿಂಗ್‌ ವೈಖರಿ –ಎಎಫ್‌ಪಿ ಚಿತ್ರ    

ಮಕ್ಕಳು ಚಿಕ್ಕವರಾಗಿದ್ದಾಗ ಆಟಿಕೆಯ ವಸ್ತುಗಳನ್ನು ಕೊಡಿಸುವಂತೆ ಅಪ್ಪ ಅಮ್ಮನ ಬಳಿ ಹಠ ಹಿಡಿಯುವುದು ಸಹಜ. ಆದರೆ ಈ ಹುಡುಗ ಇದಕ್ಕೆ ತದ್ವಿರುದ್ಧ. ಈತ ಬೊಂಬೆ, ಕಾರು, ಬಂದೂಕು ಬೇಕೆಂದು ಪಾಲಕರನ್ನು ಪೀಡಿಸಿದವನೇ ಅಲ್ಲ. ಕ್ರಿಕೆಟ್‌ ಬ್ಯಾಟ್‌ ಮತ್ತು ಚೆಂಡು ಕೈಗೆ ಸಿಕ್ಕರೆ ಇಡಿ ಜಗತ್ತನ್ನೇ ಮರೆತು ಬಿಡುತ್ತಿದ್ದ. ಅವು ಆತನ ಪಾಲಿಗೆ ಸರ್ವಸ್ವವಾಗಿದ್ದವು. ಅವುಗಳನ್ನು ಬಿಗಿದಪ್ಪಿಕೊಂಡೇ ರಾತ್ರಿ ನಿದ್ರೆಗೆ ಜಾರಿಬಿಡುತ್ತಿದ್ದ.

ಊರಿನಲ್ಲಿ ನಡೆಯುತ್ತಿದ್ದ ಕ್ರಿಕೆಟ್‌ ಟೂರ್ನಿಗಳ ವೇಳೆ ಆ ಹುಡುಗ ಕ್ರೀಸ್‌ಗೆ ಬಂದರೆ ಎದುರಾಳಿ ಬೌಲರ್‌ಗಳಲ್ಲಿ ನಡುಕ ಶುರುವಾಗುತ್ತಿತ್ತು. ಸ್ಥಳೀಯರು ಆತನ ವಿಕೆಟ್‌ ಕೆಡವಿದವರಿಗೆ100 ರೂಪಾಯಿ ಇನಾಮು ಕೊಡುವುದಾಗಿ ಪ್ರಕಟಿಸುತ್ತಿದ್ದರು. ಆಗ ಅಷ್ಟೇಅಲ್ಲ ಈಗಲೂ ಬೌಲರ್‌ಗಳನ್ನು ಕಾಡುವ ಆ ಕ್ರಿಕೆಟಿಗನ ಹೆಸರು ಶುಭಮನ್‌ ಗಿಲ್‌.

ಯುವರಾಜ್‌ ಸಿಂಗ್‌ ಹಾಗೂ ಹರಭಜನ್‌ ಸಿಂಗ್‌ ಅವರು ಛಲದ ಆಟದ ಮೂಲಕ ದಶಕಗಳ ಕಾಲ ವಿಶ್ವ ಕ್ರಿಕೆಟ್‌ನಲ್ಲಿ ಪ್ರಜ್ವಲಿಸಿದ್ದವರು. ಇವರು ತೆರೆಗೆ ಸರಿದ ನಂತರ ಭಾರತದ ಸೀನಿಯರ್‌ ತಂಡದಲ್ಲಿ ತಮ್ಮ ರಾಜ್ಯದವರು ಯಾರೂ ಇಲ್ಲವಲ್ಲ ಎಂಬ ಕೊರಗು ಪಂಜಾಬ್‌ನ ಕ್ರಿಕೆಟ್‌ ಪ್ರೇಮಿಗಳನ್ನು ಬಹುವಾಗಿ ಕಾಡಿತ್ತು. ಆ ಕೊರಗನ್ನು ದೂರ ಮಾಡಿದವರು ಶುಭಮನ್‌.

ADVERTISEMENT

ಮಗನ ಮೂಲಕ ಕನಸು ನನಸಾಗಿಸಿಕೊಂಡ ಅಪ್ಪ...

ಶುಭಮನ್‌ ಜನಿಸಿದ್ದು ಪಂಜಾಬ್‌ನ ಫಜಿಲ್ಕಾ ಗ್ರಾಮದಲ್ಲಿ. ಅವರ ತಂದೆ ಲಖ್ವಿಂದರ್‌ ಸಿಂಗ್‌. ತಾಯಿಯ ಹೆಸರು ಕೀರತ್‌ ಸಿಂಗ್‌. ಕೃಷಿಕ ಕುಟುಂಬದ ಲಖ್ವಿಂದರ್‌ ಅವರಿಗೆ ಕ್ರಿಕೆಟಿಗನಾಗುವ ಬಯಕೆ ಇತ್ತು. ಅದು ಕೈಗೂಡಲಿಲ್ಲ. ಹಾಗಂತ ಅವರು ನಿರಾಶರಾಗಲಿಲ್ಲ. ತಮ್ಮ ಕನಸನ್ನು ಮಗನ ಮೂಲಕ ಸಾಕಾರಗೊಳಿಸಿಕೊಳ್ಳಲು ನಿಶ್ಚಯಿಸಿದರು. ಎಳವೆಯಲ್ಲೇ ಮಗನದಲ್ಲಿದ್ದ ಕ್ರಿಕೆಟ್‌ ಪ್ರೀತಿಯನ್ನು ಕಂಡ ಅವರು ಅದಕ್ಕೆ ನೀರೆರೆದು ಪೋಷಿಸಿದರು. ತಾವು ಹೊಲಕ್ಕೆ ಹೋದಾಗ ಮಗನನ್ನೂ ಜೊತೆಗೆ ಕರೆದೊಯ್ಯುತ್ತಿದ್ದ ಅವರು ಅಲ್ಲಿ ಆತನಿಗೆ ಬ್ಯಾಟಿಂಗ್‌ ಕೌಶಲಗಳನ್ನು ಹೇಳಿಕೊಡುತ್ತಿದ್ದರು.

ಗ್ರಾಮದಲ್ಲೇ ಇದ್ದರೆ ಮಗನನ್ನು ದೊಡ್ಡ ಕ್ರಿಕೆಟಿಗನಾಗಿ ರೂಪಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಲಖ್ವಿಂದರ್ ಆತನಿಗಾಗಿ ತಾವು ಹುಟ್ಟಿ ಬೆಳೆದ ಊರು, ಮನೆ ಹಾಗೂ ಹೊಲವನ್ನೆಲ್ಲಾ ಬಿಟ್ಟು ಮೊಹಾಲಿಗೆ ಹೋದರು. ಮಗನ ಅಭ್ಯಾಸಕ್ಕೆ ಎಳ್ಳಷ್ಟೂ ತೊಂದರೆಯಾಗಬಾರದು ಎಂಬ ಕಾರಣದಿಂದ ಪಂಜಾಬ್‌ ಕ್ರಿಕೆಟ್‌ ಸಂಸ್ಥೆಯ (ಪಿಸಿಎ) ಸನಿಹವೇ ಬಾಡಿಗೆ ಮನೆ ಮಾಡಿದರು. ಅಲ್ಲೇ ಇದ್ದ ಅಕಾಡೆಮಿಯೊಂದಕ್ಕೆ ಮಗನನ್ನು ಸೇರಿಸಿ ಆತನ ಕ್ರೀಡಾ ಬದುಕಿಗೆ ಮುನ್ನುಡಿ ಬರೆದರು.

ಅಪ್ಪನ ಈ ಶ್ರಮ ವ್ಯರ್ಥವಾಗದಂತೆ ಶುಭಮನ್‌ ನೋಡಿಕೊಂಡರು.2014ರಲ್ಲಿ ನಡೆದಿದ್ದ ಅಂತರ ಜಿಲ್ಲಾ16 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಪಂದ್ಯದ ಇನಿಂಗ್ಸ್‌ವೊಂದರಲ್ಲಿ351ರನ್‌ ಬಾರಿಸಿ ಕ್ರಿಕೆಟ್‌ ಲೋಕದ ಗಮನ ಸೆಳೆದರು. ನಿರ್ಮಲ್‌ ಸಿಂಗ್‌ ಜೊತೆ ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ587ರನ್‌ ಕಲೆಹಾಕಿ ದಾಖಲೆಯನ್ನೂ ಬರೆದಿದ್ದರು.

ಅದೇ ವರ್ಷ ವಿಜಯ್‌ ಮರ್ಚೆಂಟ್‌ ಟ್ರೋಫಿಯಲ್ಲಿ ಪಂಜಾಬ್‌ ತಂಡದ ಪರ ಕಣಕ್ಕಿಳಿದಿದ್ದ ಶುಭಮನ್‌, ದ್ವಿಶತಕ ಬಾರಿಸಿ ಮಿಂಚಿದ್ದರು. ಬಳಿಕ ಅವಕಾಶಗಳು ಅವರನ್ನು ಅರಸಿ ಬಂದವು. 2017ರ ಫೆಬ್ರುವರಿಯಲ್ಲಿ ‘ಲಿಸ್ಟ್‌ ಎ’ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಗಿಲ್‌, ಅದೇ ವರ್ಷ ರಣಜಿ ಟ್ರೋಫಿ ತಂಡದಲ್ಲೂ ಅವಕಾಶ ಪಡೆದರು. ತಾವಾಡಿದ ಎರಡನೇ ಪ್ರಥಮ ದರ್ಜೆ ಪಂದ್ಯದಲ್ಲೇ (ಸರ್ವಿಸಸ್ ವಿರುದ್ಧ) ಶತಕ ಸಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಜೂನಿಯರ್‌ ವಿಶ್ವಕಪ್‌ನ ‘ಹೀರೊ’...

2018ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಟೂರ್ನಿಶುಭಮನ್‌ ಅವರ ಕ್ರಿಕೆಟ್ ಬದುಕಿಗೆ ಹೊಸ ದಿಕ್ಕು ತೋರಿತು. ಆ ಟೂರ್ನಿಯಲ್ಲಿ ಅವರಿಂದ ಮನಮೋಹಕ ಆಟ ಮೂಡಿಬಂದಿತ್ತು. ಉಪನಾಯಕನ ಹೊಣೆಯನ್ನೂ ಹೊತ್ತಿದ್ದ ಅವರು ಎಲ್ಲಾ ಪಂದ್ಯಗಳಲ್ಲೂ ಗಮನಾರ್ಹ ಸಾಮರ್ಥ್ಯ ತೋರಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಟೂರ್ನಿಯಲ್ಲಿ372 ರನ್‌ ಬಾರಿಸಿದ್ದ ಶುಭಮನ್‌, ಸರಣಿ ಶ್ರೇಷ್ಠ ಗೌರವಕ್ಕೂ ಭಾಜನರಾಗಿದ್ದರು.

ಅನಂತರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌), ದೇವಧರ್‌ ಟ್ರೋಫಿ, ದುಲೀಪ್‌ ಟ್ರೋಫಿ ಟೂರ್ನಿಗಳಲ್ಲೂ ಅವರ ಆಟ ಕಳೆಗಟ್ಟಿತ್ತು.

ಕಾಂಗರೂ ತಂಡದ ಎದುರಿನ ‘ಟೆಸ್ಟ್‌’ನಲ್ಲಿ ಪಾಸ್‌...

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪೃಥ್ವಿ ಶಾ ವೈಫಲ್ಯ ಕಂಡಾಗ ಟೀಕೆಗಳ ಮಳೆಯೇ ಸುರಿದಿತ್ತು. ಹೀಗಾಗಿ ‘ಬಾಕ್ಸಿಂಗ್‌ ಡೇ’ ಟೆಸ್ಟ್‌ನಿಂದ (ಎರಡನೇ ಟೆಸ್ಟ್‌) ಅವರನ್ನು ಹೊರಗಿಡುವುದು ನಿಶ್ಚಯವಾಗಿತ್ತು. ಪೃಥ್ವಿ ಬದಲು ಹನ್ನೊಂದರ ಬಳಗದಲ್ಲಿ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆ ಎದುರಾದಾಗ ಸಹಜವಾಗಿಯೇ ಕನ್ನಡಿಗ ಕೆ.ಎಲ್‌.ರಾಹುಲ್‌ ಅವರ ಹೆಸರು ಕೇಳಿಬಂದಿತ್ತು. ಆದರೆ ಪಂದ್ಯದ ದಿನ ಆಗಿದ್ದೇ ಬೇರೆ. ಇದೇ26ರಂದು ಭಾರತ ತಂಡದ ಆಡಳಿತ ಅಚ್ಚರಿಯ ನಿರ್ಧಾರವೊಂದನ್ನು ಪ್ರಕಟಿಸಿತ್ತು.

ರಾಹುಲ್‌ ಅನುಭವವನ್ನು ಬದಿಗಿರಿಸಿ ಶುಭಮನ್‌ಗೆ ಅಂತಿಮ ಬಳಗದಲ್ಲಿ ಅವಕಾಶ ಕಲ್ಪಿಸಿತ್ತು. ಕೋಚ್‌ ರವಿಶಾಸ್ತ್ರಿ ಅವರಿಂದ ‘ಕ್ಯಾಪ್‌’ (ಸಂಖ್ಯೆ297) ‍‍‍ಪಡೆದ ಅವರುಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ (ಎಂಸಿಜಿ) ಕಣಕ್ಕಿಳಿಯುವ ಮೂಲಕ ಟೆಸ್ಟ್‌ ಪದಾರ್ಪಣೆಯ ಕನಸನ್ನು ನನಸಾಗಿಸಿಕೊಂಡರು.

ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌, ಜೋಶ್‌ ಹ್ಯಾಜಲ್‌ವುಡ್‌ ಅವರ ಬಿರುಗಾಳಿ ವೇಗದ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತರು. 65 ಎಸೆತಗಳಲ್ಲಿ ಎಂಟು ಬೌಂಡರಿ ಸಹಿತ 45 ರನ್‌ ಬಾರಿಸಿದ್ದಾರೆ. ಆ ಮೂಲಕ ಟೆಸ್ಟ್‌ ಮಾದರಿಯಲ್ಲಿ ತಾನು ಭಾರತ ತಂಡದ ಬ್ಯಾಟಿಂಗ್‌ ಶಕ್ತಿಯಾಗಿ ಬೆಳೆಯಬಲ್ಲೆ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.