
ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಡ್ರಾ ಮಾಡಿಕೊಳ್ಳುವ ಮೂಲಕ ಜಮ್ಮು ಮತ್ತು ಕಾಶ್ಮೀರ ತಂಡವು 67 ವರ್ಷಗಳ ರಣಜಿ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಈ ಬಾರಿಯ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಹಾಗೂ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿ ಇಲ್ಲಿದೆ..
ಈ ಬಾರಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕದ ಸ್ಮರಣ್ ರವಿಚಂದ್ರನ್ ಅವರು ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡರು. 9 ಪಂದ್ಯಗಳ 14 ಇನಿಂಗ್ಸ್‌ಗಳಲ್ಲಿ 86.36 ಸರಾಸರಿಯಲ್ಲಿ 950 ರನ್ ಗಳಿಸಿದರು. ಇದರಲ್ಲಿ 4 ಶತಕಗಳು ಕೂಡ ಸೇರಿವೆ.
23 ವರ್ಷದ ದೆಹಲಿಯ ಎಡಗೈ ಬ್ಯಾಟರ್ ಆಯುಷ್ ದೋಸೆಜಾ, 12 ಇನಿಂಗ್ಸ್‌ಗಳಲ್ಲಿ 949 ರನ್ ಬಾರಿಸುವ ಮೂಲಕ, ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ದೆಹಲಿ ತಂಡದ ಆರಂಭಿಕ ಆಟಗಾರ ಸನತ್ ಸಾಂಗ್ವಾನ್, 14 ಇನಿಂಗ್ಸ್‌ಗಳಲ್ಲಿ 828 ರನ್ ಗಳಿಸಿದ್ದಾರೆ. ಈ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಅನುಭವಿ ಆಟಗಾರರಾದ ಕರುಣ್ ನಾಯರ್ (699 ರನ್) ಹಾಗೂ ಮಾಯಂಕ್ ಅಗರವಾಲ್ (678 ರನ್) ಟೂರ್ನಿಯಲ್ಲಿ 500 ರನ್ ಗಡಿದಾಟಿದ ಕರ್ನಾಟಕ ತಂಡದ ಇತರೆ ಬ್ಯಾಟರ್‌ಗಳಾಗಿದ್ದಾರೆ.
ಈ ಬಾರಿಯ ರಣಜಿ ಟೂರ್ನಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಮಧ್ಯಮವೇಗಿ ಅಕೀಬ್ ನಬಿ ದಾರ್ ಅವರು 10 ಪಂದ್ಯಗಳಲ್ಲಿ 60 ವಿಕೆಟ್ ಪಡೆಯುವ ಮೂಲಕ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಉತ್ತರಾಖಂಡದ ಎಡಗೈ ಸ್ಪಿನ್ನರ್ ಮಯಂಕ್ ಮಿಶ್ರಾ, 8 ಪಂದ್ಯಗಳಲ್ಲಿ 59 ವಿಕೆಟ್ ಪಡೆಯುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಕರ್ನಾಟಕ ತಂಡದ ಲೆಗ್ ಬ್ರೇಕ್ ಬೌಲರ್ ಶ್ರೇಯಸ್ ಗೋಪಾಲ್ ಅವರು 10 ಪಂದ್ಯಗಳಲ್ಲಿ 48 ವಿಕೆಟ್ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.