ADVERTISEMENT

ರಣಜಿ ಟ್ರೋಫಿ: ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಪಂದ್ಯ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 0:18 IST
Last Updated 8 ನವೆಂಬರ್ 2025, 0:18 IST
<div class="paragraphs"><p>ಕರ್ನಾಟಕ ತಂಡದ ನಾಯಕ ಮಯಂಕ್ ಅಗರ್‌ವಾಲ್ </p></div>

ಕರ್ನಾಟಕ ತಂಡದ ನಾಯಕ ಮಯಂಕ್ ಅಗರ್‌ವಾಲ್

   

–ಪ್ರಜಾವಾಣಿ ಸಂಗ್ರಹ ಚಿತ್ರ 

ಬೆಂಗಳೂರು: ಹಾಲಿ ರನ್ನರ್ಸ್‌ ಅಪ್‌ ಕೇರಳ ತಂಡವನ್ನು ಸುಲಭವಾಗಿ ಮಣಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಕರ್ನಾಟಕ ತಂಡವು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ. 

ADVERTISEMENT

ಮಂಗಲಪುರದ ಕೆಸಿಎ ಕ್ರಿಕೆಟ್‌ ಮೈದಾನದಲ್ಲಿ ಈಚೆಗೆ ನಡೆದ ತನ್ನ ಮೂರನೇ ಪಂದ್ಯದಲ್ಲಿ ಮಯಂಕ್‌ ಅಗರವಾಲ್‌ ಪಡೆಯು ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಆತಿಥೇಯ ಕೇರಳ ತಂಡವನ್ನು ಇನಿಂಗ್ಸ್‌ ಮತ್ತು 164 ರನ್‌ಗಳಿಂದ ಸೋಲಿಸಿತ್ತು. ಈ ಮೂಲಕ ಹಾಲಿ ಟೂರ್ನಿಯಲ್ಲಿ ಮೊದಲ ಗೆಲುವಿನ ಖಾತೆ ತೆರೆದಿತ್ತು. ಎಲೀಟ್ ಬಿ ಗುಂಪಿನಲ್ಲಿರುವ ಕರ್ನಾಟಕ, ತನ್ನ ಮೊದಲೆರಡು (ಸೌರಾಷ್ಟ್ರ ಮತ್ತು ಗೋವಾ ವಿರುದ್ಧ) ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು.

ಕೇರಳ ವಿರುದ್ಧದ ಪಂದ್ಯದಲ್ಲಿ ಅನುಭವಿ ಕರುಣ್‌ ನಾಯರ್‌ ಮತ್ತು ಸ್ಮರಣ್‌ ಆರ್. ಅಮೋಘ ದ್ವಿಶತಕ ದಾಖಲಿಸಿದ್ದರೆ, ಉತ್ತಮ ಫಾರ್ಮ್‌ನಲ್ಲಿರುವ ವಿದ್ವತ್ ಕಾವೇರಪ್ಪ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಕಬಳಿಸಿದ್ದರು. ಭರವಸೆಯ ಸ್ಪಿನ್ನರ್‌ಗಳಾದ ಶಿಖರ್‌ ಶೆಟ್ಟಿ ಮತ್ತು ಮೊಹ್ಸಿನ್‌ ಖಾನ್‌ ಕೂಡಾ ಪಂದ್ಯದಲ್ಲಿ ಕೈಚಳಕ ತೋರಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಮೊಹ್ಸಿನ್‌ ಆರು ವಿಕೆಟ್‌ ಪಡೆಯುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದರು.

ಆತಿಥೇಯರ ವಿರುದ್ಧ ಕೊನೆಯ ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿರುವ ಕರ್ನಾಟಕ ತಂಡವು ಮತ್ತೆ ಪಾರಮ್ಯ ಸಾಧಿಸುವ ಛಲದಲ್ಲಿದೆ. ಪಂದ್ಯದ ಮುನ್ನದಿನವಾದ ಶುಕ್ರವಾರ ಕ್ರೀಡಾಂಗಣದ ಪಿಚ್‌ ಒಣಗಿದ ಸ್ಥಿತಿಯಲ್ಲಿದ್ದು, ಆಟ ಮುಂದುವರಿದಂತೆ ಸ್ಪಿನ್‌ಗೆ ಅನುಕೂಲವಾಗುವ ಸಾಧ್ಯತೆಯಿದೆ. ಪಂದ್ಯಕ್ಕೆ ಮಳೆಯ ಮುನ್ಸೂಚನೆ ಇಲ್ಲ. ನಾಲ್ಕು ದಿನವೂ ಬಿಸಿಲಿನ ನಿರೀಕ್ಷೆಯಿದೆ. 

ಎಷ್ಟು ಬೌಲರ್‌ಗಳೊಂದಿಗೆ (ನಾಲ್ಕು ಅಥವಾ ಐದು) ಕಣಕ್ಕೆ ಇಳಿಯಲಿದೆ ಎಂಬ ಕುತೂಹಲವನ್ನು ಕರ್ನಾಟಕ ತಂಡವು ಕಾಯ್ದುಕೊಂಡಿದೆ. ಟೂರ್ನಿಯಲ್ಲಿ ಎರಡು ಅರ್ಧಶತಕಗಳೊಂದಿಗೆ ಆಲ್‌ರೌಂಡ್‌ ಪ್ರದರ್ಶನ ನೀಡಿರುವ ಅನುಭವಿ ಶ್ರೇಯಸ್‌ ಗೋಪಾಲ್‌ ಅವರೊಂದಿಗೆ ಮೊಹ್ಸಿನ್‌ ಮತ್ತು ಶಿಖರ್‌ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ‌

ವೇಗದ ಬೌಲಿಂಗ್‌ನಲ್ಲಿ ವಿದ್ವತ್‌ ಅವರಿಗೆ ಅಭಿಲಾಷ್‌ ಶೆಟ್ಟಿ ಅಥವಾ ಎಂ. ವೆಂಕಟೇಶ್‌ ಜೋಡಿಯಾಗುವ ನಿರೀಕ್ಷೆಯಿದೆ. ಇದೇ 14ರಿಂದ ದೋಹಾದಲ್ಲಿ ಆರಂಭವಾಗಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ಗಾಗಿ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವ ವೇಗಿ ವೈಶಾಖ ವಿಜಯ್‌ಕುಮಾರ್ ಅವರ ಬದಲಿಯಾಗಿ ವಿದ್ಯಾಧರ್ ಪಾಟೀಲ ಕರ್ನಾಟಕ ತಂಡವನ್ನು ಸೇರಿಕೊಂಡಿದ್ದಾರೆ. 

ಸೌರಾಷ್ಟ್ರ ಮತ್ತು ಕೇರಳ ತಂಡಗಳ ವಿರುದ್ಧ ಡ್ರಾ ಸಾಧಿಸಿ, ಚಂಡೀಗಢ ವಿರುದ್ಧ ಗೆಲುವು ದಾಖಲಿಸಿರುವ ಅಂಕಿತ್ ಬಾವ್ನೆ ಸಾರಥ್ಯದ ಮಹಾರಾಷ್ಟ್ರ ತಂಡವು ಹಾಲಿ ಟೂರ್ನಿಯಲ್ಲಿ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. 

ಪಂದ್ಯ ಆರಂಭ: ಬೆಳಿಗ್ಗೆ 9

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.