ADVERTISEMENT

ಆರ್‌ಸಿಬಿ ಕಾಲೆಳೆದ ಪಂಜಾಬ್‌ನ ಹಳೆಯ ಟ್ವೀಟ್‌ಗೆ ಸೇಡು ತೀರಿಸಿದ ವಿರಾಟ್ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2021, 14:37 IST
Last Updated 4 ಅಕ್ಟೋಬರ್ 2021, 14:37 IST
ಚಿತ್ರ ಕೃಪೆ: ಟ್ವಿಟರ್ ಸ್ಕ್ರೀನ್‌ಶಾಟ್
ಚಿತ್ರ ಕೃಪೆ: ಟ್ವಿಟರ್ ಸ್ಕ್ರೀನ್‌ಶಾಟ್   

ದುಬೈ: ಮೈದಾನದ ಒಳಗೆ ಅಥವಾ ಹೊರಗಡೆಯೇ ಆಗಿರಲಿ ವಿರಾಟ್ ಕೊಹ್ಲಿ ಎಂದಿಗೂ ತಮ್ಮ ತಂಟೆಗೆ ಬಂದವರನ್ನು ಸುಮ್ಮನೇ ಬಿಡುವುದಿಲ್ಲ ಎಂಬುದು ಮಗದೊಮ್ಮೆ ಸಾಬೀತಾಗಿದೆ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಾಲೆಳೆದ ಪಂಜಾಬ್ ಕಿಂಗ್ಸ್ ತಂಡದ ಹಳೆಯ ಟ್ವೀಟ್‌ವೊಂದಕ್ಕೆಈಗ ವಿರಾಟ್ ಕೊಹ್ಲಿ ತಕ್ಕ ಉತ್ತರ ನೀಡುವ ಮೂಲಕ ಸೇಡು ತೀರಿಸಿದ್ದಾರೆ.

ಏನಿದು ಘಟನೆ?
ಭಾರತದಲ್ಲಿ ನಡೆದ ಐಪಿಎಲ್ ಟೂರ್ನಿಯ ಮೊದಲಾರ್ಧದ ವೇಳೆ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವು ದಾಖಲಿಸಿದ ಪಂಜಾಬ್ ತಂಡ ತನ್ನ ಸಾಮಾಜಿಕ ಖಾತೆಯಲ್ಲಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಆರ್‌ಸಿಬಿ ಆಟಗಾರರ ನಿರಾಶದಾಯಕ ಡಗೌಟ್ ಚಿತ್ರವನ್ನು ಪೋಸ್ಟ್ ಮಾಡಿ 'ಇಲ್ಲಿ ಎಲ್ಲವೂ ಶಾಂತಿ ಶಾಂತಿಯಾಗಿದೆ' ಎಂದು ಹಿಂದಿಚಲನಚಿತ್ರದ ಜನಪ್ರಿಯ ಕ್ಯಾಪ್ಷನ್ ಹಾಕಿವ್ಯಂಗ್ಯ ಮಾಡಿತ್ತು.

ಇದಕ್ಕೆ ಆರ್‌ಸಿಬಿ ಅಭಿಮಾನಿಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಬಳಿಕ ವಿವಾದಾತ್ಮಕ ಟ್ವೀಟ್ ಅನ್ನು ಪಂಜಾಬ್ ಅಳಿಸಿ ಹಾಕಿತ್ತು.

ಈಗ ಯುಎಇನಲ್ಲಿ ನಡೆಯುತ್ತಿರುವ ಎರಡನೇ ಹಂತದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿ ಆರು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಗೆಲುವಿನ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಪಂಜಾಬ್‌ಗೆ ತಿರುಗೇಟು ನೀಡಿರುವ ನಾಯಕ ವಿರಾಟ್ ಕೊಹ್ಲಿ, 'ಇಂದು ತುಂಬಾನೇ ಶಾಂತವಾಗಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಆರ್‌ಸಿಬಿ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಉಲ್ಲೇಖವಾಗಿದೆ. ಆ ಮೂಲಕ ಅಂದು ಆರ್‌ಸಿಬಿ ಕಾಲೆಳೆದ ಪಂಜಾಬ್‌ಗೆ ಇಂದು ವಿರಾಟ್ ತಕ್ಕ ಉತ್ತರವನ್ನೇ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.