ADVERTISEMENT

ಐಸಿಸಿ ಟ್ವೆಂಟಿ–20 ರ‍್ಯಾಂಕಿಂಗ್‌: ಎರಡನೇ ಸ್ಥಾನಕ್ಕೆ ರಾಹುಲ್ ಬಡ್ತಿ

ಐಸಿಸಿ ಟ್ವೆಂಟಿ–20 ರ‍್ಯಾಂಕಿಂಗ್‌: ಏಳನೇ ಸ್ಥಾನದಲ್ಲಿ ಕೊಹ್ಲಿ ಸ್ಥಿರ

ಪಿಟಿಐ
Published 15 ಫೆಬ್ರುವರಿ 2021, 13:28 IST
Last Updated 15 ಫೆಬ್ರುವರಿ 2021, 13:28 IST
ಕೆ.ಎಲ್‌.ರಾಹುಲ್‌–ರಾಯಿಟರ್ಸ್ ಚಿತ್ರ
ಕೆ.ಎಲ್‌.ರಾಹುಲ್‌–ರಾಯಿಟರ್ಸ್ ಚಿತ್ರ   

ದುಬೈ: ಭಾರತ ತಂಡದ ಬ್ಯಾಟ್ಸ್‌ಮನ್, ಕನ್ನಡಿಗ ಕೆ.ಎಲ್‌.ರಾಹುಲ್‌ ಐಸಿಸಿ ಟ್ವೆಂಟಿ–20 ಕ್ರಿಕೆಟ್‌ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಬಡ್ತಿ ಪಡೆದಿದ್ದು, ಎರಡನೇ ಸ್ಥಾನಕ್ಕೇರಿದ್ದಾರೆ. ಐಸಿಸಿ ಸೋಮವಾರ ಪ್ರಕಟಿಸಿರುವ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಏಳನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ರಾಹುಲ್ ಬಳಿ ಸದ್ಯ ರೇಟಿಂಗ್‌ 816 ಪಾಯಿಂಟ್‌ಗಳಿವೆ. ಬ್ಯಾಟ್ಸ್‌ಮನ್‌ಗಳ ಪಟ್ಟಿಯ ಮೊದಲ ಸ್ಥಾನದಲ್ಲಿ ಇಂಗ್ಲೆಂಡ್‌ನ ಡೇವಿಡ್ ಮಲಾನ್‌ (915) ಇದ್ದಾರೆ. ಕೊಹ್ಲಿ 697 ಪಾಯಿಂಟ್ಸ್ ಕಲೆಹಾಕಿದ್ದಾರೆ.

ಆಸ್ಟ್ರೇಲಿಯಾದ ಆ್ಯರನ್ ಫಿಂಚ್‌ (808) ಮೂರನೇ ಸ್ಥಾನಕ್ಕೆ ಜಿಗಿದಿದ್ದರೆ, ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ (801) ನಾಲ್ಕನೇ ಸ್ಥಾನಕ್ಕೆ ಜಾರಿದ್ದಾರೆ.

ADVERTISEMENT

ಅಗ್ರ 10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತದ ಆಟಗಾರರಾಗಿ ರಾಹುಲ್ ಮತ್ತು ವಿರಾಟ್ ಮಾತ್ರ ಕಾಣಿಸಿಕೊಂಡಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೇಜ್ ಶಂಸಿ ಜೀವನಶ್ರೇಷ್ಠ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಪಾಕಿಸ್ತಾನದ ವಿರುದ್ಧದ ಸರಣಿಯಲ್ಲಿ ತಬ್ರೇಜ್‌ ಒಟ್ಟು ಆರು ವಿಕೆಟ್‌ ಗಳಿಸಿದ್ದು, ಅವರು ಈ ಸ್ಥಾನ ತಲುಪಲು ಕಾರಣವಾಗಿದೆ. ಈ ಹಂತದಲ್ಲಿ ಅವರು ಆಸ್ಟ್ರೇಲಿಯಾದ ಆ್ಯಡಂ ಜಂಪಾ, ಇಂಗ್ಲೆಂಡ್‌ನ ಆದಿಲ್ ರಶೀದ್‌ ಮತ್ತು ಅಫ್ಗಾನಿಸ್ತಾನದ ಮುಜೀಬುರ್ ರೆಹಮಾನ್ ಅವರನ್ನು ಹಿಂದಿಕ್ಕಿದ್ದಾರೆ. ಈ ವಿಭಾಗದಲ್ಲಿ ಅಫ್ಗಾನಿಸ್ತಾನ ರಶೀದ್‌ಖಾನ್‌ ಅಗ್ರಸ್ಥಾನದಲ್ಲಿದ್ದಾರೆ.

ತಂಡಗಳ ರ‍್ಯಾಂಕಿಂಗ್‌ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.