ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ
ಪಿಟಿಐ ಚಿತ್ರ
ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಅಂಕಪಟ್ಟಿಯ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ಎದುರು ಕಣಕ್ಕಿಳಿಯಲಿದೆ.
ಶುಕ್ರವಾರ ಏಕನಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಈ ಹಣಾಹಣಿಯು ಬೆಂಗಳೂರಿನಲ್ಲಿ ನಿಗದಿಯಾಗಿತ್ತು. ಆದರೆ ಮಳೆಯ ಕಾರಣಕ್ಕಾಗಿ ಲಖನೌಗೆ ಸ್ಥಳಾಂತರಿಸಲಾಗಿದೆ. ಮೇ 17ರಂದು ಇಲ್ಲಿ ಆಯೋಜಿಸಲಾಗಿದ್ದ ಆರ್‌ಸಿಬಿ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ಪಂದ್ಯವು ಮಳೆಗೆ ಆಹುತಿಯಾಗಿತ್ತು. ಟಾಸ್ ಕೂಡ ಮಾಡಲು ಸಾಧ್ಯವಾಗಿರಲಿಲ್ಲ. ಆರ್‌ಸಿಬಿಗೆ ಲೀಗ್ ಹಂತದಲ್ಲಿ ಇನ್ನೆರಡು ಪಂದ್ಯಗಳು ಬಾಕಿ ಇವೆ. ಆದ್ದರಿಂದ ಅಗ್ರ ಎರಡು ತಂಡಗಳಲ್ಲಿ ಸ್ಥಾನ ಪಡೆಯುವ ಅವಕಾಶ ಇನ್ನೂ ಇದೆ. ಸದ್ಯ 12 ಪಂದ್ಯಗಳಿಂದ 17 ಅಂಕಗಳನ್ನು ಗಳಿಸಿದೆ. 2016ರ ಟೂರ್ನಿಯ ಲೀಗ್ ಹಂತದಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆದಿತ್ತು. ಅದರ ನಂತರ ಈ ಸಲ ನಿರೀಕ್ಷೆ ಗರಿಗೆದರಿದೆ.
ಭಾರತ ಮತ್ತು ಪಾಕಿಸ್ತಾನ ನಡುವಣ ಸೇನಾ ಸಂಘರ್ಷದ ಕಾರಣಕ್ಕೆ ಟೂರ್ನಿಗೆ ಒಂದು ವಾರ ಬಿಡುವು ನೀಡಲಾಗಿತ್ತು. ಆದರೆ ಆರ್‌ಸಿಬಿಗೆ ಬಹುತೇಕ 20 ದಿನಗಳ ವಿರಾಮ ಸಿಕ್ಕಂತಾಗಿದೆ. ಮೇ 3ರಂದು ಚೆನ್ನೈ ಸೂಪರ್ ಕಿಂಗ್ಸ್ ಎದುರು ಆಡಿದ ನಂತರ ಮತ್ತೆ ಕಣಕ್ಕಿಳಿದಿಲ್ಲ. ಈ ಬಾರಿ ತಂಡದ ಸಂಯೋಜನೆ ಉತ್ತಮವಾಗಿದೆ. ಆಟಗಾರರು ಉತ್ತಮ ಲಯದಲ್ಲಿಯೂ ಇದ್ದಾರೆ. ಆದ್ದರಿಂದ ಚೊಚ್ಚಲ ಪ್ರಶಸ್ತಿ ಗೆಲ್ಲುವ ಭರವಸೆಯೂ ಮೂಡಿದೆ.
ಅದಕ್ಕೆ ತಕ್ಕಂತೆ ತಂಡದ ಸೂಪರ್‌ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಅಮೋಘ ಫಾರ್ಮ್‌ನಲ್ಲಿದ್ದಾರೆ. 11 ಇನಿಂಗ್ಸ್‌ಗಳಿಂದ ಏಳು ಅರ್ಧಶತಕ ಗಳಿಸಿದ್ದಾರೆ. ಆರಂಭಿಕ ಆಟಗಾರನಾಗಿ ಉತ್ತಮ ಕಾಣಿಕೆ ನೀಡಿದ್ದಾರೆ.
ಟಿಮ್ ಡೇವಿಡ್ ಮತ್ತು ರೊಮೆರಿಯೊ ಶೆಫರ್ಡ್ ಅವರು ತಮ್ಮ ‘ಪವರ್ ಪ್ಲೇ’ ಮೂಲಕ ತಂಡದ ಬಲ ಇಮ್ಮಡಿಗೊಳಿಸಿದ್ದಾರೆ. ನಾಯಕ ರಜತ್ ಪಾಟೀದಾರ್ ಅವರು ತಮ್ಮ ಮೊದಲ ಐದು ಪಂದ್ಯಗಳಲ್ಲಿ 37.2 ಸರಾಸರಿಯಲ್ಲಿ ರನ್ ಗಳಿಸಿದ್ದರು. ಆದರೆ ನಂತರದ ಐದು ಹಣಾಹಣಿಗಳಲ್ಲಿ ಅವರ ಫಾರ್ಮ್ ಕುಂದಿತ್ತು. 10.6ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಚೆನ್ನೈ ಎದುರಿನ ಪಂದ್ಯದಲ್ಲಿ ರಜತ್ ಕೈಬೆರಳಿಗೆ ಗಾಯವೂ ಆಗಿತ್ತು.
ಎಡಗೈ ಸ್ಪಿನ್ನರ್ ಕೃಣಾಲ್ ಪಾಂಡ್ಯ ಮತ್ತು ಸುಯಶ್ ಶರ್ಮಾ ಅವರು ಪಂದ್ಯಗಳನ್ನು ಗೆದ್ದು ಕೊಡುವ ಸಮರ್ಥರಾಗಿದ್ದಾರೆ. ವೇಗದ ವಿಭಾಗದಲ್ಲಿ ಯಶ್ ದಯಾಳ್ ಮತ್ತು ಜೋಷ್ ಹೇಜಲ್‌ವುಡ್ ಅವರು ಆರಂಭಿಕ ಮತ್ತು ಕೊನೆಯ ಹಂತದ ಸ್ಪೆಲ್‌ಗಳಲ್ಲಿ ಅಮೋಘವಾಗಿ ಬೌಲಿಂಗ್ ಮಾಡಿದ್ದಾರೆ. ಆದರೆ ಭುಜದ ಗಾಯದ ಚಿಕಿತ್ಸೆಗಾಗಿ ತೆರಳಿರುವ ಹೇಜಲ್‌ವುಡ್ ಈ ಪಂದ್ಯಕ್ಕೆ ಮರಳುವುದು ಖಚಿತವಿಲ್ಲ. ಅಲ್ಲದೇ ಈ ಬಾರಿ ಆರ್‌ಸಿಬಿ ತಂಡವು ತವರಿನಾಚೆ ಆಡಿರುವ ಎಲ್ಲ ಪಂದ್ಯಗಳಲ್ಲಿಯೂ ಗೆದ್ದಿದೆ.
ಹೋದ ವರ್ಷದ ರನ್ನರ್ಸ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡವು ಈಗಾಗಲೇ ಪ್ಲೇ ಆಫ್ ಹಾದಿಯಿಂದ ಹೊರಬಿದ್ದಿದೆ. ಈಚೆಗೆ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸಮಾಧಾನಕರ ಜಯ ಸಾಧಿಸಿತ್ತು. ಅದೇ ಗೆಲುವಿನ ಲಯವನ್ನು ಮುಂದುವರಿಸುವತ್ತ ಹೈದರಾಬಾದ್ ಚಿತ್ತ ನೆಟ್ಟಿದೆ. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸನ್, ಕಮಿಂದು ಮೆಂಡಿಸ್ ಮತ್ತು ಆಲ್‌ರೌಂಡರ್ ನಿತೀಶ್‌ಕುಮಾರ್ ರೆಡ್ಡಿ ಅವರು ಉತ್ತಮ ಕಾಣಿಕೆ ನೀಡಬಲ್ಲ ಸಮರ್ಥರು. ನಾಯಕ ಪ್ಯಾಟ್‌ಕಮಿನ್ಸ್ ಮಾರ್ಗದರ್ಶನದ ಬೌಲಿಂಗ್ ಪಡೆಯೂ ಆರ್‌ಸಿಬಿ ಬ್ಯಾಟರ್‌ಗಳಿಗೆ ಸವಾಲೊಡ್ಡಲು ಸಿದ್ಧವಾಗಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.