ADVERTISEMENT

IND vs SL: ಜಡೇಜ ಆಲ್‌ರೌಂಡರ್ ಆಟ; ಭಾರತಕ್ಕೆ ಇನ್ನಿಂಗ್ಸ್ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2022, 11:05 IST
Last Updated 6 ಮಾರ್ಚ್ 2022, 11:05 IST
ಟೀಮ್ ಇಂಡಿಯಾ ಆಟಗಾರರ ಸಂಭ್ರಮ
ಟೀಮ್ ಇಂಡಿಯಾ ಆಟಗಾರರ ಸಂಭ್ರಮ   

ಮೊಹಾಲಿ: ರವೀಂದ್ರ ಜಡೇಜ ಆಲ್‌ರೌಂಡರ್ ಆಟದ (ಅಜೇಯ 175 ರನ್ ಹಾಗೂ ಪಂದ್ಯದಲ್ಲಿ 9 ವಿಕೆಟ್) ನೆರವಿನಿಂದ ಭಾರತ ತಂಡವು ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 222 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ.

ಮೊಹಾಲಿಯ ಐಎಸ್ ಬಿಂದ್ರಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಎಂಟು ವಿಕೆಟ್ ನಷ್ಟಕ್ಕೆ 574 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದ ಭಾರತ ತಂಡವು ಡಿಕ್ಲೇರ್ ಘೋಷಿಸಿತ್ತು. ಇದಕ್ಕೆ ಉತ್ತರವಾಗಿ ಕೇವಲ 174 ರನ್ನಿಗೆ ಆಲೌಟ್ ಆಗಿರುವ ಲಂಕಾ ಫಾಲೋ ಆನ್‌ಗೆ ಗುರಿಯಾಗಿತ್ತು.

ADVERTISEMENT

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಲಂಕಾದ ಚಿತ್ರಣ ಬದಲಾಗಲಿಲ್ಲ. ಅಲ್ಲದೆ ಕೇವಲ 178 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಹೀನಾಯ ಸೋಲಿಗೆ ಶರಣಾಗಿದೆ.

ಇದರೊಂದಿಗೆ ಕೇವಲ ಮೂರೇ ದಿನದ ಅಂತರದಲ್ಲಿ ಭಾರತ ಪಂದ್ಯವನ್ನು ವಶಪಡಿಸಿಕೊಂಡಿದೆ. ಬ್ಯಾಟಿಂಗ್‌ನಲ್ಲಿ ಅಜೇಯ 175 ರನ್ ಗಳಿಸಿದ್ದ ಜಡೇಜ ಮೊದಲ ಇನ್ನಿಂಗ್ಸ್‌ನಲ್ಲಿ 41 ರನ್ ತೆತ್ತು ಐದು ವಿಕೆಟ್ ಕಬಳಿಸಿ ಮಿಂಚಿದರು. ಬಳಿಕ ದ್ವಿತೀಯ ಇನ್ನಿಂಗ್ಸ್‌ನಲ್ಲೂ 46 ರನ್ನಿಗೆ ನಾಲ್ಕು ವಿಕೆಟ್ ಕಬಳಿಸಿ ಎದುರಾಳಿಗಳಿಗೆ ಬಲವಾದ ಪೆಟ್ಟು ನೀಡಿದರು.

ಈ ಮೂಲಕ 175 ರನ್ ಹಾಗೂ ಪಂದ್ಯದಲ್ಲಿ 9 ವಿಕೆಟ್ ಗಳಿಸುವ ಮೂಲಕ ಸ್ಮರಣೀಯ ಸಾಧನೆ ಮಾಡಿದರು. ಜಡೇಜ ಅವರಿಗೆ ಕೈಜೋಡಿಸಿದ ಅಶ್ವಿನ್ ಪಂದ್ಯದಲ್ಲಿ ಒಟ್ಟು ಆರು ವಿಕೆಟ್ ಬಳಿಸಿದರು. ಅಶ್ವಿನ್ ಆಕರ್ಷಕ ಅರ್ಧಶತಕವನ್ನೂ (61) ಗಳಿಸಿದ್ದರು.

ಇದನ್ನೂ ಓದಿ:

ರಿಷಬ್ ಪಂತ್ (96) ಹಾಗೂ 100ನೇ ಟೆಸ್ಟ್ ಆಡುತ್ತಿರುವ ವಿರಾಟ್ ಕೊಹ್ಲಿ (45) ಉಪಯುಕ್ತ ಕೊಡುಗೆಯನ್ನು ನೀಡಿದ್ದರು.

ಲಂಕಾ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಪಾತುಮ್ ನಿಸ್ಸಂಕಾ (61*) ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ ನಿರೋಶನ್ ಡಿಕ್ವೆಲ್ಲಾ (51*) ಹೋರಾಟವನ್ನು ಹೊರತುಪಡಿಸಿದರೆ ಇತರೆ ಯಾವ ಬ್ಯಾಟರ್‌ಗಳಿಗೂ ಕ್ರೀಸಿನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ.

ಒಟ್ಟಾರೆಯಾಗಿ ವಿರಾಟ್ ಕೊಹ್ಲಿ ಅವರ 100ನೇ ಪಂದ್ಯವನ್ನು ಭಾರತ ಸ್ಮರಣೀಯವಾಗಿಸಿದೆ. ಅತ್ತ ಟೆಸ್ಟ್‌ ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲೇ ರೋಹಿತ್ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ. ಇದೇ ಪಂದ್ಯದಲ್ಲಿ ಕಪಿಲ್ ದೇವ್ ದಾಖಲೆ ಮುರಿದಿರುವ ಅಶ್ವಿನ್ (435 ವಿಕೆಟ್), ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.