ರಾಜ್‌ಕೋಟ್: ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಶತಕದ ಹೊಸ್ತಿಲಲ್ಲಿ ಎಡವಿದರು. ತವರಿಗೆ ಮರಳಿದ ಖುಷಿಯಲ್ಲಿರುವ ಕರುಣ್ ನಾಯರ್ ಅರ್ಧಶತಕ ಅರಳಿಸಿದರು. ಯುವ ಬ್ಯಾಟರ್ ಸ್ಮರಣ್ ರವಿಚಂದ್ರನ್ ತಮ್ಮ ಲಯದಲ್ಲಿ ಮುಂದುವರಿದರು.
ನಿರಂಜನ್ ಶಾ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದ ಮೊದಲ ದಿನ ಕರ್ನಾಟಕ ಉತ್ತಮ ಮೊತ್ತ ಕಲೆಹಾಕಿತು. 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 295 ರನ್ ಗಳಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ನಾಯಕ ಮಯಂಕ್ ಅಗರ್‌ವಾಲ್ ಲಯ ಕಂಡುಕೊಳ್ಳುವಲ್ಲಿ ವಿಫಲರಾದರು. 30 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದರು. ಅನುಭವಿ ಸ್ಪಿನ್ನರ್ ಧರ್ಮೇಂದ್ರಸಿಂಹ ಜಡೇಜ (100ಕ್ಕೆ4) ಅವರ ಎಸೆತದಲ್ಲಿ ಚೇತನ್ ಸಕಾರಿಯಾಗೆ ಕ್ಯಾಚಿತ್ತರು.
ನಾಲ್ಕು ಓವರ್‌ಗಳ ನಂತರ ಇನ್ನೊಬ್ಬ ಆರಂಭಿಕ ಬ್ಯಾಟರ್ ನಿಕಿನ್ ಜೋಸ್ (12; 40ಎ) ಅವರೂ ದುಡುಕಿದರು. ಜಡೇಜ ಎಸೆತದಲ್ಕಿ ನಿಕಿನ್ ಅವರು ಅಂಶ್ ಗೋಸಾಯಿಗೆ ಕ್ಯಾಚಿತ್ತರು. ಇದರಿಂದಾಗಿ ಆತಿಥೇಯರ ಬಳಗದಲ್ಲಿ ಅಪಾರ ಆತ್ಮವಿಶ್ವಾಸ ಮೂಡಿತು. ಆದರೆ ಜಯದೇವ್ ಉನದ್ಕತ್ ಬಳಗದ ಉತ್ಸಾಹಕ್ಕೆ ಭಾರತ ತಂಡದ ಬ್ಯಾಟರ್‌ಗಳಾದ ದೇವದತ್ತ ಮತ್ತು ಕರುಣ್ ತಣ್ಣೀರೆರಚಿದರು. ಎಡಗೈ ಬ್ಯಾಟರ್ ದೇವದತ್ತ 141 ಎಸೆತಗಳಲ್ಲಿ 96 ರನ್ ಗಳಿಸಿದರು. ಅದರಲ್ಲಿ 11 ಬೌಂಡರಿಗಳಿದ್ದವು. ಕರುಣ್ 126 ಎಸೆತಗಳಲ್ಲಿ 73 ರನ್ ಗಳಿಸಿದರು. ಹೋದ ವರ್ಷ ವಿದರ್ಭ ತಂಡದಲ್ಲಿ ಆಡಿದ್ದ ಕರುಣ್ ಅವರು ತವರಿಗೆ ಮರಳಿದ್ದಾರೆ. ಮೂರನೇ ವಿಕೆಟ್ ಜೊತೆಯಾಟದಲ್ಲಿ 146 ರನ್ ಸೇರಿಸಿದರು.
ಉನದ್ಕತ್ ಸೇರಿದಂತೆ ಏಳು ಬೌಲರ್‌ಗಳು ಕಣಕ್ಕಿಳಿದರು. ಆದರೆ ಜಡೇಜ ಬಿಟ್ಟರೆ ಉಳಿದವರು ಹೆಚ್ಚು ಪರಿಣಾಮ ಬೀರಲಿಲ್ಲ. ದೇವದತ್ತ ಸ್ವೀಪ್, ಬ್ಯಾಕ್‌ಫುಟ್ ಪಂಚ್ ಮತ್ತು ಡ್ರೈವ್‌ಗಳ ಮೂಲಕ ರನ್ ಗಳಿಸಿದರು. ಕರುಣ್ ಕೂಡ ಕಟ್, ಡ್ರೈವ್‌ಗಳನ್ನು ಪ್ರಯೋಗಿಸಿದರು. ಇಬ್ಬರೂ ಬ್ಯಾಟರ್‌ಗಳ ಉತ್ತಮ ತಾಳಮೇಳದಿಂದಾಗಿ ಫೀಲ್ಡರ್‌ಗಳಿಗೆ ಯಾವುದೇ ಅವಕಾಶ ಸಿಗಲಿಲ್ಲ.
ಊಟದ ವಿರಾಮದ ನಂತರದ ಅವಧಿಯಲ್ಲಿ ಜಡೇಜ ಮತ್ತೊಮ್ಮೆ ಪರಿಣಾಮಕಾರಿ ದಾಳಿ ಮಾಡಿದರು. ಕರುಣ್ ನಾಯರ್ ಅವರನ್ನು 54ನೇ ಓವರ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಜಡೇಜ ಜೊತೆಯಾಟ ಮುರಿದರು. ಆರು ಓವರ್‌ಗಳ ನಂತರ ಜಡೇಜ ಮೋಡಿಗೆ ದೇವದತ್ತ ಕ್ಲೀನ್‌ಬೌಲ್ಡ್ ಆದರು. ಕೇವಲ 4 ರನ್‌ಗಳ ಅಂತರದಿಂದ ಶತಕ ಕೈತಪ್ಪಿಸಿಕೊಂಡರು. ಕೃಷ್ಣನ್ ಶ್ರೀಜಿತ್ 15 ಎಸೆತ ಆಡಿ 5 ರನ್ ಗಳಿಸಿ ನಿರ್ಗಮಿಸಿದರು.
ಸ್ಮರಣ್ ಆಟದ ರಂಗು: ಹೋದ ವರ್ಷದ ರಣಜಿ ಋತುವಿನಲ್ಲಿ ಪದಾರ್ಪಣೆ ಮಾಡಿದ್ದ ಸ್ಮರಣ್ ಈ ಸಲವೂ ಉತ್ತಮ ಆರಂಭ ಮಾಡಿದರು. 22ವರ್ಷದ ಎಡಗೈ ಬ್ಯಾಟರ್ ಸ್ಮರಣ್ (ಬ್ಯಾಟಿಂಗ್ 66; 120ಎ) ಅಮೋಘ ಬ್ಯಾಟಿಂಗ್ ಮಾಡಿದರು. ಪ್ರಮುಖವಾಗಿ ಜಡೇಜ ಅವರ ಎಸೆತಗಳನ್ನು ದಂಡಿಸುವ ದಿಟ್ಟತನ ತೋರಿದರು. ಇನಿಂಗ್ಸ್‌ನ ಮೊದಲ ಸಿಕ್ಸರ್ ಸಿಡಿಸುವಲ್ಲಿ ಸಫಲರಾದರು. ಅವರ ಬ್ಯಾಟ್‌ನಿಂದ ಒಟ್ಟು ಎರಡು ಸಿಕ್ಸರ್ ದಾಖಲಾದವು. ಫ್ರಂಟ್‌ಫುಟ್ ಡ್ರೈವ್‌ಗಳ ಮೂಲಕ ಬೌಲರ್‌ಗಳಿಗೆ ಸವಾಲೆಸೆದರು.
ಅವರೊಂದಿಗೆ ಸೇರಿಕೊಂಡ ಶ್ರೇಯಸ್ ಗೋಪಾಲ್ (ಬ್ಯಾಟಿಂಗ್ 38) ಅವರು ದಿನದಾಟದಲ್ಲಿ ಯಾವುದೇ ವಿಕೆಟ್ ಪತನಕ್ಕೆ ಆಸ್ಪದ ಕೊಡಲಿಲ್ಲ. ಇಬ್ಬರೂ ಸೇರಿ ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ 81 ರನ್ ಸೇರಿಸಿದರು. ಶ್ರೇಯಸ್ ಕೂಡ ಎರಡು ಭರ್ಜರಿ ಸಿಕ್ಸರ್ ಹೊಡೆದರು.
ನಾಲ್ಕು ರನ್‌ಗಳಿಂದ ಶತಕ ತಪ್ಪಿಸಿಕೊಂಡ ದೇವದತ್ತ ಪಡಿಕ್ಕಲ್ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶಿಖರ್ ಶೆಟ್ಟಿ ವೈಶಾಖ, ವಿದ್ವತ್‌ಗೆ ವಿಶ್ರಾಂತಿ
ಸ್ಕೋರ್ ಕಾರ್ಡ್
ಮೊದಲ ಇನಿಂಗ್ಸ್ ಕರ್ನಾಟಕ 5ಕ್ಕೆ295 (90 ಓವರ್‌ಗಳಲ್ಲಿ) ನಿಕಿನ್ ಸಿ ಅಂಶ್ ಬಿ ಧರ್ಮೇಂದ್ರಸಿಂಹ 12 (40ಎ) ದೇವದತ್ತ ಬಿ ಧರ್ಮೇಂದ್ರಸಿಂಹ 96 (141ಎ 4X11) ಕರುಣ್ ಎಲ್‌ಬಿಡಬ್ಲ್ಯು ಬಿ ಧರ್ಮೇಂದ್ರಸಿಂಹ 73 (126ಎ 4X9) ಸ್ಮರಣ್ ಬ್ಯಾಟಿಂಗ್ 66 (120ಎ 4X4 6X2) ಶ್ರೀಜಿತ್ ಸಿ ದೇಸಾಯಿ ಬಿ ದೊಡಿಯಾ 5 (15ಎ 4X1) ಶ್ರೇಯಸ್ ಬ್ಯಾಟಿಂಗ್ 38 (69ಎ 4X2 6X2) ಇತರೆ: 3 (ಬೈ 1 ಲೆಗ್‌ಬೈ 1 ನೋಬಾಲ್ 1) ವಿಕೆಟ್ ಪತನ: 1–13 (ಮಯಂಕ್ ಅಗರವಾಲ್;9.2) 2–26 (ನಿಕಿನ್ ಜೋಸ್;13.5) 3–172 (ಕರುಣ್ ನಾಯರ್; 53.4) 4–195 (ದೇವದತ್ತ ಪಡಿಕ್ಕಲ್; 59.5) 5–214 (ಕೃಷಣ್ ಶ್ರೀಜಿತ್; 66.1) ಬೌಲಿಂಗ್ ಜಯದೇವ್ ಉನದ್ಕತ್ 14–2–36–0 ಚೇತನ್ ಸಕಾರಿಯಾ 12–3–21–0 ಧರ್ಮೇಂದ್ರಸಿಂಹ ಜಡೇಜ 30–3–100–4 ಚಿರಾಗ್ ಜಾನಿ 3–1–5–0 ಪ್ರೇರಕ್ ಮಂಕಡ್ 3–1–14–0 ಯುವರಾಜ್ ಸಿಂಗ್ ದೊಡಿಯಾ 19–2–79–1 ಸಮರ್ ಗಜ್ಜರ್ 9–0–38–0 (ಸೌರಾಷ್ಟ್ರ ವಿರುದ್ಧದ ಪಂದ್ಯ)
ಕಣಕ್ಕೆ ಮೂವರು ಸ್ಪಿನ್ನರ್
ಕರ್ನಾಟಕ ತಂಡವು ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದೆ. ಇಲ್ಲಿಯ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅವಕಾಶ ನೀಡುವುದರಿಂದ ಈ ನಿರ್ಧಾರ ಮಾಡಲಾಗಿದೆ. ಅನುಭವಿ ಶ್ರೇಯಸ್ ಆಫ್‌ಸ್ಪಿನ್ನರ್ ಮೊಹಸಿನ್ ಖಾನ್ ಮತ್ತು ಪದಾರ್ಪಣೆ ಪಂದ್ಯ ಆಡುತ್ತಿರುವ ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ ತಂಡದಲ್ಲಿದ್ದಾರೆ. ವೇಗದ ಹೊಣೆ ಅಭಿಲಾಷ್ ಶೆಟ್ಟಿ ಹಾಗೂ ಎಂ. ವೆಂಕಟೇಶ್ ಅವರಿಗೆ ವಹಿಸಲಾಗಿದೆ. ಅನುಭವಿ ವೇಗಿಗಳಾದ ವೈಶಾಖ ವಿಜಯಕುಮಾರ್ ಮತ್ತು ವಿದ್ವತ್ ಕಾವೇರಪ್ಪ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಸಂಕ್ಷಿಪ್ತ ಸ್ಕೋರುಗಳು (ಬಿ ಗುಂಪು)
ತಿರುವನಂತಪುರ: ಮಹಾರಾಷ್ಟ್ರ: 59 ಓವರ್‌ಗಳಲ್ಲಿ 7ಕ್ಕೆ179 (ಋತುರಾಜ್ ಗಾಯಕವಾಡ 91 ಜಲಜ್ ಸಕ್ಸೆನಾ 49 ಎಂ.ಡಿ. ನಿಧೀಶ್ 42ಕ್ಕೆ4) ಪೊರೊವೊರಿಮ್: ಗೋವಾ: 86 ಓವರ್‌ಗಳಲ್ಲಿ 3ಕ್ಕೆ291 (ಅಭಿನವ್ ತೇಜರಾಣಾ ಬ್ಯಾಟಿಂಗ್ 130 ಲಲಿತ್ ಯಾದವ್ ಬ್ಯಾಟಿಂಗ್ 80 ವಿಷು 86ಕ್ಕೆ3). ಇಂದೋರ್: ಪಂಜಾಬ್: 84.3 ಓವರ್‌ಗಳಲ್ಲಿ 232 (ಉದಯ ಶರಣ್ 75 ಕೃಷ್ ಭಗರ್ ಔಟಾಗದೇ 39 ಸಾರಾಂಶ್ ಜೈನ್ 75ಕ್ಕೆ6) ಮಧ್ಯಪ್ರದೇಶ: 3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 6.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.