ADVERTISEMENT

ಫ್ರೆಂಚ್‌ ಓಪನ್‌ ಟೆನಿಸ್‌: ಸೆಮಿಗೆ ಶ್ವಾಂಟೆಕ್‌, ಸಬಲೆಂಕಾ

ಏಜೆನ್ಸೀಸ್
Published 3 ಜೂನ್ 2025, 15:26 IST
Last Updated 3 ಜೂನ್ 2025, 15:26 IST
<div class="paragraphs"><p>ಪೋಲೆಂಡ್‌ನ ಇಗಾ ಶ್ವಾಂಟೆಕ್‌&nbsp;</p></div>

ಪೋಲೆಂಡ್‌ನ ಇಗಾ ಶ್ವಾಂಟೆಕ್‌ 

   

ಪ್ಯಾರಿಸ್‌: ಹಾಲಿ ಚಾಂಪಿಯನ್‌ ಇಗಾ ಶ್ವಾಂಟೆಕ್‌ ಮತ್ತು ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ ಅವರು ಮಂಗಳವಾರ ಫ್ರೆಂಚ್‌ ಓಪನ್‌ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು.

ದಾಖಲೆಯ ಸತತ ನಾಲ್ಕನೇ ಪ್ರಶಸ್ತಿ ಜಯದ ಛಲದಲ್ಲಿರುವ ಪೋಲೆಂಡ್‌ನ ಶ್ವಾಂಟೆಕ್‌ ಕ್ವಾರ್ಟರ್‌ ಫೈನಲ್‌ನಲ್ಲಿ 6-1, 7-5ರ ನೇರ ಸೆಟ್‌ಗಳಿಂದ 13ನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಅವರನ್ನು ಸೋಲಿಸಿದರು. 2020 ಮತ್ತು 2022ರಿಂದ 2024ರವರೆಗೆ ಚಾಂಪಿಯನ್‌ ಆಗಿರುವ ಪೋಲೆಂಡ್‌ ಆಟಗಾರ್ತಿ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಗೆಲುವಿನ ಓಟವನ್ನು 25ನೇ ಪಂದ್ಯಗಳಿಗೆ ವಿಸ್ತರಿಸಿದರು. 

ADVERTISEMENT

ಕಳೆದ ವರ್ಷದ ಕೊನೆಯಲ್ಲಿ ಒಂದು ತಿಂಗಳ ಡೋಪಿಂಗ್ ನಿಷೇಧಕ್ಕೆ ಗುರಿಯಾಗಿದ್ದ 24 ವರ್ಷ ವಯಸ್ಸಿನ ಶ್ವಾಂಟೆಕ್‌, 1968ರ ನಂತರ ಪ್ಯಾರಿಸ್‌ನಲ್ಲಿ ಸತತ ನಾಲ್ಕು ಪ್ರಶಸ್ತಿಗಳನ್ನು ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಎದುರು ನೋಡುತ್ತಿದ್ದಾರೆ.

ಐದನೇ ಶ್ರೇಯಾಂಕದ ಶ್ವಾಂಟೆಕ್‌ಗೆ ಅಂತಿಮ ನಾಲ್ಕರ ಘಟ್ಟದಲ್ಲಿ ಬೆಲಾರಸ್‌ನ ತಾರೆ ಸಬಲೆಂಕಾ ಎದುರಾಳಿಯಾಗಿದ್ದಾರೆ. ಅವರು ಎಂಟರ ಘಟ್ಟದ ಹಣಾಹಣಿಯಲ್ಲಿ 7-6 (7/3), 6-3ರಿಂದ ಒಲಿಂಪಿಕ್ ಚಾಂಪಿಯನ್ ಝೆಂಗ್ ಕ್ವಿನ್ವೆನ್‌ (ಚೀನಾ) ಅವರನ್ನು ಸೋಲಿಸಿದರು.

ಸಿನ್ನರ್‌ ಮುನ್ನಡೆ: ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್‌ ಸಿನ್ನರ್‌ ಪುರುಷರ ಸಿಂಗಲ್ಸ್‌ನಲ್ಲಿ ಎಂಟರ ಘಟ್ಟ ಪ್ರವೇಶಿಸಿದರು. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಇಟಲಿಯ ಆಟಗಾರ 6-1, 6-3, 6-4ರ ನೇರ ಸೆಟ್‌ಗಳಿಂದ 17ನೇ ಶ್ರೇಯಾಂಕದ ಆ್ಯಂಡ್ರೆ ರುಬ್ಲೆವ್ (ರಷ್ಯಾ) ಅವರನ್ನು ಮಣಿಸಿದರು.

ನಾಲ್ಕನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಸಿನ್ನರ್‌ ಅವರಿಗೆ ಮುಂದಿನ ಸುತ್ತಿನಲ್ಲಿ ಕಜಕಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಎದುರಾಳಿಯಾಗಿದ್ದಾರೆ. ಶ್ರೇಯಾಂಕರಹಿತ ಆಟಗಾರ ಬುಬ್ಲಿಕ್ 5-7, 6-3, 6-2, 6-4ರಿಂದ ಐದನೇ ಶ್ರೇಯಾಂಕದ ಜ್ಯಾಕ್ ಡ್ರೇಪರ್ (ಬ್ರಿಟನ್‌) ಅವರಿಗೆ ಆಘಾತ ನೀಡಿ, ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.