ADVERTISEMENT

ರೋಹಿತ್ ಸ್ಥಾನವನ್ನು ರಾಹುಲ್‌ ತುಂಬಬಲ್ಲರು: ಮ್ಯಾಕ್ಸ್‌ವೆಲ್‌

ಪಿಟಿಐ
Published 20 ನವೆಂಬರ್ 2020, 10:29 IST
Last Updated 20 ನವೆಂಬರ್ 2020, 10:29 IST
ಗ್ಲೆನ್ ಮ್ಯಾಕ್ಸ್‌ವೆಲ್‌–ರಾಯಿಟರ್ಸ್ ಚಿತ್ರ
ಗ್ಲೆನ್ ಮ್ಯಾಕ್ಸ್‌ವೆಲ್‌–ರಾಯಿಟರ್ಸ್ ಚಿತ್ರ   

ಮುಂಬೈ: ಮುಂಬರುವ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಅವರ ಅನುಪಸ್ಥಿತಿಯಿಂದ ಆಸ್ಟ್ರೇಲಿಯಾಕ್ಕೆ ಅನುಕೂಲವಾಗಲಿದೆ. ಆದರೆ ಕೆ.ಎಲ್‌.ರಾಹುಲ್ ಅವರು ರೋಹಿತ್‌ ಸ್ಥಾನವನ್ನು ತುಂಬಬಲ್ಲರು ಎಂದು ಆಸ್ಟ್ರೇಲಿಯಾ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಗ್ಲೆನ್‌ ಮ್ಯಾಕ್ಸ್‌ವೆಲ್ ಅಭಿಪ್ರಾಯಪಟ್ಟಿದ್ದಾರೆ.

ಕಾಂಗರೂ ಪಡೆಯ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ರಾಹುಲ್‌ ಉಪನಾಯಕನ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಈ ಸ್ಥಾನದಲ್ಲಿದ್ದ ರೋಹಿತ್‌ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್) ಟೂರ್ನಿಯಲ್ಲಿ ಗಾಯಗೊಂಡಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

‘ರೋಹಿತ್‌ ಅವರು ಏಕದಿನ ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಸ್ಥಿರ ಹಾಗೂ ಶ್ರೇಷ್ಠ ಆಟವಾಡುತ್ತಿದ್ದಾರೆ. ಈ ಮಾದರಿಯಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ್ದಾರೆ. ಹೀಗಾಗಿ ಅವರು ತಂಡದಲ್ಲಿ ಇಲ್ಲದಿರುವುದು ನಮಗೆ ಸಕಾರಾತ್ಮಕ ಅಂಶ. ಆದರೆ ಅವರ ಕೊರತೆಯನ್ನು ಕೆ.ಎಲ್‌.ರಾಹುಲ್‌ ನೀಗಿಸಬಲ್ಲರು‘ ಎಂದು ಕ್ರೀಡಾ ವಾಹಿನಿಯೊಂದಕ್ಕೆ ಮ್ಯಾಕ್ಸ್‌ವೆಲ್‌ ಹೇಳಿದ್ದಾರೆ.

ADVERTISEMENT

ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ನವೆಂಬರ್‌ 27ರಂದು ಆರಂಭವಾಗಲಿದೆ. ಆ ಬಳಿಕ ಮೂರು ಟ್ವೆಂಟಿ–20 ಪಂದ್ಯಗಳು ಆಯೋಜನೆಯಾಗಿವೆ.

‘ಹೋದ ಐಪಿಎಲ್‌ನಲ್ಲಿ ಕೆ.ಎಲ್‌.ರಾಹುಲ್‌ ಅತ್ಯುತ್ತಮ ಸಾಮರ್ಥ್ಯ ತೋರಿದ್ದನ್ನು ನಾವು ಕಂಡಿದ್ದೇವೆ. ಆರಂಭಿಕ ಅಥವಾ ಯಾವುದೇ ಕ್ರಮಾಂಕದಲ್ಲಿ ಆಡಲಿ ಅವರೊಬ್ಬ ಉತ್ತಮ ಆಟಗಾರ‘ ಎಂದು ಮ್ಯಾಕ್ಸ್‌ವೆಲ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ರೋಹಿತ್‌ ಅನುಪಸ್ಥಿತಿಯಲ್ಲಿ ಶಿಖರ್‌ ಧವನ್‌ ಅವರೊಂದಿಗೆ ಮಯಂಕ್ ಅಗರವಾಲ್‌ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ವಿಕೆಟ್‌ ಕೀಪಿಂಗ್‌ ಹೊಣೆ ನಿಭಾಯಿಸುವ ರಾಹುಲ್‌ ಅವರು ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ.

‘ಮಯಂಕ್‌–ರಾಹುಲ್‌ ನಾನು ಕಂಡ ಶ್ರೇಷ್ಠ ಆರಂಭಿಕ ಜೋಡಿ. ಐಪಿಎಲ್‌ ಟೂರ್ನಿಯಲ್ಲಿ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದು ಖುಷಿಯ ಸಂಗತಿ‘ ಎಂದೂ ಮ್ಯಾಕ್ಸ್‌ವೆಲ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.