ADVERTISEMENT

ಚೆನ್ನೈನಲ್ಲಿ ಆರ್‌ಸಿಬಿ ತಾಲೀಮು ಶುರು

ಪಿಟಿಐ
Published 30 ಮಾರ್ಚ್ 2021, 13:38 IST
Last Updated 30 ಮಾರ್ಚ್ 2021, 13:38 IST
ಯಜುವೇಂದ್ರ ಚಾಹಲ್  – ಪ್ರಜಾವಾಣಿ ಸಂಗ್ರಹ
ಯಜುವೇಂದ್ರ ಚಾಹಲ್  – ಪ್ರಜಾವಾಣಿ ಸಂಗ್ರಹ   

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಜಯಿಸುವ ಮತ್ತೊಂದು ಕನಸಿನೊಂದಿಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಮಂಗಳವಾರ ತಾಲೀಮು ಆರಂಭಿಸಿದೆ.

ಆರ್‌ಸಿಬಿಯ 11 ಆಟಗಾರರ ಕಂಡಿಷನಿಂಗ್ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಒಂಬತ್ತು ದಿನಗಳ ಶಿಬಿರ ಇದಾಗಿದೆ.

ಭಾರತ ತಂಡದ ಆಟಗಾರರಾದ ಸ್ಪಿನ್ನರ್ ಯಜುವೇಂದ್ರ ಚಾಹಲ್, ಮಧ್ಯಮವೇಗಿಗಳಾದ ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಶಾಬಾಜ್ ಅಹಮದ್, ಪವನ್ ದೇಶಪಾಂಡೆ, ಮೊಹಮ್ಮದ್ ಅಜರುದ್ದೀನ್, ಸಚಿನ್ ಬೇಬಿ, ಸುಯಶ್ ಪ್ರಭುದೇಸಾಯಿ, ಕೆ.ಎಸ್. ಭರತ್, ರಜತ್ ಪಾಟೀದಾರ್ ತಾಲೀಮಿನಲ್ಲಿ ಭಾಗವಹಿಸುವರು.

ADVERTISEMENT

ತಂಡದ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕ ಮೈಕ್ ಹೆಸನ್ ಮತ್ತು ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಮಾರ್ಗದರ್ಶನದಲ್ಲಿ ಶಿಬಿರ ನಡೆಯಲಿದೆ.

‘ಶ್ರೀರಾಮಚಂದ್ರ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿರುವ ಸೆಂಟರ್ ಫಾರ್ ಸ್ಪೋರ್ಟ್ಸ್‌ ಸೈನ್ಸ್‌ (ಸಿಎಸ್‌ಎಸ್‌) ಕೇಂದ್ರದಲ್ಲಿ ಕಂಡಿಷನಿಂಗ್ ಶಿಬಿರ ನಡೆಯಲಿದೆ. ಅನುಭವಿ ಕೋಚ್‌ಗಳಾದ ಸಂಜಯ್ ಬಾಂಗಾರ್, ಶ್ರೀರಾಮ್ ಶ್ರೀಧರನ್, ಆ್ಯಡಂ ಗ್ರಿಫಿತ್, ಶಂಕರ್ ಬಸು ಮತ್ತು ಮಳೋಲನ್ ರಂಗರಾಜನ್ ತರಬೇತಿ ನೀಡುವರು. ಆಟಗಾರರ ದೈಹಿಕ ಸಾಮರ್ಥ್ಯ ವೃದ್ಧಿಯ ತರಬೇತಿಯೇ ಈ ಶಿಬಿರದ ಮುಖ್ಯ ಉದ್ದೇಶವಾಗಿದೆ‘ ಎಂದು ಆರ್‌ಸಿಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪುಮಾ ಕಿಟ್ ಪ್ರಾಯೋಜಕತ್ವ: ಆರ್‌ಸಿಬಿ ತಂಡದ ಕ್ರಿಕೆಟ್ ಕಿಟ್‌ಗಳಿಗೆ ಪುಮಾ ಸಂಸ್ಥೆಯು ಪ್ರಾಯೋಜಕತ್ವ ನೀಡಲಿದೆ.

ವಿಶ್ವದರ್ಜೆಯ ಕ್ರೀಡಾ ಪೋಷಾಕು ಮತ್ತು ಉತ್ಪನ್ನಗಳ ಸಂಸ್ಥೆಯಾಗಿರುವ ಪುಮಾ ದೀರ್ಘ ಅವಧಿಯ ಪಾಲುದಾರಿಕೆ ಒಡಂಬಡಿಕೆ ಮಾಡಿಕೊಂಡಿದೆ.

ಪುಮಾ ಕಂಪೆನಿಯು ಕೆಲವು ಕಾಲದಿಂದ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಪ್ರಾಯೋಜಕತ್ವ ಒಪ್ಪಂದ ಹೊಂದಿದೆ.

‘ಆರ್‌ಸಿಬಿ ಪರಿವಾರಕ್ಕೆ ಪುಮಾ ಸಂಸ್ಥೆಗೆ ಸ್ವಾಗತ. ವಿಶ್ವದಾದ್ಯಂತ ಆರ್‌ಸಿಬಿ ಉತ್ಪನ್ನಗಳು ಮತ್ತು ಅಭಿಮಾನಿಗಳ ನಡುವೆ ಸಂಪರ್ಕ ಗಟ್ಟಿಗೊಳಿಸಲು ಪುಮಾ ಕೈಬಲಪಡಿಸಲಿದೆ‘ ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಚೆನ್ನೈಗೆ ವಿರಾಟ್ ನಾಳೆ: ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಗುರುವಾರ ಚೆನ್ನೈಗೆ ಬಂದಿಳಿಯಲಿದ್ದಾರೆ. ಏಪ್ರಿಲ್ 2ರಿಂದ ಅಭ್ಯಾಸದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 9ರಂದು ನಡೆಯುವ ಉದ್ಘಾಟನೆ ಪಂದ್ಯದಲ್ಲಿ ಆರ್‌ಸಿಬಿಯು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಕಣಕ್ಕಿಳಿಯಲಿದೆ.

ತಂಡದ ತಾರಾ ಆಟಗಾರ, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಬುಧವಾರ ರಾತ್ರಿ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಹೋದ ಭಾನುವಾರ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ಪುಣೆಯಲ್ಲಿ ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಜಯಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.