ADVERTISEMENT

ಜನ್ಮದಿನದ ಶುಭಾಶಯಗಳು ದ್ರಾವಿಡ್: ‘ದಿ ವಾಲ್’ ಆಡಿದ ಅವಿಸ್ಮರಣೀಯ ಇನಿಂಗ್ಸ್‌ಗಳಿವು

Dinesha R
Published 11 ಜನವರಿ 2026, 8:16 IST
Last Updated 11 ಜನವರಿ 2026, 8:16 IST
<div class="paragraphs"><p>ರಾಹುಲ್ ದ್ರಾವಿಡ್</p></div>

ರಾಹುಲ್ ದ್ರಾವಿಡ್

   

ಭಾರತ ಕ್ರಿಕೆಟ್‌ನ ಗೌರವಾನ್ವಿತ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ, ಭಾರತ ಕ್ರಿಕೆಟ್‌ನ ಗೋಡೆ ಎಂದೇ ಹೆಸರುವಾಸಿಯಾಗಿದ್ದ ರಾಹುಲ್ ದ್ರಾವಿಡ್ ಅವರು ಇಂದು (ಜನವರಿ 11) 53ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

1973ರಲ್ಲಿ ಇಂದೋರ್‌ನಲ್ಲಿ ಜನಿಸಿದ ರಾಹುಲ್ ದ್ರಾವಿಡ್ ಅವರು, ತಮ್ಮ ಸ್ಥಿರ ಪ್ರದರ್ಶನದ ಮೂಲಕವೇ ಭಾರತ ಕ್ರಿಕೆಟ್ ತಂಡದ ಖಾಯಂ ಸದಸ್ಯರಾಗಿದ್ದರು. ಮಾತ್ರವಲ್ಲ, ಅವರು ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಕಳಂಕ ಅಂಟಿಸಿಕೊಂಡವರಲ್ಲ, ಶಿಸ್ತು ಮತ್ತು ಶಾಂತತೆಯ ಮೂಲಕ ಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದಾರೆ.

ADVERTISEMENT

ಅವರು, ಭಾರತ ತಂಡದ ಕಷ್ಟದ ಸಂದರ್ಭಗಳಲ್ಲಿ ಕ್ರೀಸ್ ಕಚ್ಚಿ, ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರು. ಆ ಕಾರಣಕ್ಕಾಗಿಯೇ ಅವರಿಗೆ 'ದಿ ವಾಲ್' (ಗೋಡೆ) ಎಂಬ ಬಿರುದು ಬಂದಿದೆ. ದ್ರಾವಿಡ್ ಅವರು ಭಾರತದ ಪರ 164 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 36 ಶತಕಗಳೊಂದಿಗೆ 13,288 ರನ್‌ಗಳನ್ನು ಗಳಿಸಿದ್ದಾರೆ. ಹಾಗೂ ಅನೇಕ ನಿರ್ಣಾಯಕ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸಿದ್ದಾರೆ.

ಟೆಸ್ಟ್ ಮಾತ್ರವಲ್ಲದೆ, ಏಕದಿನದಲ್ಲೂ ಗಮನಾರ್ಹ ಪ್ರದರ್ಶನ ತೋರಿರುವ ಅವರು, 344 ಪಂದ್ಯಗಳಿಂದ 10,889 ರನ್ ಕಲೆಹಾಕಿದ್ದಾರೆ. ಇದರಲ್ಲಿ 12 ಶತಕಗಳು ಹಾಗೂ 83 ಅರ್ಧಶತಕಗಳು ಸೇರಿವೆ.

ದ್ರಾವಿಡ್ ಅವರು, ಆಟಗಾರನಾಗಿ ಮಾತ್ರವಲ್ಲ, ನಿವೃತ್ತಿಯ ಬಳಿಕವೂ ತರಬೇತುದಾರರಾಗಿಯೂ, ಭಾರತ ಎ ಮತ್ತು 19 ವರ್ಷದೊಳಗಿನವರ ತಂಡಗಳನ್ನು ಬಲಪಡಿಸಿದ್ದರು. ಮಾತ್ರವಲ್ಲ, ಭಾರತ ಪುರುಷರ ತಂಡದ ಕೋಚ್ ಆಗಿಯೂ ಯಶಸ್ಸು ಗಳಿಸಿದ್ದಾರೆ. 2023ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಫೈನಲ್ ತಲುಪಿದಾಗ ಹಾಗೂ 2024ರ ಐಸಿಸಿ ಟಿ 20 ವಿಶ್ವಕಪ್ ಟ್ರೋಫಿ ಗೆದ್ದ ಭಾರತ ತಂಡಕ್ಕೆ ಮುಖ್ಯ ತರಬೇತುದಾರರಾಗಿದ್ದರು.

ರಾಹುಲ್ ದ್ರಾವಿಡ್ ಅವಿಸ್ಮರಣೀಯ ಇನಿಂಗ್ಸ್‌ಗಳು

ಇಂಗ್ಲೆಂಡ್ ವಿರುದ್ಧ 95 ರನ್–1996ರಲ್ಲಿ

ಕರ್ನಾಟಕ ತಂಡದ ಪರ ರಣಜಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದ ದ್ರಾವಿಡ್ ಅವರನ್ನು ಮೊದಲ ಬಾರಿಗೆ 1996ರಲ್ಲಿ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಅವರು ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನು ಲಾರ್ಡ್ಸ್‌ನಲ್ಲಿ ಆಡಿದ್ದು, ಅಲ್ಲಿ 95 ರನ್ ಗಳಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ 148 ರನ್

ಜನವರಿ 1997ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ಭಾರತ ತಂಡದ ಪರ ಜೋಹಾನ್ಸ್‌ಬರ್ಗ್‌ ಟೆಸ್ಟ್‌ನಲ್ಲಿ 148 ರನ್ ಗಳಿಸುವ ಮೂಲಕ ಟೆಸ್ಟ್ ವೃತ್ತಿಜೀವನದ ತಮ್ಮ ಮೊದಲ ಶತಕ ಗಳಿಸಿದ್ದರು. ಇದೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲೂ 81 ರನ್ ಗಳಿಸಿ, ಪಂದ್ಯವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆಸ್ಟ್ರೇಲಿಯಾ ವಿರುದ್ಧ 180 ರನ್

ಕಳಪೆ ಫಾರ್ಮ್‌ನಲ್ಲಿದ್ದ ರಾಹುಲ್ ದ್ರಾವಿಡ್ ಅವರು ಬಾರ್ಡರ್–ಗವಾಸ್ಕರ್ ಸರಣಿಯ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಅಮೋಘ ಜೊತೆಯಾಟ ಆಡಿದರು. ಮಾತ್ರವಲ್ಲ, 180 ರನ್‌ ಗಳಿಸುವ ಮೂಲಕ ಫಾಲೋಆನ್‌ಗೆ ಒಳಗಾಗಿದ್ದ ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣರಾದರು.

ಶ್ರೀಲಂಕಾ ವಿರುದ್ಧ 75 ರನ್

ಶ್ರೀಲಂಕಾ ವಿರುದ್ಧ 2002ರಲ್ಲಿ ಕ್ಯಾಂಡಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಚೇಸ್ ಮಾಡುವಾಗ ಕಠಿಣ ಪರಿಸ್ಥಿತಿಯಲ್ಲೂ 75 ರನ್ ಗಳಿಸಿ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು.

ಇಂಗ್ಲೆಂಡ್ ವಿರುದ್ಧ 148 ರನ್

2002ರಲ್ಲಿ ದ್ರಾವಿಡ್ ಅವರು ತಮ್ಮ ಅಮೋಘ ಲಯವನ್ನು ಮುಂದುವರೆಸಿದ್ದರು. ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಪರವಾಗಿ ಹೆಡಿಂಗ್ಲೆಯಲ್ಲಿ ನಡೆದ ಪಂದ್ಯದಲ್ಲಿ 148 ರನ್ ಗಳಿಸುವ ಮೂಲಕ ಭಾರತ ತಂಡದ ಗೆಲುವಿನ ರೂವಾರಿಯಾಗಿದ್ದರು.

ಆಸ್ಟ್ರೇಲಿಯಾ ವಿರುದ್ಧ 233 ರನ್

2003ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ದ್ರಾವಿಡ್ ಅವರು ಅಡಿಲೇಡ್‌ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 233 ರನ್‌ಗಳ ಬೃಹತ್ ಇನಿಂಗ್ಸ್ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 72 ರನ್‌ಗಳಿಸುವ ಮೂಲಕ ಗೆಲುವಿನ ರೂವಾರಿಯಾಗಿದ್ದರು. ಇದು ಅವರ ವೃತ್ತಿಜೀವನದ ಅವಿಸ್ಮರಣೀಯ ಇನಿಂಗ್ಸ್‌ಗಳಲ್ಲಿ ಒಂದಾಗಿದೆ.

ಪಾಕಿಸ್ತಾನದ ವಿರುದ್ಧ 270 ರನ್

2004ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಭಾರತ ತಂಡ ಸರಣಿಯಲ್ಲಿ 1–1ರಿಂದ ಸಮಬಲ ಸಾಧಿಸಿತ್ತು. ಸರಣಿ ವಶಪಡಿಸಿಕೊಳ್ಳುವ ನಿರ್ಣಾಯಕ ಪಂದ್ಯದಲ್ಲಿ ದ್ರಾವಿಡ್ ಅವರು 270 ರನ್ ಗಳಿಸುವ ಮೂಲಕ ಗೆಲುವಿನ ರೂವಾರಿಯಾಗಿದ್ದರು. ಆ ಮೂಲಕ ಭಾರತ ಸರಣಿಯನ್ನು 2–1ರಿಂದ ವಶಪಡಿಸಿಕೊಂಡಿತ್ತು. ಈ ಪಂದ್ಯ ರಾವಲ್ಪಿಂಡಿಯಲ್ಲಿ ನಡೆದಿತ್ತು.

ಇಂಗ್ಲೆಂಡ್ ವಿರುದ್ಧ ಅಜೇಯ 103 ರನ್– ಲಾರ್ಡ್ಸ್

ದ್ರಾವಿಡ್ ಅವರಿಗೆ ಲಾರ್ಡ್ಸ್ ಮೈದಾನದಲ್ಲಿ ಶತಕ ಗಳಿಸುವ ಕನಸು ನೆರವೇರಿದ್ದು 2011ರಲ್ಲಿ. ಈ ಪಂದ್ಯವನ್ನು ಭಾರತ ತಂಡ ಸೋತರೂ, ದ್ರಾವಿಡ್ ಅವರು ಅಮೋಘ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು.

ಶ್ರೀಲಂಕಾ ವಿರುದ್ಧ ಏಕದಿನ ವಿಶ್ವಕಪ್‌ನಲ್ಲಿ 145 ರನ್

1999ರಲ್ಲಿ ನಿಗದಿತ ಓವರ್‌ಗಳ ಆಟಗಾರನಾಗಿ ತನ್ನ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ದ್ರಾವಿಡ್, ಟೌಂಟನ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಲಂಕನ್ ಲಯನ್ಸ್ ಎದುರು 145 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು.

ನ್ಯೂಜಿಲೆಂಡ್ ವಿರುದ್ಧ ಸ್ಫೋಟಕ 50 ರನ್

ನಿಧಾನಗತಿಯ ಆಟಗಾರರಾಗಿದ್ದ ರಾಹುಲ್ ದ್ರಾವಿಡ್ ಅವರು, 2003ರಲ್ಲಿ ನ್ಯೂಜಿಲೆಂಡ್ ವಿರುದ್ಧದ ತ್ರಿಕೋನ ಏಕದಿನ ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅವರು ಕೇವಲ 22 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ಇದು ಅವರ ಅವಿಸ್ಮರಣೀಯ ಇನಿಂಗ್ಸ್‌ಗಳಲ್ಲಿ ಒಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.