ADVERTISEMENT

ಕರ್ನಾಟಕಕ್ಕೆ ರಾಜಸ್ಥಾನ ಸವಾಲು

ರಣಜಿ ಕ್ರಿಕೆಟ್: ಕ್ವಾರ್ಟರ್‌ಫೈನಲ್‌ಗೆ ಕೇರಳ ಪ್ರವೇಶ; ಜ.15ರಿಂದ ಪಂದ್ಯಗಳು

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 20:09 IST
Last Updated 10 ಜನವರಿ 2019, 20:09 IST
ಮನೀಷ್ ಪಾಂಡೆ ಮತ್ತು ಆರ್. ವಿನಯಕುಮಾರ್
ಮನೀಷ್ ಪಾಂಡೆ ಮತ್ತು ಆರ್. ವಿನಯಕುಮಾರ್   

ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ರಾಜಸ್ಥಾನ ತಂಡವನ್ನು ಎದುರಿಸಲಿದೆ.

ಗುರುವಾರ ಎಲೀಟ್ ಎ ಮತ್ತು ಬಿ ಗುಂಪಿನ ಕೊನೆಯ ಸುತ್ತು ಮುಕ್ತಾಯವಾದ ನಂತರ ಕರ್ನಾಟಕ ತಂಡವು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಿತು. ಒಟ್ಟು ಎಂಟು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿರುವ ಕರ್ನಾಟಕ ತಂಡವು ಎರಡರಲ್ಲಿ ಸೋತಿತ್ತು. ಮೂರು ಪಂದ್ಯಗಳು ಡ್ರಾ ಆಗಿದ್ದವು. ತನ್ನ ಕೊನೆಯ ಸುತ್ತಿನ ಪಂದ್ಯದಲ್ಲಿ ಬರೋಡಾ ಎದುರು ಸೋಲು ಅನುಭವಿಸಿತ್ತು. ವಡೋದರಲ್ಲಿ ನಡೆದಿದ್ದ ಪಂದ್ಯವು ಎರಡೇ ದಿನಗಳಲ್ಲಿ ಮುಗಿದಿತ್ತು. ಕರ್ನಾಟಕವು ಒಟ್ಟು 27 ಅಂಕಗಳನ್ನು ಗಳಿಸಿದೆ.

‘ಜನವರಿ 15ರಿಂದ ಕ್ವಾರ್ಟರ್‌ಫೈನಲ್ ನಡೆಯಲಿದೆ. ಬೆಂಗಳೂರಿನ ಚಿನ್ಜನಸ್ವಾಮಿ ಕ್ರೀಡಾಂಗಣದಲ್ಲಿಯೇ ಬೆಂಗಳೂರು ಮತ್ತು ರಾಜಸ್ಥಾನ ನಡುವಣ ಪಂದ್ಯ ನಡೆಯಲಿದೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವಕ್ತಾರ ವಿನಯ್ ಮೃತ್ಯುಂಜಯ್ ತಿಳಿಸಿದ್ದಾರೆ.

ADVERTISEMENT

ಏಳನೇ ಸುತ್ತಿನ ಪಂದ್ಯಗಳು ಮುಗಿದಾಗ ಕರ್ನಾಟಕ ತಂಡವು ಪಾಯಿಂಟ್ ಪಟ್ಟಿಯ ಎರಡನೇ ಸ್ಥಾನ ಪಡೆದಿತ್ತು. ಮೊದಲ ಸ್ಥಾನದಲ್ಲಿ ಹಾಲಿ ಚಾಂಪಿಯನ್ ವಿದರ್ಭ ಇತ್ತು. ಆದರೆ ಎಂಟನೇ ಸುತ್ತಿನಲ್ಲಿ ಸೌರಾಷ್ಟ್ರ ತಂಡವು ವಿದರ್ಭ ಎದುರು ಡ್ರಾ ಮಾಡಿಕೊಂಡ ಪಂದ್ಯದಲ್ಲಿ ಮೂರು ಅಂಕ ಗಳಿಸಿತ್ತು. ಅದರೊಂದಿಗೆ ಒಟ್ಟು 29 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ನೆಗೆಯಿತು. ಒಂದು ಅಂಕ ಪಡೆದ ವಿದರ್ಭ ಅಗ್ರಸ್ಥಾನದಲ್ಲಿ ಮುಂದುವರಿಯಿತು. ಆದರೆ, ಕರ್ನಾಟಕವು ಮೂರನೇ ಸ್ಥಾನಕ್ಕೆ ಇಳಿದಿದ್ದು ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ. ತವರಿನ ಅಂಗಳದಲ್ಲಿ ಆಡುವ ಅವಕಾಶ ಲಭಿಸಿದೆ.

‘ಬಿಸಿಸಿಐ ಈ ಮೊದಲು ಕ್ವಾರ್ಟರ್‌ಫೈನಲ್‌ಗಳಿಗಾಗಿ ನಾಲ್ಕು ತಾಣಗಳನ್ನು ಆಯ್ಕೆ ಮಾಡಿತ್ತು. ಅದರಲ್ಲಿ ಬೆಂಗಳೂರು ಕೂಡ ಒಂದಾಗಿತ್ತು. ಎಲೀಟ್ ಎ ಮತ್ತು ಬಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದ ತಂಡವು ಸಿ ಗುಂಪಿನ ಮೊದಲ ಸ್ಥಾನ ಪಡೆಯುವ ತಂಡವನ್ನು ಎದುರಿಸುವುದು ನಿಗದಿಯಾಗಿತ್ತು. ಆ ಪಂದ್ಯವು ಬೆಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದ್ದರಿಂದ ಕರ್ನಾಟಕಕ್ಕೆ ಈ ಅವಕಾಶ ಸಿಕ್ಕಿದೆ. ಇದು ಅದೃಷ್ಟದ ಆಟ’ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.‌

ಇನ್ನೊಂದು ಪಂದ್ಯದಲ್ಲಿ ಕೇರಳ ತಂಡವು ಹಿಮಾಚಲಪ್ರದೇಶದ ಎದುರು ಗೆದ್ದಿದ್ದರಿಂದ ನಾಲ್ಕನೇ ಸ್ಥಾನಕ್ಕೇರಿತು. ಎಂಟರಲ್ಲಿ ನಾಲ್ಕು ಗೆದ್ದು, ಮೂರು ಸೋತು ಮತ್ತು ಒಂದರಲ್ಲಿ ಡ್ರಾ ಮಾಡಿಕೊಂಡಿತ್ತು. ಗುರುವಾರ ನಾಧಾನ್‌ನಲ್ಲಿ ನಡೆದ ಪಂದ್ಯದಲ್ಲಿ ಕೇರಳ ತಂಡವು ಐದು ವಿಕೆಟ್‌ಗಳಿಂದ ಹಿಮಾಚಲ ಪ್ರದೇಶ ವಿರುದ್ಧ ಗೆದ್ದಿತು. ಗುಜರಾತ್ ತಂಡವು ಐದನೇ ಸ್ಥಾನ ಪಡೆದು ಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು.

ರಾಜಸ್ಥಾನ, ಉತ್ತರಪ್ರದೇಶಕ್ಕೆ ಅವಕಾಶ: ಸಿ ಗುಂಪಿನಿಂದ ರಾಜಸ್ಥಾನ ಮತ್ತು ಉತ್ತರ ಪ್ರದೇಶ ತಂಡಗಳು ಎಂಟರ ಘಟ್ಟ ಪ್ರವೇಶಿಸಿವೆ. ಈ ವಿಭಾಗದಲ್ಲ ಒಟ್ಟು ಒಂಬತ್ತು ಸುತ್ತಿನ ಪಂದ್ಯಗಳು ನಡೆದಿದ್ದರು. ಹತ್ತು ತಂಡಗಳು ಸ್ಪರ್ಧಿಸಿದ್ದವು.

ಪ್ಲೇಟ್‌ ಗುಂಪಿನಿಂದ ಉತ್ತರಾಖಂಡ ತಂಡವು ನಾಕ್‌ಔಟ್ ಪ್ರವೇಶಿಸಿದೆ. ಅಪಾರ ನಿರೀಕ್ಷೆ ಮೂಡಿಸಿದ್ದ ಬಿಹಾರ ತಂಡವು ಎರಡನೇ ಸ್ಥಾನಕ್ಕಿಳಿದಿದೆ. ಇದರಿಂದಾಗಿ ಅವಕಾಶ ಪಡೆದಿಲ್ಲ.

ಹೊಸ ನಿಯಮದ ಪ್ರಕಾರ; ಎ–ಬಿ ಗುಂಪಿನಿಂದ ಐದು, ಸಿ ಗುಂಪಿನಿಂದ ಎರಡು ಮತ್ತು ಪ್ಲೇಟ್ ಗುಂಪಿನಿಂದ ಒಂದು ತಂಡಕ್ಕೆ ನಾಕೌಟ್‌ಗೆ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.