ADVERTISEMENT

ರಣಜಿ ಟ್ರೋಫಿ ಕ್ರಿಕೆಟ್‌: ಗೋವಾ ವಿರುದ್ಧ 371ಕ್ಕೆ ಆಲೌಟ್‌ ಆದ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 8:33 IST
Last Updated 26 ಅಕ್ಟೋಬರ್ 2025, 8:33 IST
   

ಶಿವಮೊಗ್ಗ: ಉಪ ನಾಯಕ ಕರುಣ್‌ ನಾಯರ್‌ (ಔಟಾಗದೆ 174; 267 ಎ, 14 ಬೌಂ, 3 ಸಿ) ಅವರ ಛಲದ ಬ್ಯಾಟಿಂಗ್‌ ಬಲದಿಂದ ಕರ್ನಾಟಕ ತಂಡ ಗೋವಾ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಗೌರವಾರ್ಹ ಮೊತ್ತ ಕಲೆಹಾಕಿದೆ.

ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮಯಂಕ್‌ ಅಗರವಾಲ್‌ ಬಳಗ 110.1 ಓವರ್‌ಗಳಲ್ಲಿ 371 ರನ್‌ಗಳಿಗೆ ಆಲೌಟ್‌ ಆಯಿತು.

ಈ ಮೈದಾನದಲ್ಲಿ ಎರಡನೇ ಶತಕ ದಾಖಲಿಸಿದ ಕರುಣ್, ಭಾನುವಾರ ಎದುರಾಳಿ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು.

ADVERTISEMENT

ಇವರಿಗೆ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ (57; 109 ಎ, 6 ಬೌಂ, 1ಸಿ) ಮತ್ತು ವೇಗದ ಬೌಲರ್‌ ವೈಶಾಖ್‌ ವಿಜಯಕುಮಾರ್ (31; 53 ಎ, 4 ಬೌಂ) ಉತ್ತಮ ಬೆಂಬಲ ನೀಡಿದರು.

ಕರುಣ್ ಮತ್ತು ಶ್ರೇಯಸ್‌ 6ನೇ ವಿಕೆಟ್‌ ಜೊತೆಯಾಟದಲ್ಲಿ 117 ರನ್‌ ಗಳಿಸಿ ತಂಡವನ್ನು ಸುಸ್ಥಿತಿಗೆ ತಂದು ನಿಲ್ಲಿಸಿದರು.

ಶ್ರೇಯಸ್ ಔಟಾದ ನಂತರ ಕರುಣ್, 'ಬಾಲಂಗೋಚಿ' ಗಳೊಂದಿಗೆ ಸೇರಿ ಇನಿಂಗ್ಸ್‌ ಬೆಳೆಸಿದರು. 7ನೇ ವಿಕೆಟ್‌ಗೆ ಯಶೋವರ್ಧನ್ ಪರಂತಾಪ್ (14) ಜೊತೆ 26 ರನ್, 8 ನೇ ವಿಕೆಟ್‌ ಪಾಲುದಾರಿಕೆಯಲ್ಲಿ ವೈಶಾಖ್ ಜೊತೆ 99 ಎಸೆತಗಳಲ್ಲಿ 60 ರನ್‌ ದಾಖಲಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

10ನೇ ವಿಕೆಟ್‌ಗೆ ವಿದ್ವತ್‌ ಕಾವೇರಪ್ಪ ಜೊತೆಗೂಡಿ 29 ರನ್ ಕಲೆಹಾಕಿದರು. ಈ ಪಾಲುದಾರಿಕೆಯಲ್ಲಿ ಬಂದ ರನ್‌ಗಳೆಲ್ಲವೂ ಅವರ ಬ್ಯಾಟ್‌ನಿಂದಲೇ ಸಿಡಿದಿದ್ದು ವಿಶೇಷ.

111ನೇ ಓವರ್‌ನ ಮೊದಲ ಎಸೆತವನ್ನು ಕರುಣ್, ಡೀಪ್ ಮಿಡ್‌ ವಿಕೆಟ್‌ನತ್ತ ಬಾರಿಸಿ ಒಂದು ರನ್‌ ಗಳಿಸಿದರು. ಕರುಣ್‌ ಬೇಡ ಎಂದರೂ ಮತ್ತೊಂದು ರನ್‌ಗಾಗಿ ಅನಗತ್ಯವಾಗಿ ಓಡಿದ ಕಾವೇರಪ್ಪ ರನೌಟ್‌ ಆದರು. ಇದರೊಂದಿಗೆ ಕರ್ನಾಟಕದ ಇನಿಂಗ್ಸ್‌ಗೆ ತೆರೆಬಿತ್ತು.

ಮೊದಲ ಇನಿಂಗ್ಸ್‌ ಆರಂಭಿಸಿರುವ ಗೋವಾ 3.5 ಓವರ್‌ಗಳಲ್ಲಿ 9 ರನ್‌ ಗಳಿಸಿ 1 ವಿಕೆಟ್‌ ಕಳೆದುಕೊಂಡಿದೆ.

ವೇಗಿ ಅಭಿಲಾಷ್‌ ಶೆಟ್ಟಿ, ಮಂಥನ್‌ ಖುಟ್ಕರ್‌ (9) ವಿಕೆಟ್‌ ಪಡೆದು ಆತಿಥೇಯರಿಗೆ ಮೇಲುಗೈ ತಂದುಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.