ADVERTISEMENT

Ranji Trophy | ಫಲ ನೀಡದ ಕರ್ನಾಟಕದ ಹೋರಾಟ: ಅಪಾಯದಿಂದ ಪಾರಾದ ಸೌರಾಷ್ಟ್ರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 14:34 IST
Last Updated 18 ಅಕ್ಟೋಬರ್ 2025, 14:34 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ರಾಜಕೋಟ್‌: ಮೂರನೆ ದಿನ ಟೀ ವೇಳೆಗೆ ಸೌರಾಷ್ಟ್ರ, ಕರ್ನಾಟಕ ತಂಡದ ವಿರುದ್ಧ ನಿರ್ಣಾಯಕ ನಾಲ್ಕು ರನ್‌ಗಳ ಮುನ್ನಡೆ ಗಳಿಸಿದಾಗಲೇ ಪಂದ್ಯದ ಭವಿಷ್ಯ ಬಹುತೇಕ ನಿರ್ಧಾರವಾಗಿತ್ತು. ಅಂತಿಮ ದಿನವಾದ ಶನಿವಾರ ಟೀ ವೇಳೆ ಸೌರಾಷ್ಟ್ರ ತಂಡ ಆರಂಭದಲ್ಲಿ ಕುಸಿದು ಆತಂಕಕ್ಕೆ ಒಳಗಾದರೂ  ಅಂತಿಮವಾಗಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ADVERTISEMENT

‘ಬಿ’ ಗುಂಪಿನ ಮೊದಲ ಸುತ್ತಿನ ಪಂದ್ಯದಲ್ಲಿ ಸೌರಾಷ್ಟ್ರ ಮೊದಲ ಇನಿಂಗ್ಸ್ ಮುನ್ನಡೆಗಾಗಿ ಮೂರು ಅಂಕ  ಮತ್ತು ಕರ್ನಾಟಕ ಒಂದು ಅಂಕ ಪಡೆದವು.

ನಿರಂಜನ ಶಾ ಕ್ರೀಡಾಂಗಣದಲ್ಲಿ ಕೊನೆಯ ದಿನ, 1 ವಿಕೆಟ್‌ಗೆ 89 ರನ್‌ಗಳೊಡನೆ ಎರಡನೇ ಇನಿಂಗ್ಸ್  ಮುಂದುವರಿಸಿದ ಕರ್ನಾಟಕ 232 ರನ್‌ಗಳಿಗೆ ಆಲೌಟ್‌ ಆಯಿತು. ಮೊತ್ತ 96 ರನ್‌ಗಳಾಗಿದ್ದಾಗ ದೇವದತ್ತ ಪಡಿಕ್ಕಲ್ (19) ನಿರ್ಗಮಿಸಿದರು. ನಂತರ ನಿಯಮಿತವಾಗಿ ವಿಕೆಟ್‌ಗಳು ಬಿದ್ದವು. ನಾಯಕ ಹಾಗೂ ಆರಂಭ ಆಟಗಾರ ಮಯಂಕ್ ಅಗರವಾಲ್ (64, 126ಎ, 4x4) ಐದನೆಯವರಾಗಿ ನಿರ್ಗಮಿಸಿದರು.

ವಿಕೆಟ್ ಕೀಪರ್ ಕೆ.ಎಲ್.ಶ್ರೀಜಿತ್ (31, 30ಎ) ಮತ್ತು ಕೊನೆಯಲ್ಲಿ ವೆಂಕಟೇಶ್ (28, 67ಎ) ಅವರೂ ಉಪಯುಕ್ತ ಆಟವಾಡಿದರು.

ಗೆಲುವಿಗೆ 229 ರನ್ ಗಳಿಸಬೇಕಾಗಿದ್ದ ಸೌರಾಷ್ಟ್ರ ತಂಡಕ್ಕೆ ಶ್ರೇಯಸ್‌ ಗೋಪಾಲ್ ಪೆಟ್ಟು ನೀಡಿದರು. ಆತಿಥೇಯ ತಂಡ 13 ಓವರುಗಳಾಗುವಷ್ಟರಲ್ಲಿ 4 ವಿಕೆಟ್‌ಗೆ 43 ರನ್ ಗಳಿಸಿ ಅಪಾಯದಲ್ಲಿತ್ತು. ಹಾರ್ವಿಕ್‌ ದೇಸಾಯಿ (13) ಚಿರಾಗ್ ಜಾನಿ (15) ಮತ್ತು ಅನ್ಶ್‌ ಗೊಸಾಯಿ (2) ಅವರ ವಿಕೆಟ್‌ಗಳು ಶ್ರೇಯಸ್‌ ಗೋಪಾಲ್‌ ಪಾಲಾಗಿದ್ದವು. ಎಡಗೈ ಸ್ಪಿನ್ನರ್ ಶಿಖರ್‌ ಶೆಟ್ಟಿ ಅವರು ಅರ್ಪಿತ್ ವಾಸವದಾ (2) ವಿಕೆಟ್‌ ಪಡೆದಾಗ ಸೌರಾಷ್ಟ್ರ ಅಪಾಯಕ್ಕೆ ಸಿಲುಕಿತು. ಕರ್ನಾಟಕದ ಬೌಲರ್‌ಗಳು ಒತ್ತಡ ಹೇರಿದರು.

ಆದರೆ ಸಮರ್‌ ಗಜರ್ (ಔಟಾಗದೇ 43) ಮತ್ತು ಜೇ ಗೋಹಿಲ್ (41) ಜೋಡಿ ಆತಂಕದ ನಡುವೆ 25 ಓವರುಗಳನ್ನು ನಿಭಾಯಿಸಿ ಕುಸಿತ ತಪ್ಪಿಸಿದರು. ಐದನೇ ವಿಕೆಟ್‌ಗೆ 81 ರನ್ ಜೊತೆಯಾಟ ಸೌರಾಷ್ಟ್ರ ತಂಡ ಸುರಕ್ಷಿತವಾಗಿ ಸಮಯ ಕಳೆಯಿತು.

ಪಂದ್ಯದಲ್ಲಿ 10 ವಿಕೆಟ್‌ ಪಡೆದ ಧರ್ಮೇಂದ್ರ ಸಿಂಹ ಜಡೇಜ ಪಂದ್ಯದ ಆಟಗಾರನಾದರು.

ಕರ್ನಾಟಕ ತಂಡ ತನ್ನ ಎರಡನೇ ಪಂದ್ಯವನ್ನು ಇದೇ 25ರಿಂದ ಶಿವಮೊಗ್ಗದಲ್ಲಿ ಗೋವಾ ವಿರುದ್ಧ ಆಡಲಿದೆ.

ಸ್ಕೋರುಗಳು: ಮೊದಲ ಇನಿಂಗ್ಸ್‌: ಕರ್ನಾಟಕ: 372; ಸೌರಾಷ್ಟ್ರ 376; ಎರಡನೇ ಇನಿಂಗ್ಸ್‌: ಕರ್ನಾಟಕ: 74.2 ಓವರುಗಳಲ್ಲಿ 232 (ಮಯಂಕ್ ಅಗರವಾಲ್ 64, ಕೃಷ್ಣನ್ ಶ್ರೀಜಿತ್ 31, ಎಂ.ವೆಂಕಟೇಶ್‌ 28; ಧರ್ಮೇಂದ್ರ ಸಿಂಹ ಜಡೇಜ 79ಕ್ಕೆ3, ಜಯದೇವ ಉನದ್ಕತ್‌ 49ಕ್ಕೆ2, ಯುವರಾಜ ಸಿನ್ಹ ದೋಡಿಯಾ 40ಕ್ಕೆ3, ಸಮರ್ ಗಜ್ಜರ್ 25ಕ್ಕೆ2); ಸೌರಾಷ್ಟ್ರ: 43 ಓವರುಗಳಲ್ಲಿ 5ಕ್ಕೆ 128 (ಸಮರ್ ಗಜ್ಜರ್ ಔಟಾಗದೇ 43, ಜೇ ಗೋಹಿಲ್ 41; ಶಿಖರ್ ಶೆಟ್ಟಿ 40ಕ್ಕೆ1, ಶ್ರೇಯಸ್ ಗೋಪಾಲ್ 43ಕ್ಕೆ3, ಮೊಹ್ಸಿನ್ ಖಾನ್ 30ಕ್ಕೆ1). ಪಂದ್ಯ ಡ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.