ADVERTISEMENT

ರಣಜಿ ಟ್ರೋಫಿ ಕ್ರಿಕೆಟ್: ಮನೀಷ್ ಬಳಗಕ್ಕೆ ರೈಲ್ವೇಸ್ ದಿಟ್ಟ ಉತ್ತರ

ಆಲ್‌ರೌಂಡ್ ಆಟದ ಮೂಲಕ ಮಿಂಚಿದ ಗೌತಮ್‌; ಯುವರಾಜ್‌ಗೆ 5 ವಿಕೆಟ್‌

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 14:25 IST
Last Updated 18 ಫೆಬ್ರುವರಿ 2022, 14:25 IST
ಕೃಷ್ಣಪ್ಪ ಗೌತಮ್ –ಪ್ರಜಾವಾಣಿ ಚಿತ್ರ
ಕೃಷ್ಣಪ್ಪ ಗೌತಮ್ –ಪ್ರಜಾವಾಣಿ ಚಿತ್ರ   

ಚೆನ್ನೈ: ಆರಂಭಿಕ ಆಟಗಾರರ ಶತಕದ ಜೊತೆಯಾಟ ಮತ್ತು ಮಧ್ಯಮ ಕ್ರಮಾಂಕದ ಅರಿಂದಂ ಘೋಷ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ರೈಲ್ವೇಸ್ ತಂಡ ಕರ್ನಾಟಕಕ್ಕೆ ತಿರುಗೇಟು ನೀಡುವ ಹಾದಿಯಲ್ಲಿದೆ.

ಇಲ್ಲಿನ ಗುರುನಾನಕ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಎಲೀಟ್ ’ಸಿ‘ ಗುಂಪಿನ ಪಂದ್ಯದಲ್ಲಿ ಕರ್ನಾಟಕದ ಮೊದಲ ಇನಿಂಗ್ಸ್ ಮೊತ್ತವಾದ 481 ರನ್‌ಗಳಿಗೆ ಉತ್ತರಿಸಿರುವ ರೈಲ್ವೇಸ್ ಎರಡನೇ ದಿನದಾಟದ ಮುಕ್ತಾಯಕ್ಕೆ 3 ವಿಕೆಟ್‌ಗಳಿಗೆ 213 ರನ್ ಗಳಿಸಿದೆ. 268 ರನ್‌ಗಳ ಹಿನ್ನಡೆಯಲ್ಲಿದೆ.

ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳನ್ನು ಬಳಸಿಕೊಂಡ ಕರ್ನಾಟಕದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ರೈಲ್ವೆ ಬ್ಯಾಟರ್‌ಗಳು ದಿಟ್ಟವಾಗಿ ಬ್ಯಾಟ್ ಬೀಸಿ ರನ್ ಕಲೆ ಹಾಕಿದರು.

ADVERTISEMENT

ಮೃಣಾಲ್ ದೇವಧರ್‌ (56; 78 ಎಸೆತ, 10 ಬೌಂಡರಿ) ಮತ್ತು ವಿವೇಕ್ ಸಿಂಗ್ (59; 174 ಎ, 10 ಬೌಂ) ಮೊದಲ ವಿಕೆಟ್‌ಗೆ 110 ರನ್ ಸೇರಿಸಿದರು. ನಾಲ್ಕನೇ ಕ್ರಮಾಂಕದ ಅರಿಂದಂ ಘೋಷ್ (78; 108 ಎ, 12 ಬೌಂ, 1 ಸಿಕ್ಸರ್‌) ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಆರಂಭದ ಬ್ಯಾಟರ್‌ಗಳು 28ನೇ ಓವರ್‌ಗಳ ವರೆಗೆ ಕ್ರೀಸ್‌ನಲ್ಲಿ ಉಳಿದು ಕರ್ನಾಟಕದ ಬೌಲರ್‌ಗಳನ್ನು ಕಾಡಿದರು. ವಿಕೆಟ್ ಕೀಪರ್ ಸಿದ್ಧಾರ್ಥ್‌ ಮೂಲಕಮೃಣಾಲ್ ಅವರ ವಿಕೆಟ್ ಉರುಳಿಸಿದ ಗೌತಮ್ ತಂಡಕ್ಕೆ ಮೊದಲ ಯಶಸ್ಸು ಗಳಿಸಿಕೊಟ್ಟರು. ಒಂದು ಸಿಕ್ಸರ್‌ನೊಂದಿಗೆ ಎಂಟು ಎಸೆತಗಳಲ್ಲಿ ಎಂಟು ರನ್ ಗಳಿಸಿದ ಶಿವಂ ಚೌಧರಿ 30ನೇ ಓವರ್‌ನಲ್ಲಿ ವಾಪಸ್ ಮರಳಿದರು. ಈ ವಿಕೆಟ್ ಕೂಡ ಗೌತಮ್ ಪಾಲಾಯಿತು.

ನಂತರ ವಿವೇಕ್ ಸಿಂಗ್ ಜೊತೆಗೂಡಿದ ಅರಿಂದಂ ಘೋಷ್ ಅವರು ಅಮೋಘ ಆಟವಾಡಿದರು. ಇಬ್ಬರೂ 80 ರನ್‌ಗಳನ್ನು ಸೇರಿಸಿದರು. ಶಾಂತಚಿತ್ತರಾಗಿ ದಾಳಿ ಎದುರಿಸಿದ ವಿವೇಕ್ 174 ಎಸೆತಗಳಲ್ಲಿ 59 ರನ್ ಗಳಿಸಿದರು. ಅರಿಂದಂ ಸ್ವಲ್ಪ ವೇಗವಾಗಿಯೇ ರನ್ ಕಲೆಹಾಕಲು ಮುಂದಾದರು. 60ನೇ ಓವರ್‌ನಲ್ಲಿ ವಿವೇಕ್ ಸಿಂಗ್‌ ಅವರನ್ನು ವಾಪಸ್ ಕಳುಹಿಸಿದ ಗೌತಮ್ ಮೂರೂ ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು.

ಬ್ಯಾಟಿಂಗ್‌ನಲ್ಲೂ ಗೌತಮ್ ಮಿಂಚು
ಗುರುವಾರ ಭರ್ಜರಿ ಬ್ಯಾಟಿಂಗ್ ಮೂಲಕ 392 ರನ್ ಗಳಿಸಿದ್ದ ಕರ್ನಾಟಕ ತಂಡವನ್ನು ಶುಕ್ರವಾರ ರೈಲ್ವೇಸ್ ಬೌಲರ್‌ಗಳು ಪೆಟ್ಟು ನೀಡಿದರು. ಐದು ವಿಕೆಟ್ ಉರುಳಿಸಿದ ಮಧ್ಯಮ ವೇಗಿ ಯುವರಾಜ್ ಸಿಂಗ್ ದಾಳಿಗೆ ಮನೀಷ್ ಪಾಂಡೆ ಬಳಗದ ಮಧ್ಯಮ ಕ್ರಮಾಂಕ ಮತ್ತು ಬಾಲಂಗೋಚಿಗಳು ನಡುಗಿದರು.

ಕೃಷ್ಣಪ್ಪ ಗೌತಮ್ ಒಬ್ಬರೇ ದಿಟ್ಟ ಬ್ಯಾಟಿಂಗ್ ಮಾಡಿದರು. 32 ಎಸೆತಗಳಲ್ಲಿ ತಲಾ ನಾಲ್ಕು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿದ ಅವರು 52 ರನ್‌ ಗಳಿಸಿ ತಂಡ ಉತ್ತಮ ಮೊತ್ತ ಸೇರಿಸಲು ನೆರವಾದರು.

ಸ್ಕೋರ್ ಕಾರ್ಡ್‌
ಕರ್ನಾಟಕ, ಮೊದಲ ಇನಿಂಗ್ಸ್‌ 481 (109.3 ಓವರ್‌)
(ಗುರುವಾರ 90 ಓವರ್‌ಗಳಲ್ಲಿ 5ಕ್ಕೆ 392)
ಸಿದ್ಧಾರ್ಥ್‌ ಸಿ ಚೌಧರಿ ಬಿ ಯುವರಾಜ್ 146 (250 ಎ, 4x18, 6x2)
ಶ್ರೇಯಸ್ ಸಿ ಯಾದವ್ ಬಿ ಅಮಿತ್‌ 19 (50 ಎ, 4x3)
ಗೌತಮ್‌ ಸಿ ಯಾದವ್ ಬಿ ಯುವರಾಜ್‌ 52 (32 ಎ, 4x4, 6x4)
ವೈಶಾಖ್‌ ಸಿ ಯಾದವ್ ಬಿ ಯುವರಾಜ್‌ 0 (5 ಎ)
ವಿದ್ಯಾಧರ್‌ ಸಿ ಯಾದವ್ ಬಿ ಯುವರಾಜ್ 4 (11 ಎ, 4x1)
ರೋನಿತ್ ಔಟಾಗದೆ 8 (7 ಎ, 4x2)

ಇತರೆ:(ಲೆಗ್‌ಬೈ 5, ನೋಬಾಲ್ 1, ವೈಡ್ 1) 7

ವಿಕೆಟ್ ಪತನ:6-409 (ಕೆ.ವಿ.ಸಿದ್ಧಾರ್ಥ್‌, 99.2), 7-417 (ಶ್ರೇಯಸ್ ಗೋಪಾಲ್‌, 100.3), 8-424 (ವೈಶಾಖ್‌ ವಿಜಯಕುಮಾರ್‌, 101.5), 9-438 (ವಿದ್ಯಾಧರ ಪಾಟೀಲ, 105.2), 10-481 (ಗೌತಮ್‌, 109.3)

ಬೌಲಿಂಗ್‌
ಅಮಿತ್ ಮಿಶ್ರಾ 27–6–97–1, ಹಿಮಾಂಶು ಸಾಂಗ್ವಾನ್ 21–0–7–0, ಯುವರಾಜ್ ಸಿಂಗ್ 27.3–6–93–5, ಅವಿನಾಶ್ ಯಾದವ್27.5–2–156–1, ಕರ್ಣ ಶರ್ಮಾ14–1–75–0, ಶಿವಂ ಚೌಧರಿ6.5–1–22–2, ಮೊಹಮ್ಮದ್ ಸೈಫ್‌4.1–0–26–0

***

ರೈಲ್ವೇಸ್‌, ಮೊದಲ ಇನಿಂಗ್ಸ್‌ 3ಕ್ಕೆ213 (65 ಓವರ್‌)
ಮೃಣಾಲ್ ಸಿ ಶರತ್‌ ಬಿ ಗೌತಮ್‌ 56 (78 4x10)
ವಿಕೇಕ್‌ ಸಿ ಶರತ್‌ ಬಿ ಗೌತಮ್‌ 59 (174 ಎ, 4x10)
ಶಿವಂ ಸಿ ಪಡಿಕ್ಕಲ್‌ ಬಿ ಗೌತಮ್‌ 8 (8 ಎ, 6x1)
ಅರಿಂದಂ ಬ್ಯಾಟಿಂಗ್ 78 (108 ಎ, 4x12, 6x1)
ಸೈಫ್‌ ಬ್ಯಾಟಿಂಗ್ 8 (23 ಎ, 4x1)

ಇತರೆ:(ಲೆಗ್‌ಬೈ 2, ನೋಬಾಲ್‌ 1, ವೈಡ್‌ 1) 4

ವಿಕೆಟ್ ಪತನ
1-110 (ಮೃಣಾಲ್ ದೆವಧರ್‌, 27.4), 2-118 (ಶಿವಂ ಚೌಧರಿ, 29.6), 3-198 (ವಿವೇಕ್ ಸಿಂಗ್‌, 59.1)

ಬೌಲಿಂಗ್
ವೈಶಾಖ್ ವಿಜಯಕುಮಾರ್ 12–2–43–0, ವಿದ್ಯಾಧರ್ ಪಾಟೀಲ್8–1–30–0, ಕೃಷ್ಣಪ್ಪ ಗೌತಮ್22–5–71–3, ರೋನಿತ್ ಮೋರೆ13–4–42–0, ಶ್ರೇಯಸ್ ಗೋಪಾಲ್10–1–25–0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.