ಕರ್ನಾಟಕ ರಣಜಿ ತಂಡದ ಆಟಗಾರರು
ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧ ನಡೆದ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ಇನಿಂಗ್ಸ್ ಹಾಗೂ 207 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಇಂದು ನಡೆದ ಮೂರನೇ ದಿನದಾಟದಲ್ಲಿ ದಿಟ್ಟ ಹೋರಾಟ ಪ್ರದರ್ಶಿಸಿದ ಪಂಜಾಬ್ ನಾಯಕ ಶುಭಮನ್ ಗಿಲ್ ಶತಕದ (102) ಸಾಧನೆ ಮಾಡಿದರು. ಆದರೂ ಗಿಲ್ ಹೋರಾಟವು ವ್ಯರ್ಥವೆನಿಸಿತು.
ಪಂಜಾಬ್ ದ್ವಿತೀಯ ಇನಿಂಗ್ಸ್‌ನಲ್ಲಿ 63.4 ಓವರ್‌ಗಳಲ್ಲಿ 213 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಗಿಲ್ ಹೊರತುಪಡಿಸಿ ಬೇರೆ ಯಾವ ಬ್ಯಾಟರ್‌ಗೆ ಮಿಂಚಲು ಸಾಧ್ಯವಾಗಲಿಲ್ಲ.
ಕರ್ನಾಟಕದ ಪರ ಯಶೋವರ್ಧನ್ ಹಾಗೂ ಶ್ರೇಯಸ್ ಗೋಪಾಲ್ ತಲಾ ಮೂರು ಮತ್ತು ಪ್ರಸಿದ್ಧ ಕೃಷ್ಣ ಎರಡು ವಿಕೆಟ್ ಗಳಿಸಿದರು.
ಮೊದಲ ಇನಿಂಗ್ಸ್‌ನಲ್ಲಿ ವಾಸುಕಿ ಕೌಶಿಕ್ (16ಕ್ಕೆ 4) ಹಾಗೂ ಅಭಿಲಾಷ್ ಶೆಟ್ಟಿ (19ಕ್ಕೆ 3) ದಾಳಿಗೆ ನಲುಗಿದ್ದ ಪಂಜಾಬ್ ಕೇವಲ 55ಕ್ಕೆ ಆಲೌಟ್ ಆಗಿತ್ತು.
ಇದಕ್ಕೆ ಉತ್ತರವಾಗಿ ಕರ್ನಾಟಕ ಸ್ಮರಣ್ ರವಿಚಂದ್ರನ್ ಚೊಚ್ಚಲ ದ್ವಿಶತಕದ (203) ಬೆಂಬಲದಿಂದ 475 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಆ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 320 ರನ್‌ಗಳ ಬೃಹತ್ ಮುನ್ನಡೆ ಗಳಿಸಿತ್ತು.
ಈ ಗೆಲುವಿನೊಂದಿಗೆ ಎಲೈಟ್ 'ಸಿ' ಗುಂಪಿನಲ್ಲಿ ಆಡಿರುವ 6 ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿರುವ ಕರ್ನಾಟಕ 19 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.