ADVERTISEMENT

ರಣಜಿ ಟ್ರೋಫಿ: ವಿದ್ವತ್‌, ವೈಶಾಖ ದಾಳಿಗೆ ಕುಸಿದ ಕೇರಳ

ಪಿಟಿಐ
Published 3 ನವೆಂಬರ್ 2025, 15:47 IST
Last Updated 3 ನವೆಂಬರ್ 2025, 15:47 IST
ವಿದ್ವತ್‌ ಕಾವೇರಪ್ಪ  
ವಿದ್ವತ್‌ ಕಾವೇರಪ್ಪ     

ತಿರುವನಂತಪುರ: ವೇಗಿಗಳಾದ ವಿದ್ವತ್‌ ಕಾವೇರಪ್ಪ (42ಕ್ಕೆ 4) ಮತ್ತು ವೈಶಾಖ ವಿಜಯಕುಮಾರ್ (62ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ನೆರವಿನಿಂದ ಕರ್ನಾಟಕ ತಂಡವು ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 348 ರನ್‌ಗಳ ಭಾರಿ ಮುನ್ನಡೆ ಪಡೆಯಿತು. ಹಾಲಿ ರನ್ನರ್ಸ್‌ ಅಪ್‌ ಕೇರಳ ತಂಡದ ಮೇಲೆ ಫಾಲೋಆನ್‌ ಹೇರಿತು.

ಮಂಗಲಪುರದ ಕೆಸಿಎ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೇಲೆ ಕರ್ನಾಟಕ ತಂಡವು ಮೂರನೇ ದಿನವಾದ ಸೋಮವಾರ ಮತ್ತಷ್ಟು ನಿಯಂತ್ರಣ ಸಾಧಿಸಿತು. ಕರುಣ್ ನಾಯರ್ (233) ಮತ್ತು ರವಿಚಂದ್ರನ್ ಸ್ಮರನ್ (220) ಅವರ ದ್ವಿಶತಕಗಳ ನೆರವಿನಿಂದ ಮಯಂಕ್‌ ಅಗರವಾಲ್‌ ಪಡೆ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗಳಿಗೆ 586 ರನ್ ಗಳಿಸಿ ಡಿಕ್ಲೇರ್ಡ್‌ ಮಾಡಿಕೊಂಡಿತ್ತು.

ಇದಕ್ಕೆ ಉತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಕೇರಳ ತಂಡವು ವಿದ್ವತ್‌ ಮತ್ತು ವೈಶಾಖ ದಾಳಿಗೆ ತತ್ತರಿಸಿ 238 ರನ್‌ಗಳಿಗೆ ಕುಸಿಯಿತು. ಇದರಿಂದಾಗಿ ಭಾರಿ ರನ್‌ಗಳ ಮುನ್ನಡೆ ಪಡೆದ ಕರ್ನಾಟಕ ತಂಡವು ಹಾಲಿ ಟೂರ್ನಿಯಲ್ಲಿ ಮೊದಲ ಗೆಲುವಿನತ್ತ ಹೆಜ್ಜೆಹಾಕಿದೆ.

ADVERTISEMENT

ಭಾನುವಾರ ಮೂರು ವಿಕೆಟ್‌ಗೆ 21 ರನ್‌ ಗಳಿಸಿ ಸಂಕಷ್ಟದಲ್ಲಿದ್ದ ಆತಿಥೇಯ ತಂಡಕ್ಕೆ ಬಾಬಾ ಅಪರಾಜಿತ್ (88;159ಎ) ಕೊಂಚ ಆಸರೆಯಾದರು. ಅಪರಾಜಿತ್ ಮತ್ತು ಸಚಿನ್ ಬೇಬಿ (31) ಅವರು ಐದನೇ ವಿಕೆಟ್‌ ಜೊತೆಯಾಟದಲ್ಲಿ 86 ರನ್‌ ಸೇರಿಸಿದರು. ವಿದ್ವತ್‌ ಅವರು ಈ ಜೊತೆಯಾಟವನ್ನು ಮುರಿದರು.

ನಂತರದಲ್ಲಿ ಅಹಮದ್ ಇಮ್ರಾನ್ (31), ಶೋನ್ ರೋಜರ್ (29) ಅಲ್ಪ ಹೋರಾಟ ತೋರಿದ್ದರಿಂದ ಆತಿಥೇಯ ತಂಡದ ಮೊತ್ತ 200ರ ಗಡಿ ದಾಟಲು ಸಾಧ್ಯವಾಯಿತು. 

ಎರಡನೇ ಇನಿಂಗ್ಸ್‌ ಆರಂಭಿಸಿದ ಕೇರಳ ತಂಡವು ದಿನದಾಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 10 ರನ್‌ ಗಳಿಸಿದೆ. ಕೊನೆಯ ದಿನದ ಆಟ ಬಾಕಿ ಉಳಿದಿದ್ದು, ಇನಿಂಗ್ಸ್‌ ಸೋಲು ತಪ್ಪಿಸಲು 338 ರನ್‌ ಗಳಿಸಬೇಕಿದೆ. ಇನಿಂಗ್ಸ್‌ ಗೆಲುವು ದಾಖಲಿಸಲು ಕರ್ನಾಟಕಕ್ಕೆ 10 ವಿಕೆಟ್‌ಗಳ ಅಗತ್ಯವಿದೆ.

ಪರಂತಾಪ್‌ ಬದಲು ಪಡಿಕ್ಕಲ್‌

ಪುಣೆಯಲ್ಲಿ ಮಹಾರಾಷ್ಟ್ರ (ನ.8-11) ವಿರುದ್ಧ ಮತ್ತು ಹುಬ್ಬಳ್ಳಿಯಲ್ಲಿ ಚಂಡೀಗಢ (ನ.16-19) ವಿರುದ್ಧದ ರಣಜಿ ಟ್ರೋಫಿ ಪಂದ್ಯಗಳಿಗೆ 15 ಸದಸ್ಯರ ಕರ್ನಾಟಕ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ‘ಟೆಸ್ಟ್‌’ಗೆ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದ ಎಡಗೈ ಬ್ಯಾಟರ್‌ ದೇವದತ್ತ ಪಡಿಕ್ಕಲ್‌ ಅವರು ಮತ್ತೆ ರಾಜ್ಯ ತಂಡಕ್ಕೆ ವಾಪಸಾಗಿದ್ದಾರೆ. ಅವರ ಬದಲು ಅವಕಾಶ ಪಡೆದಿದ್ದ ಯಶೋವರ್ಧನ್ ಪರಂತಾಪ್ ಅವರನ್ನು ಮುಂದಿನ ಎರಡು ಪಂದ್ಯಗಳಿಗೆ ಕೈಬಿಡಲಾಗಿದೆ. 

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಕರ್ನಾಟಕ: 167 ಓವರ್‌ಗಳಲ್ಲಿ 5 ವಿಕೆಟ್‌ಗೆ 586 ಡಿಕ್ಲೇರ್ಡ್‌. ಕೇರಳ: 95 ಓವರ್‌ಗಳಲ್ಲಿ 238 (ಸಚಿನ್ ಬೇಬಿ 31, ಬಾಬಾ ಅಪರಾಜಿತ್ 88, ಅಹಮದ್ ಇಮ್ರಾನ್ 31, ಶೋನ್ ರೋಜರ್ 29; ವಿದ್ವತ್‌ ಕಾವೇರಪ್ಪ 42ಕ್ಕೆ 4, ವೈಶಾಖ ವಿಜಯಕುಮಾರ್ 52ಕ್ಕೆ 3, ಶಿಖರ್‌ ಶೆಟ್ಟಿ 53ಕ್ಕೆ 2). ಎರಡನೇ ಇನಿಂಗ್ಸ್‌: ಕೇರಳ: 3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 10. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.