ADVERTISEMENT

ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್‌ನ 'ಬಾಸ್' ಎಂದ ಕೋಚ್ ರವಿಶಾಸ್ತ್ರಿ

ಪಿಟಿಐ
Published 28 ಮಾರ್ಚ್ 2020, 16:18 IST
Last Updated 28 ಮಾರ್ಚ್ 2020, 16:18 IST
   

ನವದೆಹಲಿ: ಭಾರತದ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿಯೇ ‘ಬಾಸ್’ ಎಂದು ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

‘ತಂಡಕ್ಕೆ ನಾಯಕನೇ ಮುಖ್ಯಸ್ಥವೆಂಬುದನ್ನು ನಾನು ಯಾವಾಗಲೂ ಒಪ್ಪುತ್ತೇನೆ. ಒಬ್ಬ ಕೋಚ್ ಆಗಿ, ಆಟಗಾರರು ತಮ್ಮ ಶ್ರೇಷ್ಠ ಸಾಮರ್ಥ್ಯವನ್ನು ಪಣಕ್ಕೊಡ್ಡುವಂತೆ ಸಿದ್ಧಗೊಳಿಸುವುದು ನನ್ನ ಕರ್ತವ್ಯ. ಆತ್ಮವಿಶ್ವಾಸ, ದಿಟ್ಟತನ ಮತ್ತು ನಿರ್ಭೀತವಾಗಿ ಆಡುವಂತೆ ಆತ್ಮಬಲ ಹೆಚ್ಚಿಸುವುದು ನನ್ನ ಕೆಲಸ’ ಎಂದಿದ್ದಾರೆ.

ಸ್ಕೈ ಪಾಡ್‌ಕಾಸ್ಟ್‌ ನಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕರಾದ ನಾಸೀರ್ ಹುಸೇನ್ ಮತ್ತು ಮೈಕೆಲ್ ಆಥರ್ಟನ್ ಅವರೊಂದಿಗಿನ ಸಂವಾದದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.

ADVERTISEMENT

‘ನಾಯಕನು ತಂಡದ ಮುಂಚೂಣಿಯಲ್ಲಿದ್ದು ಹೋರಾಡುತ್ತಾನೆ. ತಂಡದ ಮೇಲೆ ಇರುವ ಒತ್ತಡವನ್ನು ನಾಯಕನೊಂದಿಗೆ ಹಂಚಿಕೊಳ್ಳಲು ನಾವಿರುತ್ತೇವೆ. ಪಂದ್ಯದ ಮಧ್ಯ ಬರುವ ಎಲ್ಲ ಪರಿಸ್ಥಿತಿಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವುದರಲ್ಲಿ ನಾಯಕನ ಪಾತ್ರವೇ ದೊಡ್ಡದು’ ಎಂದು ಶಾಸ್ತ್ರಿ ಹೇಳಿದ್ದಾರೆ.

‘ಕ್ರಿಕೆಟ್‌ನಲ್ಲಿ ಫಿಟ್‌ನೆಸ್‌ ಬಗ್ಗೆ ಮಾತನಾಡುವುದಾದರೆ ಅದರಲ್ಲಿ ವಿರಾಟ್ ಮೊದಲ ಸ್ಥಾನದಲ್ಲಿದ್ದಾರೆ. ಈ ವಿಷಯದಲ್ಲಿ ವಿರಾಟ್ ಯಾವತ್ತೂ ರಾಜೀ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು

ಕೊರೊನಾ ವೈರಸ್ ಕಾರಣ ಹಾಕಲಾಗಿರುವ ಲಾಕ್‌ಡೌನ್ ನಿಂದ ಲಭಿಸಿರುವ ವಿಶ್ರಾಂತಿಯ ಕುರಿತು ಮಾತನಾಡಿದ ಅವರು, ‘ನ್ಯೂಜಿಲೆಂಡ್ ಪ್ರವಾಸದ ನಂತರ ಇಂತಹದೊಂದು ವಿರಾಮ ಬೇಕಿತ್ತು. ಇದನ್ನು ಸ್ವಾಗತಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.