ADVERTISEMENT

ರಣಜಿ ಟ್ರೋಫಿ | ಅಗರವಾಲ್‌ ಆಟ: ರಾಹುಲ್‌ ನೋಟ

ರಣಜಿ ಟ್ರೋಫಿ: ಹರಿಯಾಣ ವಿರುದ್ಧ ಕರ್ನಾಟಕ ಎಚ್ಚರಿಕೆಯ ಆಟ l ಅನುಜ್, ಕಾಂಭೋಜ್ ಮಿಂಚು

ಗಿರೀಶ ದೊಡ್ಡಮನಿ
Published 30 ಜನವರಿ 2025, 23:30 IST
Last Updated 30 ಜನವರಿ 2025, 23:30 IST
<div class="paragraphs"><p>ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ಮತ್ತು ಕೆ.ಎಲ್. ರಾಹುಲ್<br>&nbsp;&nbsp;&nbsp;&nbsp;</p></div>

ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ಮತ್ತು ಕೆ.ಎಲ್. ರಾಹುಲ್
    

   

  ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್

ಬೆಂಗಳೂರು: ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆ.ಎಲ್. ರಾಹುಲ್ ಆಟ ನೋಡಲು ಬಂದಿದ್ದವರಿಗೆ ಮಯಂಕ್ ಅಗರವಾಲ್ ಚೆಂದದ ಬ್ಯಾಟಿಂಗ್ ಕಣ್ತುಂಬಿಕೊಳ್ಳುವ ‘ಬೋನಸ್’ ಕೂಡ ಲಭಿಸಿತು.  

ADVERTISEMENT

ಹರಿಯಾಣ ಬೌಲರ್‌ಗಳು ಒಡ್ಡಿದ ಕಠಿಣ ಸವಾಲನ್ನು ಎದುರಿಸಿ ನಿಂತ ನಾಯಕ ಮಯಂಕ್ ಅವರು ಕ್ರಿಕೆಟ್‌ ಪ್ರಿಯರನ್ನು ಮನರಂಜಿಸಿದರು. ಅವರು ಕೇವಲ 9 ರನ್‌ಗಳ ಅಂತರದಿಂದ ಶತಕ  ತಪ್ಪಿಸಿಕೊಂಡರೂ ‘ಆಕ್ರಮಣಕಾರಿ ಶೈಲಿ’ಯ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ಸಮಾಧಾನಕರ ಮೊತ್ತ ಗಳಿಸುವಲ್ಲಿ ಸಫಲವಾಯಿತು. 

ಗುರುವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಟೂರ್ನಿಯ ‘ಸಿ’ ಗುಂಪಿನ ಕೊನೆಯ ಪಂದ್ಯದ ಮೊದಲ ದಿನದಾಟದಲ್ಲಿ ಹರಿಯಾಣ ಎದುರು ಕರ್ನಾಟಕ 89 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 267 ರನ್ ಗಳಿಸಿತು.

ಬೆಳಿಗ್ಗೆ ಎಳೆಬಿಸಿಲಿನಲ್ಲಿ ಟಾಸ್ ಗೆದ್ದ ಹರಿಯಾಣ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೋದ ವಾರ ಇಲ್ಲಿಯೇ ನಡೆದಿದ್ದ ರಣಜಿ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಆರಂಭಿಸಿದ್ದ ಪಂಜಾಬ್ 55 ರನ್‌ಗಳಿಗೆ ಸರ್ವಪತನವಾಗಿತ್ತು. ಹರಿಯಾಣ ಕೂಡ ಕರ್ನಾಟಕವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಯೋಚನೆಯಲ್ಲಿತ್ತು.  ಆದರೆ, ಆ ಪಂದ್ಯದಲ್ಲಿ ಪಿಚ್‌ ಮೇಲೆ ಇದ್ದ ಹಸಿರು ಗರಿಕೆಗಳು ಈ ಪಂದ್ಯದಲ್ಲಿ ಇರಲಿಲ್ಲ!

ಅದರಿಂದಾಗಿ ಮೊದಲ 20 ಓವರ್‌ಗಳಲ್ಲಿ ವಿಕೆಟ್‌ ಪತನವಾಗದಂತೆ ಮಯಂಕ್ ಮತ್ತು ಕೆ.ವಿ. ಅನೀಶ್ ನೋಡಿಕೊಂಡರು. ಬಹಳ ಎಚ್ಚರಿಕೆಯಿಂದ ಮೊದಲ ವಿಕೆಟ್‌ಗೆ 45 ರನ್ ಸೇರಿಸಿದರು. ಈ ಪಂದ್ಯ
ದಲ್ಲಿ ಜಯಿಸುವುದು ಅತ್ಯಗತ್ಯವಾಗಿರುವುದರಿಂದ ಬ್ಯಾಟರ್‌ಗಳು ಜವಾಬ್ದಾರಿಯುತವಾಗಿ ಆಡಿದರು. ಅನೀಶ್ 67 ಎಸೆತಗಳಲ್ಲಿ 17 ರನ್ ಗಳಿಸಿದರು. ಇನ್ನೊಂದೆಡೆ ಮಯಂಕ್ ಅವರು ಕ್ರೀಸ್‌ನಿಂದ ಹೊರಬಂದು ಎಸೆತಗಳನ್ನು ಬೌಂಡರಿಗೆ ಕಳಿಸುವತ್ತ ಮಗ್ನರಾಗಿದ್ದರು.  

ಹರಿಯಾಣದ ವೇಗಿ ಅನ್ಷುಲ್ ಕಾಂಭೋಜ್ ಅವರು 21ನೇ ಓವರ್‌ನಲ್ಲಿ ಅನೀಶ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಚಲನ ಮೂಡಿತು. ಡ್ರೆಸಿಂಗ್‌ ರೂಮ್‌ನಿಂದ ಹೊರಬಂದ ಕೆ.ಎಲ್. ರಾಹುಲ್ ಪಿಚ್‌ನತ್ತ ಹೆಜ್ಜೆ ಹಾಕಿದ್ದು ಅದಕ್ಕೆ ಕಾರಣ.

ಮಯಂಕ್ –ರಾಹುಲ್ ಜೊತೆಯಾಟ: ಬಹಳ ವರ್ಷಗಳ ನಂತರ ಮಿತ್ರರಾದ ಮಯಂಕ್ ಮತ್ತು ರಾಹುಲ್ ಜೊತೆಯಾಟವನ್ನು ನೋಡುವ ಅವಕಾಶ ದೊರೆಯಿತು. ಅವರಿಬ್ಬರೂ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 54 ರನ್ ಸೇರಿಸಿದರು. ಊಟದ ವಿರಾಮಕ್ಕೂ ಮುನ್ನ ರಾಹುಲ್ ಅವರು ಒಂದು ಬಾರಿ ಕೂದಲೆಳೆಯ ಅಂತರದಲ್ಲಿ ಔಟಾಗುವುದನ್ನು ತಪ್ಪಿಸಿಕೊಂಡರು. ಅದರಿಂದಾಗಿ ವಿರಾಮಕ್ಕೆ ಸ್ಕೋರ್‌ ಬೋರ್ಡ್‌ನಲ್ಲಿ 1 ವಿಕೆಟ್‌ಗೆ 88 ರನ್‌ಗಳಿದ್ದವು.

ರಾಹುಲ್ ಅಪಾರ ತಾಳ್ಮೆಯಿಂದ ಆಡಿದರು. ಮಯಂಕ್ ಮಾತ್ರ ಮುನ್ನುಗ್ಗಿ ಹೊಡೆತ ಪ್ರಯೋಗಿಸು ವುದನ್ನು ಮುಂದುವರಿಸಿದರು. ಆದರೆ ವಿರಾಮದ ನಂತರದ 3ನೇ ಓವರ್‌ನಲ್ಲಿ ಕಾಂಭೋಜ್ ಎಸೆತದಲ್ಲಿ ರಾಹುಲ್ ಅವರು ರೋಹಿತ್ ಪ್ರಮೋದ್ ಶರ್ಮಾಗೆ ಕ್ಯಾಚಿತ್ತರು.

ಈ ಹಂತದಲ್ಲಿ ಮಯಂಕ್ ಜೊತೆಗೂಡಿದ ದೇವದತ್ತ ಪಡಿಕ್ಕಲ್ (43; 93ಎ) ವಿಶ್ವಾಸ ಮೂಡಿಸಿದರು. ಇಬ್ಬರೂ ಸೇರಿ 45 ರನ್‌ ಗಳಿಸಿದರು. ಮಯಂಕ್ ಮೂರು ಸಿಕ್ಸರ್ ಕೂಡ ಸಿಡಿಸಿದರು.

ಆದರೆ ಶತಕದ ಸನಿಹದಲ್ಲಿ ಅವರು ಅನುಜ್ ಠಕ್ರಾಲ್ ಎಸೆತವನ್ನು ಆಡಲು ಆಯ್ಕೆ ಮಾಡಿಕೊಂಡ ಹೊಡೆತ ಸೂಕ್ತವಾಗಿರಲಿಲ್ಲ. ಕಾಂಭೋಜ್ ಪಡೆದ ಚೆಂದದ ಕ್ಯಾಚ್‌ಗೆ ಮಯಂಕ್ ಪೆವಿಲಿಯನ್‌ ಸೇರಬೇಕಾಯಿತು.

ಇನಿಂಗ್ಸ್ ಕಟ್ಟುವ  ಹೊಣೆ ಹೊತ್ತ ಎಡಗೈ ಬ್ಯಾಟರ್ ದೇವದತ್ತ ಅವರೊಂದಿಗೆ ಸ್ಮರಣ್ ರವಿಚಂದ್ರನ್ (35; 48ಎ) ಜೊತೆಗೂಡಿದರು. ಕಳೆದ ಪಂದ್ಯದಲ್ಲಿ ಸ್ಮರಣ್ ದ್ವಿಶತಕ ಬಾರಿಸಿದ್ದರು. ಇಲ್ಲಿ ದೇವದತ್ತ ಮತ್ತು ಸ್ಮರಣ್ ಅವರು 4ನೇ ವಿಕೆಟ್ ಜೊತೆಯಾಟದಲ್ಲಿ 76 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡವು ‘ದ್ವಿಶತಕ’ ದಾಟಿತು.

65ನೇ ಓವರ್‌ನಲ್ಲಿ ದೇವದತ್ತ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಅನುಜ್ ಅವರು ಜೊತೆಯಾಟ ಮುರಿದರು. ನಂತರದ ಓವರ್‌ನಲ್ಲಿ ನಿಶಾಂತ್ ಸಿಂಧು ಎಸೆತದಲ್ಲಿ ಸ್ಮರಣ್ ಕೂಡ ಎಲ್‌ಬಿಬ್ಲ್ಯು ಆದರು.  ನಂತರದ 24 ಓವರ್‌ಗಳಲ್ಲಿ ಹರಿಯಾಣ ಬೌಲರ್‌ಗಳು ಕರ್ನಾಟಕದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರು. ಅದರಲ್ಲೂ ಎಡಗೈ ಸ್ಪಿನ್ನರ್ ನಿಶಾಂತ್ ಮತ್ತು ಆಫ್‌ಸ್ಪಿನ್ನರ್ ಜಯಂತ್ ಯಾದವ್ ಅವರು ಚುರುಕಿನ ದಾಳಿ ನಡೆಸಿದರು. ಆದರೆ ತಮ್ಮ ಪದಾರ್ಪಣೆಯ ಋತುವಿನಲ್ಲಿ ಆಡುತ್ತಿರುವ ಕೃಷ್ಣನ್ ಶ್ರೀಜಿತ್ (ಬ್ಯಾಟಿಂಗ್ 18; 44ಎ) ಮತ್ತು ಯಶೋವರ್ಧನ್ ಪರಂತಾಪ್ (ಬ್ಯಾಟಿಂಗ್ 27; 98ಎ) ದಿನದಾಟ ಮುಗಿಸಿದರು.

ಶ್ರೇಯಸ್‌ಗೆ ವಿಶ್ರಾಂತಿ

ಕರ್ನಾಟಕ ತಂಡದ ಉಪನಾಯಕ–ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಯಿತು. ಅವರಿಗೆ ಸ್ನಾಯುವಿನ ನೋವು ಇದ್ದ ಕಾರಣ ವಿಶ್ರಾಂತಿ ನೀಡಲಾಯಿತು. ಅವರ ಬದಲಿಗೆ ಹಾರ್ದಿಕ್ ರಾಜ್ ಸ್ಥಾನ ಪಡೆದರು.

ತಂಡದಲ್ಲಿ ಇನ್ನೂ ಕೆಲವು ಬದಲಾವಣೆ ಗಳನ್ನು ಮಾಡಲಾಯಿತು. ಅಭಿನವ್ ಮನೋಹರ್ ಅವರಿಗೆ ವಿಶ್ರಾಂತಿ ನೀಡಿ, ರಾಹುಲ್‌ಗೆ ಸ್ಥಾನ ಕೊಡಲಾಯಿತು. ಎಡಗೈ ವೇಗಿ ಅಭಿಷೇಕ್ ಶೆಟ್ಟಿ ಅವರನ್ನು 11ರ ಬಳಗದಿಂದ ಕೈಬಿಟ್ಟು, ವಿದ್ವತ್ ಕಾವೇರಪ್ಪಗೆ ಅವಕಾಶ ಕೊಡಲಾಯಿತು.

‘ವೇಗಿ ವಿದ್ವತ್ ಅವರು ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಅವರು ಅತ್ಯಂತ ವಿಶ್ವಾಸಾರ್ಹ ಬೌಲರ್ ಆಗಿದ್ದಾರೆ. ಈ ಪಂದ್ಯದಲ್ಲಿಯೂ ಅವರು ತಮ್ಮ ಸಂಪೂರ್ಣ ಸಾಮರ್ಥ್ಯ ಮೆರೆಯುವ ವಿಶ್ವಾಸ ನಮಗಿದೆ’ ಎಂದು ಮಯಂಕ್ ಅಗರವಾಲ್ ತಿಳಿಸಿದರು.

ಬಹಳಷ್ಟು ಪಂದ್ಯಗಳಲ್ಲಿ ನಾನು ರಾಹುಲ್ ದೊಡ್ಡ ಜೊತೆಯಾಟಗಳನ್ನು ಆಡಿದ್ದೇವೆ. ಇದೂ ಕೂಡ ಖುಷಿ ಕೊಟ್ಟ ಇನಿಂಗ್ಸ್
ಮಯಂಕ್ ಅಗರವಾಲ್ ಕರ್ನಾಟಕ ತಂಡದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.