ವಿರಾಟ್ ಕೊಹ್ಲಿ
ಪಿಟಿಐ ಚಿತ್ರ
ನದೆಹಲಿ: ರಣಜಿ ಕ್ರಿಕೆಟ್ ಟೂರ್ನಿಯ ರೈಲ್ವೇಸ್ ಎದುರಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ದೆಹಲಿ ಬೌಲಿಂಗ್ ಆಯ್ದುಕೊಂಡಿದೆ. ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು, ಈ ಪಂದ್ಯದ ಮೂಲಕ ದೀರ್ಘ ಕಾಲದ ಬಳಿಕ ದೇಶಿ ಕ್ರಿಕೆಟ್‌ಗೆ ಮರಳುತ್ತಿರುವುದು ಪ್ರಮುಖ ಆಕರ್ಷಣೆಯಾಗಿದೆ.
ಟೂರ್ನಿಯಲ್ಲಿ ಈವರೆಗೆ 6 ಪಂದ್ಯಗಳಲ್ಲಿ ಆಡಿರುವ ದೆಹಲಿ 1 ಗೆಲುವು, 2 ಸೋಲು ಹಾಗೂ 3 ಡ್ರಾಗಳೊಂದಿಗೆ 14 ಪಾಯಿಂಟ್ ಹೊಂದಿದ್ದು, 'ಡಿ' ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಹೀಗಾಗಿ, ನಾಕೌಟ್ ಹಂತಕ್ಕೇರುವುದು ಕಷ್ಟ. ಆದರೆ, ಕೊಹ್ಲಿ ಆಗಮನದಿಂದ ಈ ತಂಡದ ಸ್ಥೈರ್ಯವಂತೂ ವೃದ್ಧಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. 2012ರ ಬಳಿಕ ಮೊದಲ ಬಾರಿಗೆ ರಣಜಿಯಲ್ಲಿ ಆಡುತ್ತಿರುವ ಕೊಹ್ಲಿ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರೇಕ್ಷಕರು ಕ್ರೀಡಾಂಗಣದತ್ತ ಬರುತ್ತಿದ್ದಾರೆ. ಅಭಿಮಾನಿಗಳು, ಕ್ರೀಡಾಂಗಣದ ಹೊರಗೆ ಭಾರಿ ಸಂಖ್ಯೆಯಲ್ಲಿ ಜಮಾಯಿಸಿರುವುದು, ಎರಡು ಕಿ.ಮೀ. ವರೆಗೆ ಸಾಲಿನಲ್ಲಿ ನಿಂತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿವೆ.
ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಆಡುವ ಆಯುಷ್ ಬದೋನಿ, ದೆಹಲಿ ತಂಡ ಮುನ್ನಡೆಸುತ್ತಿದ್ದಾರೆ. ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ನಾಯಕ ತಿಳಿಸಿದ್ದಾರೆ.
ಆರು ಪಂದ್ಯಗಳಲ್ಲಿ 2 ಜಯ, 1 ಸೋಲು ಮತ್ತು 3 ಡ್ರಾ ಸಾಧಿಸಿರುವ ರೈಲ್ವೇಸ್, 17 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಸುರಾಜ್ ಅಹುಜಾ, ಈ ತಂಡದ ನಾಯಕ.
ತಮಿಳುನಾಡು, ಚಂಡಿಗಢ, ಸೌರಾಷ್ಟ್ರ 'ಡಿ' ಗುಂಪಿನ ಮೊದಲ ಮೂರು ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.