ADVERTISEMENT

Ranji Trophy: ಹುಬ್ಬಳ್ಳಿಯಲ್ಲಿ ‘ರಣಜಿ’ಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 4:48 IST
Last Updated 11 ನವೆಂಬರ್ 2025, 4:48 IST
ಹುಬ್ಬಳ್ಳಿಯ ರಾಜನಗರದಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ–ಚಂಡೀಗಡ ತಂಡಗಳ ನಡುವಿನ ರಣಜಿ ಪಂದ್ಯಕ್ಕೆ ಸಿದ್ಧತೆಯಲ್ಲಿ ತೊಡಗಿದ್ದ ಸಿಬ್ಬಂದಿ
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ರಾಜನಗರದಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ–ಚಂಡೀಗಡ ತಂಡಗಳ ನಡುವಿನ ರಣಜಿ ಪಂದ್ಯಕ್ಕೆ ಸಿದ್ಧತೆಯಲ್ಲಿ ತೊಡಗಿದ್ದ ಸಿಬ್ಬಂದಿ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಒಂದೂವರೆ ವರ್ಷದ ಬಳಿಕ ಮತ್ತೊಂದು ರಣಜಿ ಪಂದ್ಯಕ್ಕೆ ಭರದ ಸಿದ್ಧತೆ ನಡೆದಿದೆ. ಹಸಿರಿನಿಂದ ಕೂಡಿದ ಇಲ್ಲಿನ ನೃಪತುಂಗ ಬೆಟ್ಟದ ತಪ್ಪಲಿನಲ್ಲಿರುವ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಕ್ರೀಡಾಂಗಣದಲ್ಲಿ ನವೆಂಬರ್‌ 16ರಿಂದ ಪಂದ್ಯ ನಡೆಯಲಿದೆ.

ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ಚಂಡೀಗಡ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ನವೆಂಬರ್ 14ರಂದು ನಗರಕ್ಕೆ ಬಂದು ಅಭ್ಯಾಸ ನಡೆಸುವ ಸಾಧ್ಯತೆ ಇದೆ.

2024ರ ಜನವರಿ 5 ರಿಂದ 8ರವರೆಗೆ ನಡೆದಿದ್ದ ಪಂಜಾಬ್‌ ಎದುರಿನ ಪಂದ್ಯದಲ್ಲಿ ಕರ್ನಾಟಕ ತಂಡ ಏಳು ವಿಕೆಟ್‌ಗಳಿಂದ ಜಯಿಸಿತ್ತು. ಫೆಬ್ರುವರಿ 16ರಿಂದ 18ರವರೆಗೆ ನಡೆದ ಚಂಡೀಗಡ ಎದುರಿನ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. 

ADVERTISEMENT

ಅಕ್ಟೋಬರ್‌ನಲ್ಲಿ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯ ತಮಿಳುನಾಡು ಎದುರಿನ ಪಂದ್ಯಕ್ಕೆ ಸಹ ಇದೇ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ರಣಜಿ ಅಲ್ಲದೆ ಭಾರತ ‘ಎ’ ಮತ್ತು ವೆಸ್ಟ್‌ ಇಂಡಿಸ್‌ ‘ಎ’ (2013–14),  ಭಾರತ ‘ಎ’–ಶ್ರೀಲಂಕಾ ‘ಎ’ (2019–20) ಮತ್ತು ಭಾರತ ‘ಎ’ –ನ್ಯೂಜಿಲೆಂಡ್ ‘ಎ’ (2022–23) ತಂಡಗಳ ನಡುವಿನ ಪಂದ್ಯಗಳು ಸಹ ಇಲ್ಲಿ ನಡೆದಿವೆ.

ಸಿದ್ಧತೆ: ಪಂದ್ಯಕ್ಕಾಗಿ ಕ್ರೀಡಾಂಗಣದಲ್ಲಿ ಅಂತಿಮ ಹಂತದ ಸಿದ್ಧತೆಯ ಭಾಗವಾಗಿ, ಸ್ವಚ್ಛತೆ ಪ್ರಕ್ರಿಯೆ ನಡೆದಿದೆ. ಗ್ಯಾಲರಿಯ ಕಂಬಗಳಿಗೆ ಬಣ್ಣ ಹಚ್ಚಲಾಗುತ್ತಿದೆ. ಕ್ರೀಡಾಂಗಣದ 10 ಮಂದಿ ಸಿಬ್ಬಂದಿ ಇದರಲ್ಲಿ ನಿರತರಾಗಿದ್ದಾರೆ. ಬಿಸಿಸಿಐನ ತಟಸ್ಥ ಪಿಚ್‌ ಕ್ಯುರೇಟರ್ ಆರ್.ವೆಂಕಟಕೃಷ್ಣನ್‌ ಅವರು ಸೋಮವಾರವೇ ನಗರಕ್ಕೆ ಬಂದಿದ್ದು, ಅವರ ನೇತೃತ್ವದಲ್ಲಿ ಪಿಚ್‌ ಸಿದ್ಧಗೊಳ್ಳಲಿದೆ.

ಕೆಎಸ್‌ಸಿಎ ಧಾರವಾಡ ವಲಯದ ಹಂಗಾಮಿ ನಿಮಂತ್ರಕ ನಿಖಿಲ್ ಭೂಸದ ಪ್ರತಿಕ್ರಿಯಿಸಿ, ‘2024ರಲ್ಲಿ ಎರಡು ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಗಳನ್ನು ಇಲ್ಲಿ ಆಯೋಜಿಸಲಾಗಿತ್ತು. ಈ ವರ್ಷ ಮತ್ತೊಂದು ಪಂದ್ಯಕ್ಕೆ ಆತಿಥ್ಯ ವಸಹಿಸುವ ಅವಕಾಶ ಒದಗಿಬಂದಿದೆ’ ಎಂದರು.

‘ಪಂದ್ಯ ವೀಕ್ಷಿಸಲು ಬರುವ ಸಾರ್ವಜನಿಕರು, ವಿದ್ಯಾರ್ಥಿಗಳು, ಮಕ್ಕಳು, ವಿವಿಧ ಕ್ಲಬ್‌ಗಳ ಆಟಗಾರರಿಗೆ ಮೂರನೇ ಗೇಟ್‌ನಿಂದ  ಉಚಿತ ಪ್ರವೇಶ ಇರುತ್ತದೆ. ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ, 400 ಆಸನಗಳ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಟ್ಯಾಂಡ್‌ ಇರಲಿದೆ’ ಎಂದರು.

‘ಯಶಸ್ವಿಯಾಗಿ ಪಂದ್ಯ ನಡೆಸಲು ಎಲ್ಲ ಸಿದ್ಧತೆ ನಡೆದಿವೆ. ಮಳೆ ಬಂದರೆ ಪರಿಸ್ಥಿತಿ ನಿಭಾಯಿಸಲು ಎರಡು ಸೂಪರ್ ಸಾಪರ್ ಯಂತ್ರ ಯಂತ್ರಗಳಿವೆ. ಆಟಗಾರರ ಅಭ್ಯಾಸಕ್ಕೆ 10 ಪಿಚ್‌ಗಳಿವೆ’ ಎಂದು ತಿಳಿಸಿದರು. 

ಮಿಂಚಿದ್ದ ರೋಹಿತ್‌ಕುಮಾರ್‌

ನಗರದಲ್ಲಿ 2024ರಲ್ಲಿ ನಡೆದಿದ್ದ ರಣಜಿ ಪಂದ್ಯದಲ್ಲಿ ಧಾರವಾಡ ವಲಯದಿಂದ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್ ಆಟಗಾರ ಎಡಗೈ ಸ್ಪಿನ್ನರ್‌ ಎ.ಸಿ. ರೋಹಿತ್ ಕುಮಾರ್ ಮತ್ತು ವಿಕೆಟ್ ಕೀಪರ್ ಬೆಳಗಾವಿಯ ಸುಜಯ್‌ ಸತೇರಿ ಸ್ಥಾನ ಪಡೆದಿದ್ದರು.  ಪಂಜಾಬ್ ಎದುರಿನ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದ ರೋಹಿತ್‌ 22 ರನ್‌ ಗಳಿಸಿ ಮಿಂಚಿದ್ದರು. ಸುಜಯ್‌ಗೆ ಆಡುವ 11ರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಈ ಬಾರಿ ಧಾರವಾಡ ವಲಯದ ಯಾವ ಆಟಗಾರರೂ ತಂಡದಲ್ಲಿಲ್ಲ.

ನ.16ರಿಂದ ರಣಜಿ ಪಂದ್ಯ ನಡೆಯಲಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ವಿವಿಧ ಕ್ಲಬ್‌ಗಳ ಆಟಗಾರರು ಕ್ರೀಡಾಂಗಣಕ್ಕೆ ಬಂದು ಪಂದ್ಯ ವೀಕ್ಷಿಸಬೇಕು.
ನಿಖಿಲ್ ಭೂಸದ್, ಹಂಗಾಮಿ ನಿಮಂತ್ರಕ, ಕೆಎಸ್‌ಸಿಎ ಧಾರವಾಡ ವಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.