ADVERTISEMENT

ಏಕದಿನ ಕ್ರಿಕೆಟ್: ಅಹಮದಾಬಾದ್‌ನಲ್ಲಿ ಭಾರತ–ವೆಸ್ಟ್ ಇಂಡೀಸ್ ಎರಡನೇ ಹಣಾಹಣಿ ಇಂದು

ಪಿಟಿಐ
Published 9 ಫೆಬ್ರುವರಿ 2022, 5:31 IST
Last Updated 9 ಫೆಬ್ರುವರಿ 2022, 5:31 IST
ಅಭ್ಯಾಸದ ನಡುವೆ ರೋಹಿತ್ ಶರ್ಮಾ ಬಳಗ –ಎಎಫ್‌ಪಿ ಚಿತ್ರಗಳು
ಅಭ್ಯಾಸದ ನಡುವೆ ರೋಹಿತ್ ಶರ್ಮಾ ಬಳಗ –ಎಎಫ್‌ಪಿ ಚಿತ್ರಗಳು   

ಅಹಮದಾಬಾದ್: ವೆಸ್ಟ್ ಇಂಡೀಸ್ ಎದುರಿನ ಏಕದಿನ ಕ್ರಿಕೆಟ್ ಸರಣಿ ಕೈವಶದ ಮೇಲೆ ಕಣ್ಣಿಟ್ಟಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬುಧವಾರ ಕೆ.ಎಲ್.ರಾಹುಲ್ ಜೊತೆಗೆ ಇನಿಂಗ್ಸ್ ಆರಂಭಿಸುವರೇ?

ದಕ್ಷಿಣ ಆಫ್ರಿಕಾ ಪ್ರವಾಸದಿಂದ ಮರಳಿದ ನಂತರ ವಿಶ್ರಾಂತಿ ಪಡೆದಿದ್ದ ರಾಹುಲ್ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಆ ಪಂದ್ಯದಲ್ಲಿ ರೋಹಿತ್ ಅವರು ಇಶಾನ್ ಕಿಶನ್ ಜೊತೆಗೂಡಿ ಇನಿಂಗ್ಸ್ ಆರಂಭಿಸಿದ್ದರು.

ಸಾಧಾರಣ ಮೊತ್ತ ಗುರಿಯನ್ನು ಬೆನ್ನತ್ತಲು ಉತ್ತಮ ಆರಂಭ ನೀಡಿದ್ದರು. ಆದ್ದರಿಂದ ಇಶಾನ್ ಸ್ಥಾನ ಉಳಿಸಿಕೊಳ್ಳಬಹುದು. ಆದರೆ ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಗಬಹುದು.

ADVERTISEMENT

ಮೊದಲ ಪಂದ್ಯದಲ್ಲಿ ಆಡಿದ್ದ ಸೂರ್ಯಕುಮಾರ್ ಯಾದವ್ ಅಥವಾ ದೀಪಕ್ ಹೂಡಾ ಅವರಲ್ಲಿ ಒಬ್ಬರಿಗೆ ವಿಶ್ರಾಂತಿ ನೀಡಬಹುದು.

ಕಳೆದ ಎರಡು ವರ್ಷದಿಂದ ಶತಕ ದಾಖಲಿಸುವಲ್ಲಿ ವಿಫಲರಾಗಿರುವ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಾದರೂ ಮೂರಂಕಿ ಮೊತ್ತ ದಾಖಲಿಸುವರೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಕಳೆದ ಪಂದ್ಯದಲ್ಲಿ ಅವರು ಎಂಟು ರನ್ ಗಳಿಸಿದ್ದರು.

ಆದರೆ ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ. ಸ್ಪಿನ್ ಜೋಡಿ ಯಜುವೇಂದ್ರ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಮೊದಲ ಪಂದ್ಯದಲ್ಲಿ ಎದುರಾಳಿ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದರು.

ಕನ್ನಡಿಗ ಪ್ರಸಿದ್ಧ ಕೃಷ್ಣ ಕೂಡ ಮಹತ್ವದ ಸಮಯದಲ್ಲಿ ಜೊತೆಯಾಟ ಮುರಿದು ವಿಂಡೀಸ್ ಬಳಗಕ್ಕೆ ಆಘಾತ ನೀಡುವಲ್ಲಿ ಸಫಲರಾಗಿದ್ದರು.ತನ್ನ ತವರಿನಲ್ಲಿ ಇಂಗ್ಲೆಂಡ್ ಎದುರು ಮಿಂಚಿ ಬಂದಿದ್ದ ವಿಂಡೀಸ್ ಇಲ್ಲಿ ಮಂಕಾಯಿತು. ಸ್ಪಿನ್ ದಾಳಿಯನ್ನು ಎದುರಿಸುವಲ್ಲಿ ವೈಫಲ್ಯ ಅನುಭ ವಿಸಿತು.

ಆಲ್‌ರೌಂಡರ್ ಜೇಸನ್ ಹೋಲ್ಡರ್ ಮಾತ್ರ ಅರ್ಧಶತಕ ಗಳಿಸುವಲ್ಲಿ ಸಫಲರಾದರು. ಬೌಲಿಂಗ್ ವಿಭಾಗದಲ್ಲಿ ಅಲ್ಜರಿ ಜೋಸೆಫ್ ಅವರನ್ನು ಬಿಟ್ಟರೆ ಉಳಿದವರು ಯಾರೂ ಪರಿಣಾಮಕಾರಿಯಾಗಲಿಲ್ಲ.ಮೂರು ಪಂದ್ಯಗಳ ಸರಣಿಯಲ್ಲಿ ಜಯ ಖಚಿತಪಡಿಸಿಕೊಳ್ಳಲು ಈ ಪಂದ್ಯ ದಲ್ಲಿ ಜಯಸಾಧಿಸುವತ್ತ ಆತಿಥೇಯರು ಚಿತ್ತ ನೆಟ್ಟಿದ್ದಾರೆ. ಆದರೆ ಎರಡನೇ ಪಂದ್ಯದಲ್ಲಿ ಗೆದ್ದು ತನ್ನ ಅವಕಾಶವನ್ನು ಉಳಿಸಿಕೊಳ್ಳಲು ವಿಂಡೀಸ್ ಕಠಿಣ ಪೈಪೋಟಿಯೊಡ್ಡುವ ಛಲದಲ್ಲಿದೆ.

ತಂಡಗಳು:ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಮಯಂಕ್ ಅಗರವಾಲ್, ಋತುರಾಜ್ ಗಾಯಕವಾಡ, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ರಿಷಭ್ ಪಂತ್ (ವಿಕೆಟ್‌ಕೀಪರ್), ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಆವೇಶ್ ಖಾನ್, ಶಾರೂಕ್ ಖಾನ್.

ವೆಸ್ಟ್ ಇಂಡೀಸ್: ಕೀರನ್ ಪೊಲಾರ್ಡ್ (ನಾಯಕ), ಫ್ಯಾಬಿಯನ್ ಅಲೆನ್, ಎನ್‌ಕ್ರುಮಾ ಬಾನೆರ್, ಡೆರೆನ್ ಬ್ರಾವೊ, ಶಾಮ್ರಾ ಬ್ರೂಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೀಲ್ ಹುಸೇನ್, ಅಲ್ಜರಿ ಜೋಸೆಫ್, ಬ್ರೆಂಡನ್ ಕಿಂಗ್, ನಿಕೋಲಸ್ ಪೂರನ್, ಕೆಮರ್ ರೋಚ್, ರೊಮೆರಿಯೊ ಶೆಫರ್ಡ್, ಒಡಿಯನ್ ಸ್ಮಿತ್, ಹೇಡನ್ ವಾಲ್ಶ್‌ ಜೂನಿಯರ್.

ಪಂದ್ಯ ಆರಂಭ: ಮಧ್ಯಾಹ್ನ 1.30; ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.