
ಹುಬ್ಬಳ್ಳಿಯ ರಾಜನಗರದ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುರುವಾರ ಶತಕ ಗಳಿಸಿದ ಕರ್ನಾಟಕ ತಂಡದ ಮಯಂಕ್ ಅಗರವಾಲ್ ಸಂಭ್ರಮ -ಪ್ರಜಾವಾಣಿ
ಚಿತ್ರ/ ಗೋವಿಂದರಾಜ ಜವಳಿ
ಹುಬ್ಬಳ್ಳಿ: ಇಲ್ಲಿಯ ನೃಪತುಂಗ ಬೆಟ್ಟದಂತೆ ಭಾಸವಾಗುತ್ತಿರುವ ಮೊದಲ ಇನಿಂಗ್ಸ್ ಮೊತ್ತದ ಸವಾಲನ್ನು ಬೆನ್ನತ್ತಿರುವ ಅತಿಥೇಯ ಕರ್ನಾಟಕ ತಂಡಕ್ಕೆ ಜಮ್ಮು–ಕಾಶ್ಮೀರದ ವೇಗಿ ಅಕೀಬ್ ನಬಿ ದಾರ್ ಆಘಾತ ನೀಡಿದರು. ಆದರೆ ಈ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಅನುಭವಿ ಮಯಂಕ್ ಅಗರವಾಲ್ ಅವರು ಗಳಿಸಿದ ದಿಟ್ಟ ಶತಕದಿಂದಾಗಿ ಮುನ್ನಡೆಯ ಸಣ್ಣ ಆಸೆಯೊಂದು ಇನ್ನೂ ಉಳಿದಿದೆ.
ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಮೂರನೇ ದಿನದಾಟದಲ್ಲಿ ಪ್ರವಾಸಿ ಬಳಗವು 584 ರನ್ ಗಳಿಸಿ ಆಲೌಟ್ ಆಯಿತು. ಒಟ್ಟು 786 ನಿಮಿಷಗಳ ಇನಿಂಗ್ಸ್ ಆಡುವ ಮೂಲಕ ಪಾರಸ್ ಡೋಗ್ರಾ ತಂಡವು ಬೃಹತ್ ಮೊತ್ತ ಪೇರಿಸಿತು.
ಪ್ರತ್ಯುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ನಬಿ (32ಕ್ಕೆ3) ಒಂದರ ಹಿಂದೆ ಒಂದು ಆಘಾತ ನೀಡಿದರು.ಇದರಿಂದಾಗಿ ಕರ್ನಾಟಕವು ದಿನದಾಟದ ಮುಕ್ತಾಯಕ್ಕೆ 69 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 220 ರನ್ ಗಳಿಸಿದೆ. ಮಯಂಕ್ (ಔಟಾಗದೇ 130; 207ಎ, 4X17) ಮತ್ತು ಕೃತಿಕ್ ಕೃಷ್ಣ (ಔಟಾಗದೇ 27; 75ಎ, 4X2) ಕ್ರೀಸ್‌ನಲ್ಲಿದ್ದಾರೆ. ಇನಿಂಗ್ಸ್ ಬಾಕಿ ಚುಕ್ತಾ ಮಾಡಲು ಇನ್ನೂ 364 ರನ್ ಗಳಿಸುವ ಕಠಿಣ ಸವಾಲು ಆತಿಥೇಯರ ಮೇಲೆ ಇದೆ. ಮಯಂಕ್ ಮತ್ತು ಕೃತಿಕ್ ಮೇಲೆ ಭರವಸೆಯ ನೋಟ ನೆಟ್ಟಿದೆ. ಕೇವಲ ಎರಡು ದಿನಗಳು ಮಾತ್ರ ಉಳಿದಿರುವ ಪಂದ್ಯವು ಡ್ರಾದಲ್ಲಿ ಮುಕ್ತಾಯವಾದರೆ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದ ತಂಡವು ಟ್ರೋಫಿಗೆ ಮುತ್ತಿಕ್ಕಲಿದೆ.
ಹುಬ್ಬಳ್ಳಿಗೆ ಬರುವ ಮುನ್ನ ಈ ಋತುವಿನಲ್ಲಿ 55 ವಿಕೆಟ್‌ಗಳನ್ನು ಗಳಿಸಿದ್ದ 29 ವರ್ಷದ ಬಲಗೈ ವೇಗಿ ನಬಿ ಹಾಗೂ ಭಾರತ ಟೆಸ್ಟ್ ತಂಡದ ಆಟಗಾರ ಕೆ.ಎಲ್. ರಾಹುಲ್ ಅವರ ನಡುವಿನ ಪೈಪೋಟಿಯೆಂದೇ ಬಿಂಬಿತವಾಗಿತ್ತು. ಆದರೆ ನಬಿ ತಮ್ಮ ನಿಖರ ದಾಳಿಯ ಮೂಲಕ ರಾಹುಲ್ (13 ರನ್) ಅವರನ್ನು 12ನೇ ಓವರ್‌ನಲ್ಲಿಯೇ ಪೆವಿಲಿಯನ್‌ಗೆ ಕಳಿಸಿದರು. ಕಳೆದ ಎರಡೂವರೆ ದಿನಗಳಿಂದ ರಾಹುಲ್ ಬ್ಯಾಟಿಂಗ್ ನೋಡಲು ತವಕಿಸಿದ್ದ ಅಭಿಮಾನಿಗಳು ನಿರಾಶರಾದರು. ನಾಲ್ಕು ಸಾವಿರಕ್ಕೂ ಹೆಚ್ಚು ಜನರಿದ್ದ ಗ್ಯಾಲರಿ ಸ್ತಬ್ಧವಾಯಿತು. ಅವರಲ್ಲದೇ ಕರುಣ್ ನಾಯರ್ ಮತ್ತು ಈ ಋತುವಿನಲ್ಲಿ 950 ರನ್ ಗಳಿಸಿರುವ ಆರ್. ಸ್ಮರಣ್ ಅವರ ವಿಕೆಟ್‌ಗಳನ್ನು ನಬಿ ತಮ್ಮ ಬುಟ್ಟಿಗೆ ಹಾಕಿಕೊಂಡರು. ಕರ್ನಾಟಕದ ಬೌಲರ್‌ಗಳು ವಿಕೆಟ್ ಗಳಿಸಲು ಕಷ್ಟಪಟ್ಟಿದ್ದ ಪಿಚ್‌ನಲ್ಲಿ ಮಿಂಚಿದರು.
ಇನ್ನೊಂದೆಡೆ ನಾಯಕ ದೇವದತ್ ತ(11 ರನ್) ಕೂಡ ಸುನಿಲ್ ಕುಮಾರ್ ಬೌಲಿಂಗ್‌ನಲ್ಲಿ ಅಬ್ದುಲ್ ಸಮದ್ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು. ಇದರಿಂದಾಗಿ 57 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಆತಿಥೇಯರು ಸಂಕಷ್ಟಕ್ಕೀಡಾದರು. ದೇವದತ್ತ ಅವರು ನಬಿಗೆ ಎರಡು ಬೌಂಡರಿ ಹೊಡೆದಿದ್ದರು. ಅವರನ್ನು ಬಿಟ್ಟರೆ ನಬಿ ಎಸೆತದಲ್ಲಿ ಮಯಂಕ್ ಮಾತ್ರ ಒಂದು ಬೌಂಡರಿ ಬಾರಿಸಿದರು. ಅವರ 27 ಎಸೆತಗಳನ್ನು ಎದುರಿಸಿದ ಮಯಂಕ್ 14 ರನ್ ಗಳಿಸಿದರು.
ಮಯಂಕ್ ತಾವೆದುರಿಸಿದ 9ನೇ ಎಸೆತದಲ್ಲಿ ಖಾತೆ ತೆರೆದರು. ಶ್ರೇಯಸ್ ಗೋಪಾಲ್ (27; 83ಎ, 4X1) ಅವರೊಂದಿಗೆ ಐದನೇ ವಿಕೆಟ್ ಜೊತೆಯಾಟದಲ್ಲಿ 105 ರನ್ (188ಎ) ಸೇರಿಸಿ ಒಂದಿಷ್ಟು ಚೇತರಿಕೆ ನೀಡಿದರು. ಆದರೆ ಚಹಾ ವಿರಾಮದ ನಂತರ ಯುದ್ಧವೀರ್ ಸಿಂಗ್ ಚರಕ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಶ್ರೇಯಸ್ ಬಿದ್ದರು. ಜೊತೆಯಾಟ ಮುರಿಯಿತು.
ಜಮ್ಮು ಮತ್ತು ಕಾಶ್ಮೀರ ತಂಡದ ವೇಗಿ ಆಕಿಬ್ ನಬಿ ದಾರ್
ಮಯಂಕ್ ಮತ್ತು ವಿಕೆಟ್‌ಕೀಪರ್–ಬ್ಯಾಟರ್ ಕೃತಿಕ್ ಕೃಷ್ಣ ಎಚ್ಚರಿಕೆಯಿಂದ ಆಟ ಮುಂದುವರಿಸಿದರು. 154 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ ಮಯಂಕ್ ಸಂಭ್ರಮಿಸಿದರು. ತಂಡದ ಮೊತ್ತವನ್ನು ದ್ವಿಶತಕದ ಗಡಿ ದಾಟಿಸಿದರು. ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ 58 ರನ್ ಸೇರಿಸಿದರು. 63ನೇ ಓವರ್‌ನಲ್ಲಿ ಮಯಂಕ್ ಅವರಿಗೆ ವಿಕೆಟ್‌ಕೀಪರ್ ಕನ್ಹಯ್ಯಾ ವಾಧ್ವಾನ್ ಅವರು ಕ್ಯಾಚ್ ಕೈಚೆಲ್ಲಿ ಜೀವದಾನ ಕೊಟ್ಟರು.
ಹೋದ ನವೆಂಬರ್‌ನಲ್ಲಿ ಇದೇ ಮೈದಾನದಲ್ಲಿ ಲೀಗ್ ಹಂತದಲ್ಲಿ ಚಂಡೀಗಡ ವಿರುದ್ಧದ ಪಂದ್ಯವು ನಡೆದಿತ್ತು. ಆಗ ಮಯಂಕ್ ನಾಯಕರಾಗಿದ್ದರು. ಈ ಪಂದ್ಯದಲ್ಲಿ ಪಡಿಕ್ಕಲ್ ನಾಯಕತ್ವ ವಹಿಸಿದ್ದಾರೆ.
ಕರ್ನಾಟಕ ತಂಡದ ಪ್ರಸಿದ್ಧ ಕೃಷ್ಣ ಅವರ ಬೌಲಿಂಗ್ ವೈಖರಿ
ಮೊದಲ ಇನಿಂಗ್ಸ್: ಜಮ್ಮು ಮತ್ತು ಕಾಶ್ಮೀರ: 173.1 ಓವರ್‌ಗಳಲ್ಲಿ 584 (ಬುಧವಾರ 6 ವಿಕೆಟ್‌ಗೆ 527) (ಸಾಹಿಲ್ ಲೋತ್ರಾ 72, ಅಬಿದ್ ಮುಷ್ತಾಕ್ 28, ಯುದ್ಧವೀರ್ ಸಿಂಗ್ 30; ಪ್ರಸಿದ್ಧ ಕೃಷ್ಣ 98ಕ್ಕೆ 5). ಕರ್ನಾಟಕ: 69 ಓವರ್‌ಗಳಲ್ಲಿ 5 ವಿಕೆಟ್‌ಗೆ 220 (ಮಯಂಕ್ ಅಗರವಾಲ್ ಔಟಾಗದೇ 130, ಶ್ರೇಯಸ್ ಗೋಪಾಲ್ 27, ಕೃತಿಕ್ ಕೃಷ್ಣ ಔಟಾಗದೇ 27; ಅಕೀಬ್ ನಬಿ 32ಕ್ಕೆ 3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.