ADVERTISEMENT

ರಣಜಿ ಟ್ರೋಫಿ: ಕರ್ನಾಟಕ vs ಚಂಡೀಗಡ; ಎರಡನೇ ಜಯದ ಮೇಲೆ ಮಯಂಕ್‌ ಪಡೆ ಕಣ್ಣು

ಸತೀಶ ಬಿ.
Published 16 ನವೆಂಬರ್ 2025, 0:22 IST
Last Updated 16 ನವೆಂಬರ್ 2025, 0:22 IST
<div class="paragraphs"><p>ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ಚಂಡೀಗಡ ತಂಡಗಳ ನಡುವೆ ಭಾನುವಾರ ರಣಜಿ ಪಂದ್ಯ ಆರಂಭವಾಗಲಿದ್ದು, ಕರ್ನಾಟಕ ತಂಡದ ನಾಯಕ ಮಯಂಕ್‌ ಅಗರವಾಲ್ ಶನಿವಾರ ಅಭ್ಯಾಸ ನಡೆಸಿದರು</p></div>

ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ಚಂಡೀಗಡ ತಂಡಗಳ ನಡುವೆ ಭಾನುವಾರ ರಣಜಿ ಪಂದ್ಯ ಆರಂಭವಾಗಲಿದ್ದು, ಕರ್ನಾಟಕ ತಂಡದ ನಾಯಕ ಮಯಂಕ್‌ ಅಗರವಾಲ್ ಶನಿವಾರ ಅಭ್ಯಾಸ ನಡೆಸಿದರು

   

ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿ: ಇಲ್ಲಿನ ರಾಜನಗರದ ನೃಪತುಂಗ ಬೆಟ್ಟದ ತಪ್ಪಲಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣ, ಒಂದೂವರೆ ವರ್ಷದ ನಂತರ ರಣಜಿ ಪಂದ್ಯಕ್ಕೆ ಸಜ್ಜುಗೊಂಡಿದೆ. ಭಾನುವಾರ ಇಲ್ಲಿ ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಎಲೀಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವು ಚಂಡೀಗಡ ತಂಡವನ್ನು ಎದುರಿಸಲಿದೆ. ಎರಡನೇ ಜಯದ ಮೇಲೆ ಕಣ್ಣಿಟ್ಟಿದೆ.

ADVERTISEMENT

ಮಯಂಕ್ ಅಗರವಾಲ್‌ ನಾಯಕತ್ವದ ಆತಿಥೇಯ ತಂಡವು ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಜಯ ಗಳಿಸಿದ್ದು, ಮೂರು ಡ್ರಾ ಆಗಿವೆ. ಅಂಕ ಪಟ್ಟಿಯಲ್ಲಿ 14 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮಧ್ಯಪ್ರದೇಶ ತಂಡ 15 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಚಂಡೀಗಡ ಎದುರಿನ ಪಂದ್ಯದ ಬಳಿಕ ಎರಡು ತಿಂಗಳು (ಈ ಅವಧಿಯಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ20 ಹಾಗೂ ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳು ನಡೆಯಲಿವೆ) ಬಿಡುವು ಇದ್ದು, ಆ ನಂತರ ಮಧ್ಯಪ್ರದೇಶ, ಪಂಜಾಬ್‌ ತಂಡಗಳನ್ನು ಎದುರಿಸಬೇಕಿದೆ. ಹೀಗಾಗಿ ಈ ಪಂದ್ಯ ಗೆದ್ದು ಪೂರ್ಣ ಅಂಕ ಗಳಿಸುವತ್ತ ಮಯಂಕ್ ಪಡೆ ಚಿತ್ತ ನೆಟ್ಟಿದೆ.

ಮಯಂಕ್ ಅಗರವಾಲ್ ಲಯಕ್ಕೆ ಮರಳಿದ್ದು, ಮಹಾರಾಷ್ಟ್ರ ಎದುರಿನ ಪಂದ್ಯದಲ್ಲಿ ತಲಾ ಒಂದು ಅರ್ಧಶತಕ, ಶತಕ (80, 103 ರನ್‌) ಬಾರಿಸಿದ್ದರು. ಈ ಪಂದ್ಯದಲ್ಲಿಯೂ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ. ಅವರ ಜತೆ ನಿಕಿನ್ ಜೋಸ್‌ ಇನಿಂಗ್ಸ್‌ ಆರಂಭಿಸಿದರೆ ಅನೀಶ್‌ ಕೆ.ವಿ ಹೊರಗುಳಿಯಬೇಕಾಗುತ್ತದೆ.

ಕಳೆದ ಪಂದ್ಯದಲ್ಲಿ ಶ್ರೇಯಸ್‌ ಗೋಪಾಲ್ ಅರ್ಧಶತಕ (71 ರನ್‌) ಮತ್ತು 4 ವಿಕೆಟ್ ಪಡೆದು ಮಿಂಚಿದ್ದರು. ಇಲ್ಲಿಯೂ ಆಲ್‌ರೌಂಡ್‌ ಆಟ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ದೇವದತ್ತ ಪಡಿಕ್ಕಲ್ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಸರಣಿಯಲ್ಲಿ ಇರುವುದರಿಂದ ಕರುಣ್ ನಾಯರ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಕೇರಳ ಎದುರು ದ್ವಿಶತಕ (233) ಸಿಡಿಸಿದ್ದ ಅವರು, ಟೂರ್ನಿಯಲ್ಲಿ ನಾಲ್ಕು ಪಂದ್ಯಗಳಿಂದ 507 ರನ್‌ ಕಲೆ ಹಾಕಿದ್ದಾರೆ. 

ಸ್ಮರಣ್ ರವಿಚಂದ್ರನ್‌, ಅಭಿನವ್ ಮನೋಹರ್ ಅವರಿಂದ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ಮೂಡಿಬರಬೇಕಿದೆ. ವಿದ್ವತ್ ಕಾವೇರಪ್ಪ ಜತೆ ಅಭಿಲಾಷ್ ಶೆಟ್ಟಿ ಅಥವಾ ಎಂ.ವೆಂಕಟೇಶ ವೇಗದ ಹೊಣೆ ನಿಭಾಯಿಸುವ ಸಾಧ್ಯತೆ ಇದೆ. ಮೊಹ್ಸಿನ್ ಖಾನ್, ಶಿಖರ್‌ ಶೆಟ್ಟಿ ಸ್ಪಿನ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ.

ಅನುಭವಿ ಮನನ್ ವೋಹ್ರಾ ನಾಯಕತ್ವದ ಚಂಡೀಗಡ ತಂಡವು ಈ ಪಂದ್ಯದಲ್ಲಿ ಜಯಿಸುವ ಮೂಲಕ ಪುಟಿದೇಳುವ ವಿಶ್ವಾಸದಲ್ಲಿದೆ. ತಂಡವು ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋತಿದ್ದು, ಒಂದು ಡ್ರಾ ಆಗಿದೆ. ತಂಡದ ಖಾತೆಯಲ್ಲಿ ಕೇವಲ ಒಂದು ಅಂಕವಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. 

ತಂಡವು ಬ್ಯಾಟಿಂಗ್‌ನಲ್ಲಿ ಶಿವಂ ಭಾಂಬ್ರಿ, ಮನನ್ ವೋಹ್ರಾ, ಅಂಕಿತ್ ಕೌಶಿಕ್, ಅರ್ಜುನ್ ಆಜಾದ್ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ವೇಗಿಗಳಾದ ಜಗಜೀತ್ ಸಿಂಗ್, ಅಭಿಷೇಕ್‌ ಸೈನಿ ಸವಾಲೊಡ್ಡಬಲ್ಲರು. 

ಲಘುವಾಗಿ ಪರಿಗಣಿಸುವುದಿಲ್ಲ

ಎದುರಾಳಿ ತಂಡವನ್ನು ಗೌರವಿಸುತ್ತೇವೆ. ಆದರೆ, ಲಘುವಾಗಿ ಪರಿಗಣಿಸುವುದಿಲ್ಲ. ನಮ್ಮ ತಂಡ ಉತ್ತಮವಾಗಿ ಆಡುತ್ತಿದೆ. ಅದನ್ನು ಮುಂದುವರಿಸುತ್ತೇವೆ. ವೇಗಿಗಳು ಉತ್ತಮ ನಿರ್ವಹಣೆ ತೋರುತ್ತಿದ್ದಾರೆ. ತವರಿನಲ್ಲಿ ಆಡುವುದು ಯಾವಾಗಲೂ ಖುಷಿಯ ವಿಚಾರ’ ಎಂದು ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್‌ ಹೇಳಿದರು.

ಪಂದ್ಯ ಆರಂಭ: ಬೆಳಿಗ್ಗೆ 9.30

ಎರಡನೇ ಬಾರಿ ಮುಖಾಮುಖಿ
ಕರ್ನಾಟಕ ಮತ್ತು ಚಂಡೀಗಡ ತಂಡಗಳು ಎರಡನೇ ಬಾರಿ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. 2024ರ ಫೆ.16ರಿಂದ 19ರವರೆಗೆ ನಡೆದಿದ್ದ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕ ತಂಡ ಮೂರು ಅಂಕ ಗಳಿಸಿತ್ತು. ಆ ಪಂದ್ಯದಲ್ಲಿ ವೈಶಾಖ ವಿಜಯಕುಮಾರ್ ಅಮೋಘ ಶತಕ (103) ಸಿಡಿಸಿದ್ದರು. ಅಲ್ಲದೆ 77ಕ್ಕೆ 4 ವಿಕೆಟ್ ಕಬಳಿಸಿದ್ದರು. ಎಸ್.ಶರತ್‌ (100) ಮನಿಷ್‌ ಪಾಂಡೆ (148) ಸಹ ಶತಕ ಗಳಿಸಿದ್ದರು.

ಅಭ್ಯಾಸ: ಎರಡೂ ತಂಡಗಳು ಶುಕ್ರವಾರವೇ ನಗರಕ್ಕೆ ಬಂದಿದ್ದು ಆಟಗಾರರು ಶುಕ್ರವಾರ ಮತ್ತು ಶನಿವಾರ ಅಭ್ಯಾಸ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.