
ಹುಬ್ಬಳ್ಳಿ: ಉತ್ತಮ ಲಯದಲ್ಲಿರುವ ಕರ್ನಾಟಕದ ಸ್ಪಿನ್ನರ್ ಶ್ರೇಯಸ್ ಗೋಪಾಲ್ (73ಕ್ಕೆ7 ಮತ್ತು 45ಕ್ಕೆ3) ಮತ್ತು ಶಿಖರ್ ಶೆಟ್ಟಿ (43ಕ್ಕೆ2 ಮತ್ತು 61ಕ್ಕೆ 5) ಅವರ ಸ್ಪಿನ್ ಮೋಡಿಗೆ ಚಂಡೀಗಢ ತಂಡ ರಣಜಿ ಟ್ರೋಫಿ ಪಂದ್ಯದ ಮೂರನೇ ದಿನವಾದ ಮಂಗಳವಾರ ಇನಿಂಗ್ಸ್ ಮತ್ತು 185 ರನ್‌ಗಳ ಭಾರಿ ಸೋಲು ಅನುಭವಿಸಿತು. ಮಯಂಕ್ ಬಳಗಕ್ಕೆ ಪ್ರಸಕ್ತ ಋತುವಿನಲ್ಲಿಇದು ಎರಡನೇ ಗೆಲುವು.
ಕರ್ನಾಟಕ ತಂಡ 5 ಪಂದ್ಯಗಳಿಂದ 21 ಅಂಕ ಸಂಗ್ರಹಿಸಿ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೆ ಏರಿತು. ಮಹಾರಾಷ್ಟ್ರ ತಂಡ (5 ಪಂದ್ಯಗಳಿಂದ 18) ಎರಡನೇ ಸ್ಥಾನದಲ್ಲಿದೆ. ಚಂಡೀಗಢಕ್ಕೆ ಇದು ನಾಲ್ಕನೇ ಸೋಲು.
ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಊಟದ ವಿರಾಮದ ನಂತರ ಚಂಡೀಗಢ (ಸೋಮವಾರ: 4 ವಿಕೆಟ್‌ಗೆ 72) ಮೊದಲ ಇನಿಂಗ್ಸ್‌ನಲ್ಲಿ 222 ರನ್‌ಗಳಿಗೆ ಆಲೌಟ್ ಆಯಿತು.ಫಾಲೊಆನ್‌ಗೆ ಒಳಗಾಗಿ ಎರಡನೇ ಇನಿಂಗ್ಸ್ ಆರಂಭಿಸಿದ ಚಂಡೀಗಢ ಹೋರಾಟ ತೋರದೇ ಶರಣಾಯಿತು. ಕೇವಲ ಎರಡೂವರೆ ಗಂಟೆಯಲ್ಲಿ 140 ರನ್‌ಗಳಿಗೆ ಆಲೌಟ್ ಆಯಿತು.
ಮೂರನೇ ದಿನ 16 ವಿಕೆಟ್‌ಗಳು ಪತನವಾದವು. ಅದರಲ್ಲಿ 14 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾದವು. ಸೌರಾಷ್ಟ್ರ ವಿರುದ್ಧ ಈ ಋತುವಿನಲ್ಲಿ ಪದಾರ್ಪಣೆ ಮಾಡಿರುವ ಎಡಗೈ ಸ್ಪಿನ್ನರ್ ಶಿಖರ್ ಮೊದಲ ಬಾರಿ ಐದು ವಿಕೆಟ್ ಗೊಂಚಲು ಗಳಿಸಿದರು. ಇದು ಅವರಿಗೆ ಮೂರನೇ ಪಂದ್ಯ.
ಮಂಗಳವಾರ ಬೆಳಿಗ್ಗೆ ಪ್ರವಾಸಿ ತಂಡಕ್ಕೆ ಶ್ರೇಯಸ್ ಮೊದಲ ಎಸೆತದಲ್ಲೇ ಪೆಟ್ಟು ಕೊಟ್ಟರು. ಅಂಕಿತ್ ಕೌಶಿಕ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು. ತಾಳ್ಮೆಯಿಂದ ಆಡುತ್ತಿದ್ದ ರಾಜ್ ಬಾವಾ (10, 42ಎ) ಅವರ ವಿಕೆಟ್ ಸಹ ಶ್ರೇಯಸ್ ಪಾಲಾಯಿತು. ಈ ಹಂತದಲ್ಲಿ ನಾಯಕ ಮನನ್ ವೋಹ್ರಾ ಮತ್ತು ಗೌರವ್ ಪುರಿ (32, 62ಎ, 4X6) ಏಳನೇ ವಿಕೆಟ್‌ಗೆ 84 (132) ರನ್ ಸೇರಿಸಿ ಪ್ರತಿರೋಧದ ಮುನ್ಸೂಚನೆ ನೀಡಿದರು. ಗೌರವ್ ಅವರನ್ನು ಬೌಲ್ಡ್ ಮಾಡಿದ ಶಿಖರ್ ಜತೆಯಾಟ ಮುರಿದರು. ಔಟ್ ಆಗುವ ಮೊದಲು ಶ್ರೇಯಸ್ ಬೌಲಿಂಗ್‌ನಲ್ಲಿ ಗೌರವ್ ಸತತ ಮೂರು ಬೌಂಡರಿಗಳನ್ನು ಬಾರಿಸಿದರು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಏಕಾಂಗಿಯಾಗಿ ಹೋರಾಡಿದ ಮನನ್ ವೋಹ್ರಾ ಅಜೇಯ ಶತಕ (106, 161ಎ, 4X12, 6X1) ಬಾರಿಸಿದರು. ಆದರೆ ತಂಡವನ್ನು ಫಾಲೊಆನ್‌ನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಎರಡನೇ ದಿನದಾಟದಲ್ಲಿ ಮೂರು ವಿಕೆಟ್ ಕಬಳಿಸಿದ್ದ ಶ್ರೇಯಸ್, ಮೂರನೇ ದಿನಾಟದಲ್ಲಿ ಮತ್ತೆ ನಾಲ್ಕು ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು. ಅವರು ಈ ಋತುವಿನಲ್ಲಿ ಎರಡನೇ ಬಾರಿ ಐದು ವಿಕೆಟ್ (73ಕ್ಕೆ 7) ಗೊಂಚಲು ಗಳಿಸಿದರು.
325 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡಕ್ಕೆ ವೇಗಿ ವಿದ್ವತ್ ಕಾವೇರಪ್ಪ ಆರಂಭದಲ್ಲೇ ಆಘಾತ ನೀಡಿದರು. ವಿದ್ವತ್ ಹಾಕಿದ ಮೂರನೇ ಓವರ್‌ನಲ್ಲಿ ಆರಂಭಿಕ ಆಟಗಾರ ಅರ್ಜುನ್ ಆಜಾದ್ ಮಿಡ್ ವಿಕೆಟ್‌ನಲ್ಲಿ ಮೊಹ್ಸಿನ್ ಖಾನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
ಶಿವಂ ಭಾಂಬ್ರಿ (43, 47ಎ, 4X4, 6X2) ಮತ್ತು ನಿಖಿಲ್ ಠಾಕೂರ್ (19, 59ಎ, 4X2) ಎರಡನೇ ವಿಕೆಟ್‌ಗೆ 64 ರನ್ (74ಎ) ಸೇರಿಸಿದ್ದೇ ಇನಿಂಗ್ಸ್‌ನ ದೊಡ್ಡ ಜತೆಯಾಟವಾಯಿತು. ಶಿಖರ್ ಹಾಕಿದ 16 ಓವರ್‌ನ ಮೊದಲ ಎಸೆತದಲ್ಲಿ ಶಿವಂ ಮೊದಲ ಸ್ಲಿಪ್‌ನಲ್ಲಿದ್ದ ಸ್ಮರಣ್ ರವಿಚಂದ್ರನ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. ನಂತರ ನಿಯಮಿತವಾಗಿ ವಿಕೆಟ್ ಉರುಳಿದವು.
ದಿನದಾಟ ಮುಗಿಯಲು ಎಂಟು ಓವರ್‌ಗಳು ಬಾಕಿ ಇದ್ದಾಗ ವಿಶು ಕಶ್ಯಪ್ ಅವರ ವಿಕೆಟ್ ಕಿತ್ತ ಶಿಖರ್ ಇನಿಂಗ್ಸ್‌ಗೆ ತೆರೆ ಎಳೆದರು. ಬ್ಯಾಟಿಂಗ್‌ನಲ್ಲೂ ಅವರು ಅರ್ಧಶತಕ (59) ಗಳಿಸಿದ್ದರು.
ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರಿಂದ ತುಂಬಾ ಖುಷಿಯಾಗಿದೆ. ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿತ್ತು. ಅಂತಹ ಪಿಚ್‌ನಲ್ಲಿ 5 ವಿಕೆಟ್ ಪಡೆದಿದ್ದು ಸದಾ ನೆನಪಿನಲ್ಲಿ ಉಳಿಯುತ್ತದೆ.ಶಿಖರ್ ಶೆಟ್ಟಿ, ಎಡಗೈ ಸ್ಪಿನ್ನರ್
ಆಕ್ರಮಣಕಾರಿ ಶೈಲಿ ಅನುಸರಿಸಿದ್ದರಿಂದ ಮೂರೇ ದಿನಗಳಲ್ಲಿ ಪಂದ್ಯ ಗೆಲ್ಲಲು ಸಾಧ್ಯವಾಯಿತು. ಈ ಪಂದ್ಯದಲ್ಲಿ ಅರ್ಧಶತಕ, 10 ವಿಕೆಟ್ ಗಳಿಸಿದ್ದಕ್ಕೆ ಖಷಿಯಾಗಿದೆ. ನಾನು ಆಲ್‌ರೌಂಡರ್ ಆಗಿದ್ದು, ಮುಂದಿನ ಪಂದ್ಯಗಳಲ್ಲಿ ಅರ್ಧಶತಕವನ್ನು ಶತಕವಾಗಿ ಪರಿವರ್ತಿಸಲು ಪ್ರಯತ್ನಿಸುತ್ತೇನೆ..ಶ್ರೇಯಸ್ ಗೋಪಾಲ್, ಆಲ್‌ರೌಂಡರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.