ADVERTISEMENT

ಜಮ್ಮು: ಬಿಸಿಲಿದ್ದರೂ ನಡೆಯದ ದಿನದಾಟ!

ಒದ್ದೆ ಅಂಗಳದ ನೆಪ ಎರಡನೇ ದಿನದಾಟಕ್ಕೆ ತಡೆ: ಕರ್ನಾಟಕಕ್ಕೆ ಹೆಚ್ಚಿದ ಒತ್ತಡ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 19:43 IST
Last Updated 21 ಫೆಬ್ರುವರಿ 2020, 19:43 IST

ಜಮ್ಮು: ‘ಮ್ಯಾಚ್ ಶುರುವಾಗುತ್ತಾ ಈಗ..?’

ಇಲ್ಲಿಯ ಗಾಂಧಿ ಸ್ಮಾರಕ ಕಾಲೇಜು ಮೈದಾನದಲ್ಲಿ ಶುಕ್ರವಾರ ಸೇರಿದ್ದ ಅಭಿಮಾನಿಗಳಿಂದ ಪದೇ ಪದೇ ಕೇಳಿ ಬರುತ್ತಿದ್ದ ಪ್ರಶ್ನೆ ಇದು. ಆದರೆ ಅವರಿಗೆ ಇಡೀ ದಿನ ಉತ್ತರ ಸಿಗಲಿಲ್ಲ. ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದ ಎರಡನೇ ದಿನದಾಟವನ್ನು ನೋಡಲು ಬಂದಿದ್ದರು. ದಿನವೀಡಿ ಹದವಾದ ಬಿಸಿಲು ಇದ್ದ ಕಾರಣ ಆಟ ನಡೆಯಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ಒಂದೂ ಎಸೆತವಿಲ್ಲದೇ ದಿನದಾಟ ಮುಗಿಯಿತು!

ಅಂಗಳದ ಕೆಲ ಭಾಗಗಳಲ್ಲಿ ತೇವ ಹೆಚ್ಚಿನ ಪ್ರಮಾಣದಲ್ಲಿದ್ದ ಕಾರಣ ಆಟ ನಡೆಯಲಿಲ್ಲ. ಗುರುವಾರ ರಾತ್ರಿ ಮಳೆ ಸುರಿದಿತ್ತು. ಆ ಸಂದರ್ಭದಲ್ಲಿ ಅಂಗಳಕ್ಕೆ ಹಾಕಲಾಗಿದ್ದ ಹೊದಿಕೆಗಳ ಅಡಿಯಲ್ಲಿ ನೀರು ಶೇಖರಗೊಂಡಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.

ADVERTISEMENT

ಅಂಪೈರ್‌ಗಳು ಹಲವು ಬಾರಿ ಅಂಗಳದ ತಪಾಸಣೆ ಮಾಡಿದರು. ಆದರೆ ಆಟ ನಡೆಸಲು ಸೂಕ್ತವಾದ ಸ್ಥಿತಿ ಇರಲಿಲ್ಲ. ಮೊದಲ ದಿನದಾಟಕ್ಕೂ ಮಳೆ ಅಡ್ಡಿಯಾಗಿತ್ತು. ಚಹಾ ವಿರಾಮದ ನಂತರ ಆರಂಭವಾಗಿದ್ದ ಇನಿಂಗ್ಸ್‌ನಲ್ಲಿ ಕರ್ನಾಟಕವು ಆರು ಓವರ್‌ಗಳಲ್ಲಿ ಎರಡು ವಿಕೆಟ್‌ಗಳಿಗೆ 14 ರನ್‌ ಗಳಿಸಿತ್ತು.

ಇದೆಲ್ಲದರ ನಡುವೆ ಕ್ರೀಡಾಂಗಣದ ಸಿಬ್ಬಂದಿಯ ಶ್ರಮವೂ ಗಮನ ಸೆಳೆಯಿತು. ಇಲ್ಲಿರುವ ಸೀಮಿತ ಸೌಲಭ್ಯಗಳಲ್ಲಿಯೇ ಅಂಗಳವನ್ನು ಒಣಗಿಸಲು ಅವರು ಇಡೀ ದಿನ ಹರಸಾಹಸಪಟ್ಟರು. ಪಂದ್ಯದಲ್ಲಿ ಉಳಿದಿರುವ ಮೂರು ದಿನಗಳಲ್ಲಾದರೂ ಆಡ ನಡೆಯಲು ಮಳೆರಾಯ ಆಸ್ಪದ ಕೊಡುವನೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಅದರಲ್ಲೂ ಕರ್ನಾಟಕ ತಂಡಕ್ಕೆ ಈ ಪರಿಸ್ಥಿತಿಯು ಒತ್ತಡ ಹೆಚ್ಚಿಸಿದೆ.

ಕರುಣ್ ನಾಯರ್ ಬಳಗವು ‘ಎ–ಬಿ’ ಜಂಟಿ ಗುಂಪಿನಿಂದ ಕಷ್ಟಪಟ್ಟು ಎಂಟರ ಘಟ್ಟ ತಲುಪಿದೆ. ಕಾಶ್ಮೀರ ತಂಡವು ಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಈ ಹಂತಕ್ಕೆ ತಲುಪಿದೆ. ಒಂದೊಮ್ಮೆ ಮುಂದಿನ ಮೂರು ದಿನಗಳಲ್ಲಿಯೂ ಪಂದ್ಯವು ಸುಸೂತ್ರವಾಗಿ ನಡೆಯದೇ ಹೋದರೆ, ಆತಿಥೇಯರಿಗೆ ಹೆಚ್ಚು ಅನುಕೂಲ. ಏಕೆಂದರೆ, ನಿಯಮದ ಪ್ರಕಾರ ಲೀಗ್ ಹಂತದಲ್ಲಿ ಹೆಚ್ಚು ಗೆಲುವುಗಳನ್ನು ದಾಖಲಿಸಿದ ತಂಡವು ಸೆಮಿಫೈನಲ್‌ ಪ್ರವೇಶಿಸುತ್ತದೆ. ಏಕೆಂದರೆ ಗುಂಪು ಹಂತದಲ್ಲಿ ಕಾಶ್ಮೀರ ತಂಡವು ಆರು ಪಂದ್ಯಗಳಲ್ಲಿ ಮತ್ತು ಕರ್ನಾಟಕ ನಾಲ್ಕು ಪಂದ್ಯಗಳಲ್ಲಿ ಗೆದ್ದಿದೆ.

‘ಇದೊಂದು ಗೊಂದಲಮಯ ನಿಯಮ. ಸಿ ಗುಂಪಿಗಿಂತ ಎಲೈಟ್ ಗುಂಪು ಹಂತವು ಕಠಿಣವಾಗಿರುತ್ತದೆ. ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಸಂದರ್ಭದಲ್ಲಿಯೂ ಈ ನಿಯಮದ ವಿರುದ್ಧ ನಾವು ಬಿಸಿಸಿಐಗೆ ತಕರಾರು ಸಲ್ಲಿಸಿದ್ದೆವು. ಔಟ್‌ರೈಟ್ ಜಯಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಸಂತೋಷ್ ಮೆನನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಈ ಪಂದ್ಯವನ್ನು ಬೆಂಗಳೂರಿನಲ್ಲಿ ಆಯೋಜಿಸಬೇಕು ಎಂದು ಕೆಎಸ್‌ಸಿಎ ಮೊದಲೇ ಮನವಿ ಸಲ್ಲಿಸಿತ್ತು. ಆದರೆ, ಬಿಸಿಸಿಐ ಅದಕ್ಕೆ ಒಪ್ಪಿರಲಿಲ್ಲ.

ಈ ಆತಂಕದ ನಡುವೆಯೂ ಕರ್ನಾಟಕದ ಕೆ. ಗೌತಮ್ ಇನ್ನೂ ವಿಶ್ವಾಸ ಕಳೆದುಕೊಂಡಿಲ್ಲ. ‘ಇನ್ನೂ ಮೂರು ದಿನಗಳು ಬಾಕಿಯಿವೆ. ಅದರಲ್ಲಿ ಆಡುವ ಅವಕಾಶ ಸಿಕ್ಕರೆ ನಮ್ಮ ಪರವಾದ ಫಲಿತಾಂಶವನ್ನು ಗಳಿಸುವ ಸಾಮರ್ಥ್ಯವಿದೆ’ ಎಂದಿದ್ದಾರೆ.

‘ಪಂದ್ಯ ನಡೆಸಲು ಬೇಕಾದ ಎಲ್ಲ ಅನುಕೂಲತೆಗಳನ್ನು ನೀಡಲು ನಾವು ಸಂಪೂರ್ಣ ಶ್ರಮಿಸಿದ್ದೇವೆ’ ಎಂದು ಆತಿಥೇಯ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.