ಲಖನೌ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಎರಡರಲ್ಲಿ ಸ್ಥಾನ ಪಡೆಯುವ ಅವಕಾಶ ಮಂಗಳವಾರ ಒದಗಲಿದೆ. ರಜತ್ ಪಾಟೀದಾರ್ ಪಡೆ ಈ ಬಾರಿಯ ಐಪಿಎಲ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಲಖನೌ ತಂಡವನ್ನು ಎದುರಿಸಲಿದ್ದು, ಆರ್‌ಸಿಬಿಗೆ ಈ ಪಂದ್ಯ ಬಹಳ ಮಹತ್ವದ್ದಾಗಿದೆ.
ಅಗ್ರಸ್ಥಾನದಲ್ಲಿದ್ದ ಗುಜರಾತ್ ಟೈಟನ್ಸ್ ಸತತವಾಗಿ ಎರಡು ಸೋಲುಂಡಿರುವ ಕಾರಣ ಪಾಯಿಂಟ್ಸ್ ಪಟ್ಟಿಯಲ್ಲಿ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಒಂದು ವೇಳೆ 17 ಅಂಕ ಹೊಂದಿರುವ ಆರ್‌ಸಿಬಿ ಮಂಗಳವಾರದ ಪಂದ್ಯ ಗೆದ್ದರೆ ಗುಜರಾತ್‌ಗಿಂತ ಮೇಲಿನ ಸ್ಥಾನ ಪಡೆಯಲಿದೆ.
ಪ್ರಮುಖ ಪಂದ್ಯಗಳಲ್ಲಿ ಎಡವಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವ ಆತಿಥೇಯರು ಗೆಲುವಿನೊಡನೆ ಅಭಿಯಾನ ಮುಗಿಸಲು ಕಾತರರಾಗಿದ್ದಾರೆ. ಇನ್ನೊಂದು ಕಡೆ 2016ರ ನಂತರ ಆರ್‌ಸಿಬಿ ಮೊದಲ ಬಾರಿ ನೇರ ಫೈನಲಿಸ್ಟ್ ಆಗುವ ಹಾದಿಯಲ್ಲಿದೆ.
ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್ 1ರಲ್ಲಿ ಆಡಲಿವೆ. ಗೆದ್ದ ತಂಡ ನೇರವಾಗಿ ಫೈನಲ್ ತಲುಪುತ್ತದೆ. ಸೋತ ತಂಡ ಕ್ವಾಲಿಫೈಯರ್ 2ರಲ್ಲಿ ಎಲಿಮಿನೇಟರ್ ಪಂದ್ಯದ ವಿಜೇತರನ್ನು ಎದುರಿಸಬೇಕಾಗುತ್ತದೆ. ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯ ಆಡುತ್ತವೆ.
ಹೀಗಾಗಿ ಈ ಪ್ರಮುಖ ಪಂದ್ಯದಲ್ಲಿ ಎಡವದಂತೆ ಆರ್‌ಸಿಬಿ ಎಚ್ಚರಿಕೆ ವಹಿಸಬೇಕಾಗಿದೆ....
ಸದ್ಯ 17 ಪಾಯಿಂಟ್ಸ್ ಗಳಿಸಿರುವ ಆರ್‌ಸಿಬಿ ಈ ಪಂದ್ಯ ಗೆಲ್ಲುವ ಫೇವರೀಟ್ ಆಗಿದೆ. ಸತತವಾಗಿ ನಾಲ್ಕು ಪಂದ್ಯಗಳನ್ನು ಗೆದ್ದ ತಂಡವು ಹತ್ತು ದಿನಗಳ ವಿರಾಮದ ನಂತರ ಆಡಿದ ತನ್ನ ಕೊನೆಯ ಪಂದ್ಯದಲ್ಲಿ ಮೊದಲಿನ ಲಯದಲ್ಲಿರಲಿಲ್ಲ. ಐಪಿಎಲ್ ಪುನರಾರಂಭವಾದ ಬಳಿಕ ಆರ್‌ಸಿಬಿಯ ಮೊದಲ ಪಂದ್ಯ ಮಳೆಗೆ ಕೊಚ್ಚಿಹೋಗಿತ್ತು. ಹೀಗಾಗಿ ಸರಿಯಾದ ಪಂದ್ಯಾಭ್ಯಾಸವಿಲ್ಲದೇ ತಂಡ ಜಡಗಟ್ಟಿದ್ದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಎದ್ದುಕಂಡಿತ್ತು. ಬೆಂಗಳೂರು ತಂಡದ ಕೊನೆಯ ಗೆಲುವು ಮೇ 3ರಂದು ದಾಖಲಾಗಿತ್ತು.
‘ಪಂದ್ಯವಿಲ್ಲದೇ ನಾವು ಜಡ್ಡುಗಟ್ಟಿದ್ದೆವು. ಪ್ರಮುಖ ಪಂದ್ಯದಲ್ಲಿ ಆಡುವಾಗ ಇರಬೇಕಾದ ತೀವ್ರತೆ ನಮ್ಮ ತಂಡದಲ್ಲಿರಲಿಲ್ಲ. ಆದರೂ ಕಡೆಯ ಕೆಲವು ಓವರುಗಳಲ್ಲಿ ನಾವು ಕರಾರುವಾಕ್ಕಾಗಿ ಬೌಲಿಂಗ್ ಮಾಡಿದ್ದೆವು’ ಎಂದು ಹಂಗಾಮಿ ನಾಯಕ ಜಿತೇಶ್ ಶರ್ಮಾ ಹಿಂದಿನ ಸೋಲಿನ ನಂತರ ಪ್ರತಿಕ್ರಿಯಿಸಿದ್ದರು.
ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ತಂಡಕ್ಕೆ ಮರಳಿರುವುದು ಆರ್‌ಸಿಬಿಯ ಉತ್ಸಾಹ ಹೆಚ್ಚಿಸಿದೆ. ಈ ಬಾರಿ 10 ಪಂದ್ಯಗಳಿಂದ 18 ವಿಕೆಟ್ ಪಡೆದ ಅವರು ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿದ್ದು, ಕಿತ್ತಳೆ ಕ್ಯಾಪ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಆರ್‌ಸಿಬಿ ಈ ಹಿಂದಿನ ಪಂದ್ಯವನ್ನು ಏಕನಾ ಕ್ರೀಡಾಂಗಣದಲ್ಲೇ ಆಡಿದ್ದು, ಇಲ್ಲಿನ ಪರಿಸ್ಥಿತಿಗೆ ಒಗ್ಗಿಕೊಂಡಿದೆ.
ಆದರೆ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮಣಿಸುವುದು ಅಷ್ಟೇನೂ ಸುಲಭವಾಗದು. ಪ್ರಬಲ ಗುಜರಾತ್ ಟೈಟನ್ಸ್‌ಗೆ ಈ ಹಿಂದಿನ ಪಂದ್ಯದಲ್ಲಿ ಸೋಲುಣಿಸಿರುವುದು ಲಖನೌ ಸೂಪರ್‌ಜೈಂಟ್ಸ್ ತಂಡದ ವಿಶ್ವಾಸ ವೃದ್ಧಿಸಿದೆ.
ತಂಡ ಹಿನ್ನಡೆ ಅನುಭವಿಸಿದರೂ, ಮೂವರು ಪ್ರಮುಖ ಬ್ಯಾಟರ್‌ಗಳಾದ ಏಡನ್ ಮರ್ಕರಂ, ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ವೈಯಕ್ತಿಕವಾಗಿ ಸಾಕಷ್ಟು ರನ್ ಕಲೆಹಾಕಿದ್ದಾರೆ.
ಗಾಯಾಳುಗಳ ಸಮಸ್ಯೆ ಎದುರಿಸುತ್ತಿದ್ದರೂ ಬೌಲಿಂಗ್ ವಿಭಾಗ ಕೆಲವು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ. ಎಕ್ಸ್‌ಪ್ರೆಸ್ ವೇಗಿ ಮಯಂಕ್ ಯಾದವ್ ಬದಲು ಅವಕಾಶ ಪಡೆದ ನ್ಯೂಜಿಲೆಂಡ್‌ನ ವಿಲ್ ಓ ರೂರ್ಕಿ, ತಂಡದ ಈ ಬಾರಿಯ ‘ಶೋಧ’ ದಿಗ್ವೇಶ್ ರಾಠಿ ಗಮನ ಸೆಳೆದಿದ್ದಾರೆ. ಒಂದು ಪಂದ್ಯಕ್ಕೆ ಅಮಾನತು ಆದ ಕಾರಣ ರಾಠಿ ಈ ಹಿಂದಿನ ಪಂದ್ಯ ಆಡಿರಲಿಲ್ಲ.
ಆದರೆ ಕೆಳಮಧ್ಯಮ ಕ್ರಮಾಂಕ ವಿಫಲವಾಗಿದೆ. ಅದರಲ್ಲೂ ನಾಯಕ ಹಾಗೂ ಲೀಗ್‌ನ ದುಬಾರಿ ಆಟಗಾರ ರಿಷಭ್ ಪಂತ್ ಅವರ ಬ್ಯಾಟಿನಿಂದ ರನ್‌ಗಳು ಬತ್ತಿಹೋಗಿವೆ.
ಪಂದ್ಯ ಆರಂಭ: ರಾತ್ರಿ 7.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.