ADVERTISEMENT

Ranji Trophy: ಮಯಂಕ್ ಬಳಗಕ್ಕೆ ಸುಲಭ ಜಯದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 20:45 IST
Last Updated 19 ಡಿಸೆಂಬರ್ 2022, 20:45 IST
ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ಮತ್ತು ಸಹ ಆಟಗಾರರು –ಪ್ರಜಾವಾಣಿ ಚಿತ್ರ
ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ಮತ್ತು ಸಹ ಆಟಗಾರರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಈ ವಾರ ಉದ್ಯಾನನಗರಿಯಲ್ಲಿ ಮಳೆ ಸುರಿಯುವ ಮುನ್ಸೂಚನೆಗಳಿಲ್ಲ. ಆಕಾಶ ಶುಭ್ರವಾಗಿದೆ. ಬಿಸಿಲು ಕೂಡ ಚುರುಕಾಗಿದೆ.

ಇಂತಹ ಉತ್ತಮ ವಾತಾವರಣದಲ್ಲಿ ಕರ್ನಾಟಕ ತಂಡವು ಈ ರಣಜಿ ಟ್ರೋಫಿ ಕ್ರಿಕೆಟ್ ಋತುವಿನ ಎರಡನೇ ಪಂದ್ಯವನ್ನು ಆಡಲಿದೆ. ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುದುಚೇರಿ ತಂಡವನ್ನು
ಎದುರಿಸಲಿದೆ.

ಹೋದ ವಾರ ಇಲ್ಲಿ ಸರ್ವಿಸಸ್ ವಿರುದ್ಧ ನಡೆದಿದ್ದ ಮೊದಲ ಪಂದ್ಯದ ಬಹಳಷ್ಟು ಸಮಯವು ಮಳೆಗೆ ಹಾಗೂ ಮಂದಬೆಳಕಿಗೆ ಆಹುತಿಯಾಗಿತ್ತು. ಆದರೆ ಪುದುಚೇರಿ ವಿರುದ್ಧ ಆ ರೀತಿಯಾಗದಿರುವ ನಿರೀಕ್ಷೆ ಇದೆ. ಮೊದಲ ಪಂದ್ಯದಲ್ಲಿ ಡ್ರಾ ಮಾಡಿಕೊಂಡು ಮೂರು ಅಂಕ ಗಳಿಸಿರುವ ಮಯಂಕ್ ಅಗರವಾಲ್ ಬಳಗವು ಪ್ರಥಮ ಜಯಕ್ಕಾಗಿ ಎದುರು ನೋಡುತ್ತಿದೆ.

ADVERTISEMENT

ಛತ್ತೀಸಗಢ ತಂಡದ ಎದುರು ಸೋಲನುಭವಿಸಿರುವ ಪುದುಚೇರಿ ತಂಡದ ಎದುರು ಕರ್ನಾಟಕವೇ ಗೆಲ್ಲುವ ನೆಚ್ಚಿನ ತಂಡ ಎನ್ನುವುದರಲ್ಲಿ ಸಂಶಯವಿಲ್ಲ. ಪುದುಚೇರಿ ಮೊದಲ ಇನಿಂಗ್ಸ್‌ನಲ್ಲಿ ಕೇವಲ 37 ರನ್‌ ಗಳಿಸಿ ಆಲೌಟ್ ಆಗಿತ್ತು.

ಸರ್ವಿಸಸ್ ಎದುರು ಶತಕ ಬಾರಿಸಿದ್ದ ಆರ್. ಸಮರ್ಥ್, ಅರ್ಧಶತಕ ಗಳಿಸಿದ್ದ ನಿಕಿನ್ ಜೋಸ್, ಬಿ.ಆರ್. ಶರತ್ ಮತ್ತು ಮಯಂಕ್ ತಮ್ಮ ಲಯವನ್ನು ಮುಂದುವರಿಸಿದರೆ ಪುದುಚೇರಿ ಬೌಲರ್‌ಗಳಿಗೆ ಕಠಿಣ ಸವಾಲು ಎದುರಾಗಲಿದೆ. ಪಾರಸ್‌ ಡೋಗ್ರಾ ನಾಯಕತ್ವದ ತಂಡದ ಬ್ಯಾಟಿಂಗ್ ಪಡೆಯ ಎದುರು ತಮ್ಮ ಕೌಶಲ ಮೆರೆಯಲು ಆತಿಥೇಯ ತಂಡದ ವಿದ್ವತ್ ಕಾವೇರಪ್ಪ, ವೈಶಾಖ ವಿಜಯಕುಮಾರ್ ಅವರಿಗೆ ಒಳ್ಳೆಯ ಅವಕಾಶ ಇದೆ. ಅನುಭವಿಗಳಾದ ರೋನಿತ್ ಮೋರೆ, ಸ್ಪಿನ್ನರ್ ಕೆ ಗೌತಮ್ ಮತ್ತು ಶ್ರೇಯಸ್ ಗೋಪಾಲ್ ಕಣಕ್ಕಿಳಿಯುವುದು ಬಹುತೇಕ
ಖಚಿತ.

ಬೌಲಿಂಗ್‌ ದಾಳಿಯಲ್ಲಿ ಬಿಗಿತನ ಮತ್ತು ಚುರುಕಾದ ಫೀಲ್ಡಿಂಗ್‌ ಕೊರತೆಯನ್ನು ನೀಗಿಸುವ ಸವಾಲು ಮಯಂಕ್ ಅಗರವಾಲ್‌ ಬಳಗಕ್ಕೆ ಇದೆ. ಕಳೆದ ಪಂದ್ಯದಲ್ಲಿ ಪ್ರಮುಖ ಹಂತದಲ್ಲಿ ಕ್ಯಾಚ್‌ಗಳನ್ನು ಫೀಲ್ಡರ್‌ಗಳು ಕೈಚೆಲ್ಲಿದ್ದರು.

ರಣಜಿ ಟೂರ್ನಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಹೋದ ಸಲ ಕರ್ನಾಟಕ ತಂಡವು ಜಯ ಸಾಧಿಸಿತ್ತು.

ಪಂದ್ಯ ಆರಂಭ: ಬೆಳಿಗ್ಗೆ 9.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.