
ಆರ್‌ಸಿಬಿ ಚಾಂಪಿಯನ್
(ಪಿಟಿಐ ಚಿತ್ರ)
ವಡೋದರ: ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಜೆಮಿಮಾ ರಾಡ್ರಿಗಸ್ (57 ರನ್, 37 ಎಸೆತ) ಹಾಗೂ ಶಿನೆಲ್ ಹೆನ್ರಿ (35 ರನ್, 15 ಎಸೆತ) ಅಮೋಘ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 203 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.
ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ (87 ರನ್, 41 ಎಸೆತ) ಹಾಗೂ ಜಾರ್ಜಿಯಾ ವೋಲ್ (79 ರನ್, 54 ಎಸೆತ) ಅಬ್ಬರದ ನೆರವಿನಿಂದ ಇನ್ನು ಎರಡು ಎಸೆತಗಳು ಬಾಕಿ ಇರುವಂತೆಯೇ 19.4 ಓವರ್‌ಗಳಲ್ಲಿ ಗುರಿ ತಲುಪಿತು.
ಎರಡನೇ ಸಲ ಚಾಂಪಿಯನ್ ಪಟ್ಟ:
ಈ ಗೆಲುವಿನೊಂದಿಗೆ ಆರ್‌ಸಿಬಿ ಮಹಿಳೆಯರ ತಂಡವು ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಎರಡನೇ ಸಲ ಪ್ರಶಸ್ತಿ ಗೆದ್ದಿದೆ. ಹಾಗೆಯೇ ಸ್ಮೃತಿ ಮಂದಾನ ಎರಡನೇ ಸಲ ಟ್ರೋಫಿ ಗೆದ್ದ ಎರಡನೇ ನಾಯಕಿ ಎನಿಸಿದ್ದಾರೆ.
ಮುಂಬೈ ದಾಖಲೆ ಸರಿಗಟ್ಟಿದ ಆರ್‌ಸಿಬಿ
ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಈ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಎರಡು ಬಾರಿ ಚಾಂಪಿಯನ್ ಆಗಿದೆ. ಆರ್‌ಸಿಬಿ ಈ ದಾಖಲೆಯನ್ನು ಸರಿಗಟ್ಟಿದೆ.
ಡಬ್ಲ್ಯುಪಿಎಲ್ ಚಾಂಪಿಯನ್ ತಂಡಗಳು:
2023: ಮುಂಬೈ ಇಂಡಿಯನ್ಸ್
2024: ರಾಯಲ್ ಚಾಲೆಂಜರ್ಸ್ ಬೆಂಗಳೂರು
2025: ಮುಂಬೈ ಇಂಡಿಯನ್ಸ್
2026: ರಾಯಲ್ ಚಾಲೆಂಜರ್ಸ್ ಬೆಂಗಳೂರು.
ಇದೇ ಮೊದಲ ಬಾರಿಗೆ ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದ (ಅಂಕಪಟ್ಟಿಯಲ್ಲಿ) ತಂಡವೊಂದು ಚಾಂಪಿಯನ್ ಪಟ್ಟಕ್ಕೇರಿದೆ.
ಆರ್‌ಸಿಬಿ ಚಾಂಪಿಯನ್
ಡೆಲ್ಲಿಗೆ ಸತತ ನಾಲ್ಕನೇ ಸಲ ಆಘಾತ...
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸತತ ನಾಲ್ಕನೇ ಸಲವೂ ಪ್ರಶಸ್ತಿ ಸುತ್ತಿನಲ್ಲಿ ನಿರಾಸೆ ಅನುಭವಿಸಿತು. 2024ರಲ್ಲೂ ಆರ್‌ಸಿಬಿ ವಿರುದ್ಧವೇ ಎಂಟು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು.
ಸತತ ಮೂರನೇ ಸಲ ಕಿರೀಟ
ಒಟ್ಟಾರೆ ಆರ್‌ಸಿಬಿ ಫ್ರ್ಯಾಂಚೈಸಿಯು ಸತತ ಮೂರು ವರ್ಷಗಳಿಂದ ಪ್ರಶಸ್ತಿ ಜಯಿಸಿದಂತಾಗಿದೆ. 2024ರಲ್ಲಿ ಆರ್‌ಸಿಬಿ ಮಹಿಳೆಯರು, 2025ರಲ್ಲಿ ಆರ್‌ಸಿಬಿ ಪುರುಷರ ತಂಡವು ಐಪಿಎಲ್‌ನಲ್ಲಿ ಪ್ರಶಸ್ತಿ ಜಯಸಿತ್ತು. ಈ ಬಾರಿ ಮತ್ತೆ ವನಿತೆಯರ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು.
ಅಷ್ಟೇ ಯಾಕೆ, ಪುರುಷ ಹಾಗೂ ಮಹಿಳಾ ತಂಡಗಳ ಟ್ರೋಫಿಗಳನ್ನು ಒಂದೇ ಫ್ರಾಂಚೈಸಿ ಹೊಂದಿರುವುದು (ಏಕಕಾಲದಲ್ಲಿ) ಇದೇ ಮೊದಲಾಗಿದೆ. ಇದು ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸುವಂತಾಗಿದೆ.
ದಾಖಲೆ ರನ್ ಚೇಸ್:
ಡೆಲ್ಲಿ ಒಡ್ಡಿದ 204 ರನ್ ಗುರಿಯನ್ನು 19.4 ಓವರ್‌ಗಳಲ್ಲಿ ಬೆನ್ನುಟ್ಟುವ ಮೂಲಕ ಡಬ್ಲ್ಯುಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆಯನ್ನು ಆರ್‌ಬಿಸಿ ತನ್ನದಾಗಿಸಿಕೊಂಡಿತು.
ಕಳೆದ ವರ್ಷ ವಡೋದರದಲ್ಲೇ ಗುಜರಾತ್ ವಿರುದ್ಧ ಆರ್‌ಸಿಬಿ 202 ರನ್ ಚೇಸ್ ಮಾಡಿರುವುದು ಈವರೆಗಿನ ದಾಖಲೆಯಾಗಿತ್ತು.
ಫೈನಲ್‌ನಲ್ಲಿ ಸ್ಮೃತಿ ಆರ್ಭಟ
ಫೈನಲ್ ಪಂದ್ಯದಲ್ಲಿ ನಾಯಕಿಯ ಆಟವಾಡಿದ ಸ್ಮೃತಿ 87 ರನ್ ಗಳಿಸಿದರು. ಇದು ಡಬ್ಲ್ಯುಪಿಎಲ್ ಫೈನಲ್‌ನಲ್ಲಿ ಬ್ಯಾಟರ್‌ವೊಬ್ಬರು ಗಳಿಸಿದ ಗರಿಷ್ಠ ಮೊತ್ತ. ಇದೇ ಪಂದ್ಯದಲ್ಲಿ ಜಾರ್ಜಿಯಾ ವೋಲ್ 79 ರನ್ ಗಳಿಸಿದ್ದರು. ಅವರು ಎರಡನೇ ಸ್ಥಾನದಲ್ಲಿದ್ದಾರೆ.
ಸ್ಮೃತಿಗೆ ಆರೆಂಜ್ ಕ್ಯಾಪ್
ಫೈನಲ್‌ನ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಗೆದ್ದ ಸ್ಮೃತಿ, ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕುವ ಮೂಲಕ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಒಂಬತ್ತು ಪಂದ್ಯಗಳಲ್ಲಿ ಮೂರು ಅರ್ಧಶತಕ ಸೇರಿದಂತೆ 377 ರನ್ ಗಳಿಸಿದರು. ಗರಿಷ್ಠ ರನ್ 96.
2025ರ ಆವೃತ್ತಿಯಲ್ಲಿ ಮುಂಬೈ ತಂಡದ ನಾಟ್ ಶಿವರ್ ಬ್ರಂಟ್ 523 ರನ್ ಗಳಿಸಿದ್ದರು.
ಗುಜರಾತ್ ತಂಡದ ಸೋಫಿ ಡಿವೈನ್ ಒಂಬತ್ತು ಪಂದ್ಯಗಳಲ್ಲಿ 17 ವಿಕೆಟ್ ಗಳಿಸುವ ಮೂಲಕ ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ.
ಆರ್‌ಸಿಬಿ ಚಾಂಪಿಯನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.