ಆರ್. ಅಶ್ವಿನ್
ಚೆನ್ನೈ: ಪ್ರತಿಷ್ಠಿತ ಬಿಗ್ ಬ್ಯಾಷ್ ಲೀಗ್ 15ನೇ ಆವೃತ್ತಿಯಲ್ಲಿ ಸಿಡ್ನಿ ಥಂಡರ್ ಪರ ಆಡಲು ಒಪ್ಪಂದಕ್ಕೆ ಸಹಿ ಮಾಡಿದ್ದ ಭಾರತ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್, ಟೂರ್ನಿ ಆರಂಭಕ್ಕೂ ಮೊದಲೇ ಮೊಣಕಾಲಿನ ಗಾಯದಿಂದಾಗಿ ಸಂಪೂರ್ಣ ಸೀಸನ್‌ನಿಂದಲೆ ಹೊರಗುಳಿಯಲಿದ್ದಾರೆ.
ಅಶ್ವಿನ್ ಅವರು ಬಿಬಿಎಲ್, ದಿ ಹಂಡ್ರೆಡ್ ಮತ್ತು ಎಸ್‌ಎ 20 ಸೇರಿ ವಿಶ್ವದಾದ್ಯಂತ ನಡೆಯುವ ಟಿ20 ಫ್ರಾಂಚೈಸಿ ಲೀಗ್‌ಗಳಲ್ಲಿ ಆಡುವ ಉದ್ದೇಶದಿಂದಾಗಿ ಕಳೆದ ವರ್ಷದ ಕೊನೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಮತ್ತು 2025ರಲ್ಲಿ ಐಪಿಎಲ್‌ನಿಂದ ನಿವೃತ್ತಿ ಹೊಂದಿದ್ದರು.
ಸದ್ಯ, ತಮಗಾಗಿರುವ ಗಾಯದ ಕುರಿತು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಮೂಲಕ ಮಾಹಿತಿ ಹಂಚಿಕೊಂಡಿರುವ ಅಶ್ವಿನ್, ‘ಮುಂಬರುವ ಬಿಗ್ ಬ್ಯಾಷ್ ಲೀಗ್ ಆಡಲು ಉತ್ಸುಕನಾಗಿದ್ದೆ. ಆದರೆ, ಚೆನ್ನೈನಲ್ಲಿ ತರಬೇತಿ ಪಡೆಯುತ್ತಿದ್ದಾಗ ನನ್ನ ಮೊಣಕಾಲಿಗೆ ಗಾಯವಾಗಿದೆ. ಕೂಡಲೆ ಚಿಕಿತ್ಸೆ ಪಡೆದುಕೊಂಡಿದ್ದೇನೆ ಆದರೆ, ಇನ್ನೂ ಸುಧಾರಿಸಿಲ್ಲ. ಹಾಗಾಗಿ ನಾನು ಬಿಬಿಎಲ್ 15ನೇ ಆವೃತ್ತಿಯಿಂದ ಹೊರಗುಳಿಯುತ್ತಿದ್ದೇನೆ. ಅದನ್ನು ಹೇಳಲು ಕಷ್ಟವಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಗಾಯದ ಕಾರಣದಿಂದಾಗಿ ಅವರು ನವೆಂಬರ್ 7 ರಿಂದ 9ರವರೆಗೆ ನಡೆಯಲಿರುವ ಹಾಂಗ್ ಕಾಂಗ್ ಸಿಕ್ಸಸ್ ಲೀಗ್‌ಗೂ ಅಲಭ್ಯರಾಗಲಿದ್ದಾರೆ. ಅವರ ಬದಲಿಗೆ ರಾಬಿನ್ ಉತ್ತಪ್ಪ ಎಚ್‌ಕೆ ಸಿಕ್ಸಸ್‌ನಲ್ಲಿ ಸೇರಿಕೊಂಡಿದ್ದಾರೆ.
‘ಬಿಗ್ ಬ್ಯಾಷ್ ಲೀಗ್‌ನ 15ನೇ ಆವೃತ್ತಿ ತಪ್ಪಿಸಿಕೊಳ್ಳುತ್ತಿರುವುದಕ್ಕೆ ನನಗೆ ತುಂಬಾ ಬೇಸರವಾಗುತ್ತಿದೆ. ಈಗ ನನ್ನ ಗಮನ ಚೇತರಿಕೆ ಮತ್ತು ಬಲವಾದ ಪುನರಾಗಮನದ ಮೇಲಿದೆ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ಸಿಡ್ನಿ ಥಂಡರ್ ಫ್ರಾಂಚೈಸಿಗೆ ಕೃತಜ್ಞನಾಗಿದ್ದೇನೆ. ಅವಕಾಶ ಸಿಕ್ಕರೆ ಲೀಗ್ ಕೊನೆಯಲ್ಲಿ ತಂಡದ ಸಹ ಆಟಗಾರರನ್ನು ಹಾಗೂ ಅಭಿಮಾನಿಗಳನ್ನು ಭೇಟಿಯಾಗುತ್ತೇನೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.