ಅರ್ಧಶತಕ ಗಳಿಸಿದ ಕರ್ನಾಟಕದ ಶ್ರೇಯಸ್ ಗೋಪಾಲ್ ಬ್ಯಾಟಿಂಗ್ ವೈಖರಿ. ಬೌಲಿಂಗ್‌ನಲ್ಲಿಯೂ ಮಿಂಚಿದ ಅವರು ಮೂರು ವಿಕೆಟ್ ಪಡೆದರು
ಪಿಟಿಐ ಚಿತ್ರ
ರಾಜ್‌ಕೋಟ್: ಸ್ಪಿನ್ ಬೌಲರ್‌ಗಳ ಆಪ್ತಮಿತ್ರನಂತೆ ಇರುವ ಇಲ್ಲಿಯ ಪಿಚ್‌ನಲ್ಲಿ ಕರ್ನಾಟಕದ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ತಮ್ಮ ಕೈಚಳಕದ ರುಚಿಯನ್ನು ಸೌರಾಷ್ಟ್ರಕ್ಕೆ ತೋರಿಸಿದ್ದಾರೆ. ಇದಕ್ಕೂ ಮುನ್ನ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದ ಅವರು ಅರ್ಧಶತಕ ದಾಖಲಿಸಿದರು.
ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲೀಟ್ ಬಿ ಗುಂಪಿನ ಪಂದ್ಯದ ಎರಡನೇ ದಿನವಾದ ಗುರುವಾರ ಸ್ಪಿನ್ನರ್ ಗಳದ್ದೇ ಆಟ. ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕವನ್ನು 372 ರನ್‌ಗಳಿಗೆನಿಯಂತ್ರಿಸುವಲ್ಲಿ ಆತಿಥೇಯ ತಂಡದ ಸ್ಪಿನ್ನರ್ ಧರ್ಮೇಂದ್ರಸಿಂಹ ಜಡೇಜ (124ಕ್ಕೆ7) ಸಫಲರಾದರು. ಇದಕ್ಕೆ ಪ್ರತಿಕ್ರಿಯೆಯಾಗಿ ಬ್ಯಾಟಿಂಗ್ ಮಾಡಿದ ಸೌರಾಷ್ಟ್ರಕ್ಕೆ ಅಮೋಘ ಆರಂಭ ದೊರೆಯಿತು. ಹಾರ್ವಿಕ್ ದೇಸಾಯಿ (41; 104ಎ) ಮತ್ತು ಚಿರಾಗ್ ಜಾನಿ (90; 148ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 135 ರನ್ ಸೇರಿಸಿದರು. ಕರ್ನಾಟಕದ ಯುವ ಸ್ಪಿನ್ನರ್ ಮೊಹಸಿನ್ ಖಾನ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ದೇಸಾಯಿ ಬಿದ್ದರು.
ಇನ್ನೊಂದೆಡೆ ಶತಕದತ್ತ ಸಾಗಿದ್ದ ಚಿರಾಗ್ (90; 148ಎ) ಅವರ ವಿಕೆಟ್ ಕಬಳಿಸುವಲ್ಲಿ ಶ್ರೇಯಸ್ ಯಶಸ್ವಿಯಾದರು. ಕೆಲವೇ ನಿಮಿಷಗಳ ನಂತರ ಜೈ ಗೋಹಿಲ್ (3 ರನ್) ಅವರ ಕ್ಯಾಚ್ ಅನ್ನು ತಮ್ಮದೇ ಬೌಲಿಂಗ್‌ನಲ್ಲಿ ಪಡೆದ ಶ್ರೇಯಸ್ ಮಿಂಚಿದರು. ಅಂಶ್ ಗೋಸಾಯಿ (19; 22ಎ) ಅವರಿಗೂ ಶ್ರೇಯಸ್ ಪೆವಿಲಿಯನ್ ಹಾದಿ ತೋರಿದರು.
ಅರ್ಪಿತ್ ವಸವದಾ (ಬ್ಯಾಟಿಂಗ್ 12) ಮತ್ತು ಪ್ರೇರಕ್ ಮಂಕಡ್ (ಬ್ಯಾಟಿಂಗ್ 20) ಅವರು ವಿಕೆಟ್ ಪತನಕ್ಕೆ ತಡೆಯೊಡ್ಡಿದರು. ಇದರಿಂದಾಗಿ ದಿನದಾಟದ ಮುಕ್ತಾಯಕ್ಕೆ ಸೌರಾಷ್ಟ್ರ ತಂಡವು 60 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 200 ರನ್ ಗಳಿಸಿತು. ಮೊದಲ ಇನಿಂಗ್ಸ್ ಮೊತ್ತ ಚುಕ್ತಾ ಮಾಡಲು ಆತಿಥೇಯ ಬಳಗಕ್ಕೆ 172 ರನ್‌ಗಳು ಬೇಕು.
ಶ್ರೇಯಸ್ ಅರ್ಧಶತಕ: ಬೌಲಿಂಗ್‌ನಲ್ಲಿ ಮಿಂಚುವ ಮುನ್ನ ಶ್ರೇಯಸ್ (56;
95ಎ, 4X4, 6X3) ಬ್ಯಾಟಿಂಗ್ ನಲ್ಲಿಯೂ ಮಿಂಚಿದರು. ಅರ್ಧಶತಕ ಗಳಿಸಿ ತಂಡದ ಮೊತ್ತವು ಹೆಚ್ಚುವಂತೆ ನೋಡಿಕೊಂಡರು. ಅಲ್ಲದೇ ಅವರು ಆರ್. ಸ್ಮರಣ್ (77; 143ಎ) ಅವರೊಂದಿಗೆ ಆರನೇ ವಿಕೆಟ್ ಜತೆಯಾಟದಲ್ಲಿ 110 ರನ್ ಸೇರಿಸಿದರು.
ಮೊದಲ ದಿನದಾಟದಲ್ಲಿ ಕರ್ನಾಟಕ ತಂಡವು 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 295 ರನ್ ಗಳಿಸಿತ್ತು. 66 ರನ್ ಗಳಿಸಿದ್ದ ಸ್ಮರಣ್ ಹಾಗೂ 38 ರನ್ ಹೊಡೆದಿದ್ದ ಶ್ರೇಯಸ್ ಕ್ರೀಸ್‌ನಲ್ಲಿದ್ದರು. ಎರಡನೇ ದಿನದಾಟದ ಬೆಳಿಗ್ಗೆ ತಾಳ್ಮೆ ಮತ್ತು ಏಕಾಗ್ರತೆಯಿಂದ ಆಡಿದ ಇಬ್ಬರೂ ಬ್ಯಾಟರ್‌ಗಳು ಬೌಲರ್‌ಗಳಿಗೆ ಸುಲಭದ ತುತ್ತಾಗಲಿಲ್ಲ. ದಿನದ ಎಂಟನೇ ಓವರ್‌ನಲ್ಲಿ ಸ್ಮರಣ್ ಅವರ ವಿಕೆಟ್ ಗಳಿಸುವಲ್ಲಿ ಜಡೇಜ ಯಶಸ್ವಿಯಾದರು.
ಶ್ರೇಯಸ್ ತಮ್ಮ ಅರ್ಧಶತಕ ಪೂರ್ಣ ಗೊಳಿಸಿಕೊಂಡರು. ತುಸು ವೇಗವಾಗಿ ರನ್ ಗಳಿಸಲು ಆರಂಭಿಸಿದ್ದ ಅವರಿಗೆ ಉನದ್ಕತ್ ಕಡಿವಾಣ ಹಾಕಿದರು.
ಗಮನ ಸೆಳೆದ ಶಿಖರ್: ಪದಾರ್ಪಣೆ ಪಂದ್ಯ ಆಡುತ್ತಿರುವ ಶಿಖರ್ ಶೆಟ್ಟಿ ಗಮನ ಸೆಳೆಯುವ ಆಟವಾಡಿದರು. 3 ಸಿಕ್ಸರ್ ಮತ್ತು 4 ಬೌಂಡರಿಗಳಿದ್ದ 41 ರನ್‌ಗಳನ್ನು 57 ಎಸೆತಗಳಲ್ಲಿ ಗಳಿಸಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ: 117.3 ಓವರ್‌ಗಳಲ್ಲಿ 372(ಆರ್.ಸ್ಮರಣ್ 77, ಶ್ರೇಯಸ್ ಗೋಪಾಲ್ 56, ಎಂ.ವೆಂಕಟೇಶ್ 0, ಶಿಖರ್ ಶೆಟ್ಟಿ 41, ಮೊಹಸಿನ್ ಖಾನ್ 1, ಅಭಿಲಾಷ್ ಔಟಾಗದೇ 2, ಜಯದೇವ್ ಉನದ್ಕತ್ 55ಕ್ಕೆ1, ಧರ್ಮೇಂದ್ರಸಿಂಹ ಜಡೇಜ 124ಕ್ಕೆ7, ಗಜರ್ ಸಮರ್ 49ಕ್ಕೆ1) ಸೌರಾಷ್ಟ್ರ: 60 ಓವರ್‌ಗಳಲ್ಲಿ 4ಕ್ಕೆ200(ಹಾರ್ವಿಕ್ ದೇಸಾಯಿ 41, ಚಿರಾಗ್ ಜಾನಿ 90, ಜೈ ಗೊಹಿಲ್ 3, ವಾಸವದಾ ಔಟಾಗದೇ 12, ಅಂಶ್ ಗೊಸಾಯಿ 19, ಪ್ರೇರಕ್ ಔಟಾಗದೇ 20, ಶ್ರೇಯಸ್ ಗೋಪಾಲ್ 51ಕ್ಕೆ3, ಮೊಹಸಿನ್ ಖಾನ್ 38ಕ್ಕೆ1)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.