ಸ್ಮರಣ್ ರವಿಚಂದ್ರನ್
(ಸಂಗ್ರಹ ಚಿತ್ರ)
ಬೆಂಗಳೂರು: ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ನವಪ್ರತಿಭೆ ಸ್ಮರಣ್ ರವಿಚಂದ್ರನ್ ಅಮೋಘ ದ್ವಿಶತಕದ ಸಾಧನೆ ಮಾಡಿದ್ದಾರೆ.
21 ವರ್ಷದ ಸ್ಮರಣ್ ದ್ವಿಶತಕದ ನೆರವಿನಿಂದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಕರ್ನಾಟಕ ಬೃಹತ್ ಮುನ್ನಡೆ ಗಳಿಸಿದೆ.
ಮೊದಲ ದಿನದಾಟದಲ್ಲಿ ಆತಿಥೇಯ ಬೌಲರ್‌ಗಳ ಸಾಂಘಿಕ ದಾಳಿಗೆ ಕುಸಿದ ಪಂಜಾಬ್ ಕೇವಲ 55ಕ್ಕೆ ಆಲೌಟ್ ಆಗಿತ್ತು. ಬಳಿಕ ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕ ಇನಿಂಗ್ಸ್ ಮುನ್ನಡೆ (4ಕ್ಕೆ199) ಗಳಿಸುವಲ್ಲಿ ಯಶಸ್ವಿಯಾಗಿತ್ತು. ಸ್ಮರಣ್ ರವಿಚಂದ್ರನ್ ಅಜೇಯ 83 ರನ್ ಗಳಿಸಿ ಕ್ರೀಸಿನಲ್ಲಿದ್ದರು.
ಇಂದು ಎರಡನೇ ದಿನದಾಟದಲ್ಲೂ ಸ್ಮರಣ್ ಅಮೋಘ ಇನಿಂಗ್ಸ್ ಕಟ್ಟಿದರು. 277 ಎಸೆತಗಳಲ್ಲಿ 203 ರನ್ ಗಳಿಸಿ ಅಬ್ಬರಿಸಿದರು. ಅವರ ಇನಿಂಗ್ಸ್‌ನಲ್ಲಿ 25 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು.
ಸ್ಮರಣ್‌ಗೆ ಉತ್ತಮ ಸಾಥ್ ನೀಡಿದ ಅಭಿನವ್ ಮನೋಹರ್ 34, ಶ್ರೇಯಸ್ ಗೋಪಾಲ್ 31 ರನ್ ಗಳಿಸಿದರು.
ತಾಜಾ ವರದಿಯ ವೇಳೆಗೆ ಕರ್ನಾಟಕ 107.1 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 420 ರನ್ ಗಳಿಸಿದೆ. ಅಲ್ಲದೆ 365 ರನ್‌ಗಳ ಬೃಹತ್ ಮುನ್ನಡೆ ಗಳಿಸಿದೆ.
ಇತ್ತೀಚೆಗೆ ನಡೆದ ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲೂ ಸ್ಮರಣ್ ಅಮೂಲ್ಯ ಶತಕ ಗಳಿಸಿದ್ದರು. ಫೈನಲ್‌ನಲ್ಲಿ ವಿದರ್ಭ ತಂಡವನ್ನು ಮಣಿಸಿದ್ದ ಕರ್ನಾಟಕ 5ನೇ ಸಲ ವಿಜಯ್ ಹಜಾರೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.