ಪಂದ್ಯ ಆರಂಭಕ್ಕೂ ಮುನ್ನ ಆರ್‌ಸಿಬಿ ಆಟಗಾರರು
ಬೆಂಗಳೂರು: ನಿರ್ಭೀತ ಆಟವಾಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್‌ನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದು ಉತ್ತಮ ಆರಂಭ ಮಾಡಿದೆ. ಇದೀಗ, ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಜೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದ್ದು, ತವರಿನಲ್ಲಿ ಗೆಲುವಿನ ಖಾತೆ ತೆರೆಯುವ ತವಕದಲ್ಲಿದೆ.
ಈ ಪಂದ್ಯ ಆಸಕ್ತಿಕರ ಮುಖಾಮುಖಿಗೆ ವೇದಿಕೆಯಾಗಲಿದೆ. ತವರಿನ ಅಂಗಳದಲ್ಲಿ ಆಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ತಾರೆ ಕೆ.ಎಲ್.ರಾಹುಲ್ ಅವರ ಪ್ರದರ್ಶನ ಕುತೂಹಲಕ್ಕೆ ಎಡೆಮಾಡಿದೆ.
ರಜತ್ ಪಾಟೀದಾರ್ ಪಡೆ ಈ ಬಾರಿ ಆಡುತ್ತಿರುವ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ. ಕೋಲ್ಕತ್ತದಲ್ಲಿ ಉದ್ಘಾಟನಾ ಪಂದ್ಯ ಗೆದ್ದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 17 ವರ್ಷಗಳ ನಂತರ ಅದರ ನೆಲದಲ್ಲೇ ಬಗ್ಗುಬಡಿದಿದೆ. ತವರಿನಲ್ಲಿ ಗುಜರಾತ್ ಟೈಟನ್ಸ್‌ಗೆ ಸೋತರೂ, ರನ್ ಹೊಳೆಕಂಡ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೇಲೆ ರೋಚಕ ಜಯ ಪಡೆದು ಆತ್ಮವಿಶ್ವಾಸದಲ್ಲಿದೆ.
ಆಡಿದ ಮೂರೂ ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಮತೋಲನ ಹೊಂದಿದ್ದು ಉತ್ತಮ ಹೋರಾಟ ನಿರೀಕ್ಷಿಸಬಹುದು.
ಕೊಹ್ಲಿ–ಸ್ಟಾರ್ಕ್ ಮುಖಾಮುಖಿ: 36 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಅವರು ರನ್ ಸುಗ್ಗಿ ಕಾಣುತ್ತಿರುವುದು ತಂಡದ ಮನೋಬಲ ಹೆಚ್ಚಿಸಿದೆ. ಅವರ ಆಟ ಆರ್‌ಸಿಬಿ ಯಶಸ್ಸಿನಲ್ಲಿ ನಿರ್ಣಾಯಕವಾಗಲಿದೆ. ನಾಯಕ ರಜತ್ ಪಾಟೀದಾರ್ ಕೂಡ ಆಕ್ರಮಣಕಾರಿಯಾಗಿಯೇ ಆಡುತ್ತಿದ್ದಾರೆ.
ಈ ಪಂದ್ಯದಲ್ಲಿ ಕೊಹ್ಲಿ ಮತ್ತು ಎದುರಾಳಿ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಮುಖಾಮುಖಿ ಕುತೂಹಲ ಕೆರಳಿಸಿದೆ. ಅವರು ಪವರ್‌ಪ್ಲೇ ಅವಧಿ ಕಳೆದರೆ, ಅನುಭವಿ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಹೇಗೆ ನಿಭಾಯಿಸುವರು ಎಂಬುದೂ ಆಸಕ್ತಿಕರ.
ಈ ಹಿಂದೆ ಸ್ಟಾರ್ಕ್ ವಿರುದ್ಧ ಕೊಹ್ಲಿ 31 ಎಸೆತಗಳಲ್ಲಿ 72 ರನ್ ಗಳಿಸಿದ್ದಾರೆ. ಆದರೆ ಈ ಬಾರಿ ಆಸ್ಟ್ರೇಲಿಯಾದ ಬೌಲರ್ ಪರಿಣಾಮಕಾರಿಯಾಗಿದ್ದು, 3 ಪಂದ್ಯಗಳಲ್ಲಿ ಕೇವಲ 11ರ ಸರಾಸರಿಯಲ್ಲಿ 9 ವಿಕೆಟ್ ಪಡೆದಿದ್ದಾರೆ. ಕುಲದೀಪ್ 6 ವಿಕೆಟ್‌ಗಳನ್ನು ಗಳಿಸಿದ್ದಾರೆ.
ಒಟ್ಟಾರೆ ಆರ್‌ಸಿಬಿ ಮಧ್ಯಮ ಕ್ರಮಾಂಕಕ್ಕೆ ಡೆಲ್ಲಿಯ ಅನುಭವಿ ಸ್ಪಿನ್ನರ್‌ಗಳನ್ನು (ಕುಲದೀಪ್, ಅಕ್ಷರ್) ಅವರನ್ನು ಎದುರಿಸುವ ಸವಾಳು ಇದೆ.
ಬೌಲರ್‌ಗಳ ಭರವಸೆ: ಈ ಆವೃತ್ತಿಯಲ್ಲಿ ಬೆಂಗಳೂರಿನ ಆರಂಭಿಕ ಬೌಲರ್‌ಗಳಾದ ಜೋಶ್ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ ಕುಮಾರ್ ಅವರು ಪವರ್ ಪ್ಲೇ ಅವಧಿಯಲ್ಲಿ ಎದುರಾಳಿಗಳನ್ನು ನಿಯಂತ್ರಿಸಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ಚೆನ್ನಾಗಿ ಬಲ್ಲ ಡೆಲ್ಲಿ ತಂಡದ ಕೀಪರ್–ಬ್ಯಾಟರ್ ಕೆ.ಎಲ್.ರಾಹುಲ್ ಅವರನ್ನು ಕಟ್ಟಿಹಾಕುವ ಸವಾಲು ಈ ಬೌಲರ್‌ಗಳ ಮುಂದಿದೆ. ರಾಹುಲ್ ಈ ಹಿಂದಿನ ಪಂದ್ಯದಲ್ಲಿ ಬಿರುಸಿನ ಅರ್ಧ ಶತಕ ಗಳಿಸಿದ್ದಾರೆ.
ರಾಹುಲ್ ಅವರ ಹಾಗೆಯೇ ಆರಂಭ ಆಟಗಾರ ಫಾಫ್ ಡುಪ್ಲೆಸಿ ಅವರಿಗೂ ಇಲ್ಲಿನ ಪರಿಸ್ಥಿತಿ ಚಿರಪರಿಚಿತ. ಕಳೆದ ಋತುವಿನವರೆಗೆ ಆರ್‌ಸಿಬಿ ನಾಯಕರಾಗಿದ್ದ ಅವರು ಫಿಟ್ನೆಸ್ ಕಾರಣ ಸಿಎಸ್‌ಕೆ ವಿರುದ್ಧ ಈ ಹಿಂದಿನ ಪಂದ್ಯ ಆಡಿರಲಿಲ್ಲ. ಅವರ ಲಭ್ಯತೆ ಗುರುವಾರವೇ ತೀರ್ಮಾನ ಆಗಲಿದೆ.
ಈ ಇಬ್ಬರ ಜೊತೆ ಜೇಕ್ ಫ್ರೇಸರ್ ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ಟ್ರಿಸ್ಟನ್ ಸ್ಟಬ್ಸ್, ಅಶುತೋಷ್ ಶರ್ಮಾ... ಹೀಗೆ ಡೆಲ್ಲಿ ಬ್ಯಾಟಿಂಗ್ ಸರದಿ ಪ್ರಬಲವಾಗಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೊಸ್ಟಾರ್ ಆ್ಯಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.