ADVERTISEMENT

IPL: ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆ ತೊರೆದ ರಾಹುಲ್ ದ್ರಾವಿಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2025, 10:18 IST
Last Updated 30 ಆಗಸ್ಟ್ 2025, 10:18 IST
<div class="paragraphs"><p>ರಾಹುಲ್ ದ್ರಾವಿಡ್</p></div>

ರಾಹುಲ್ ದ್ರಾವಿಡ್

   

(ಎಕ್ಸ್‌ ಚಿತ್ರ)

ರಾಹುಲ್ ದ್ರಾವಿಡ್ ಅವರು, ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆ ತೊರೆದಿದ್ದಾರೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಮುಂಚಿತವಾಗಿ ರಾಜಸ್ಥಾನ ರಾಯಲ್ಸ್ ತಂಡದಿಂದ ದ್ರಾವಿಡ್ ಬೇರ್ಪಟ್ಟಿರುವುದಾಗಿ ಫ್ರಾಂಚೈಸಿ ಇಂದು (ಶನಿವಾರ) ದೃಢಪಡಿಸಿದೆ.

ADVERTISEMENT

2024ರ ಸೆಪ್ಟೆಂಬರ್ 6ರಂದು ರಾಹುಲ್‌ ಅವರು ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದರು.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಾಜಸ್ಥಾನ ರಾಯಲ್ಸ್‌, 'ನಿಮ್ಮ ಉಪಸ್ಥಿತಿಯು ಯುವಕರು ಮತ್ತು ಅನುಭವಿ ಇಬ್ಬರಿಗೂ ಸ್ಫೂರ್ತಿ ನೀಡಿತ್ತು' ಎಂದು ಹೇಳಿದೆ.

'ರಾಹುಲ್ ಹಲವು ವರ್ಷ ರಾಯಲ್ಸ್ ಪಯಣದ ಕೇಂದ್ರವಾಗಿದ್ದರು. ಅವರ ನೇತೃತ್ವವು  ತಲೆಮಾರುಗಳ ಆಟಗಾರರನ್ನು ಪ್ರಭಾವಿಸಿದೆ. ತಂಡದೊಳಗೆ ಮೌಲ್ಯವನ್ನು ಬಿತ್ತಿದೆ ಮತ್ತು ಫ್ರಾಂಚೈಸಿಯ ಸಂಸ್ಕೃತಿಯ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ'.

'ರಾಹುಲ್ ಅವರಿಗೆ ದೊಡ್ಡ ಹುದ್ದೆಯನ್ನು ನೀಡಲು ನಿರ್ಧರಿಸಲಾಗಿತ್ತು. ಆದರೆ ಅವರು ಆ ಜವಾಬ್ದಾರಿಯನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ'.

'ಫ್ರಾಂಚೈಸಿಗೆ ಅವರು ನೀಡಿದ ಗಮನಾರ್ಹ ಕೊಡುಗೆಗಾಗಿ ರಾಜಸ್ಥಾನ ರಾಯಲ್ಸ್, ಅದರ ಆಟಗಾರರು ಮತ್ತು ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಅಭಿಮಾನಿಗಳು ಹೃತ್ಪೂರ್ವಕ ಧನ್ಯವಾದ ಅರ್ಪಿಸುತ್ತಾರೆ' ಎಂದೂ ಫ್ರಾಂಚೈಸಿ ಪೋಸ್ಟ್‌ನಲ್ಲಿ ತಿಳಿಸಿದೆ.

ನಾಯಕ ಸಂಜು ಸ್ಯಾಮ್ಸನ್‌ ಅವರೂ ರಾಯಲ್ಸ್‌ ತಂಡದಿಂದ ಹೊರನಡೆಯಲಿದ್ದಾರೆ ಎಂಬ ಮಾತುಗಳ ನಡುವೆಯೇ ಫ್ರಾಂಚೈಸಿಯು ಈ ಪ್ರಕಟಣೆ ನೀಡಿದೆ.

ಸ್ಯಾಮ್ಸನ್ ಸಹ ರಾಯಲ್ಸ್ ತಂಡ ತೊರೆದರೆ, ಮಿನಿ ಆಕ್ಷನ್‌ಗೆ ಮೊದಲೇ ಫ್ರಾಂಚೈಸಿಯು ಇಕ್ಕಟ್ಟಿಗೆ ಸಿಲುಕಲಿದೆ.

ಐಪಿಎಲ್‌ನ 18ನೇ ಆವೃತ್ತಿಯಲ್ಲಿ (2025) ಕಾಲು ನೋವಿನ ಮಧ್ಯೆಯೂ ಅವರು ಬ್ಯಾಂಡೇಜ್‌ ಸುತ್ತಿಕೊಂಡೇ ತಂಡಕ್ಕೆ ತರಬೇತಿ ನೀಡಿದ್ದರು. ಆದಾಗ್ಯೂ ರಾಜಸ್ಥಾನ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ರಾಹುಲ್‌ ಮಾರ್ಗದರ್ಶನದಲ್ಲಿ, ರಾಜಸ್ಥಾನ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆಲುವು ಸಾಧಿಸಿತ್ತು. ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.