ADVERTISEMENT

ಹುಡುಗರೊಂದಿಗೆ ಕ್ರಿಕೆಟ್‌ ಆಡುತ್ತಿದ್ದಳು: ನೆನಪು ಮೆಲುಕು ಹಾಕಿದ ರೇಣುಕಾ ತಾಯಿ

ಪಿಟಿಐ
Published 3 ನವೆಂಬರ್ 2025, 9:36 IST
Last Updated 3 ನವೆಂಬರ್ 2025, 9:36 IST
   

ಶಿಮ್ಲಾ: ಮಹಿಳಾ ವಿಶ್ವಕಪ್‌ ವಿಜೇತ ಭಾರತ ತಂಡದ ಭಾಗವಾಗಿದ್ದ ರೇಣುಕಾ ಸಿಂಗ್‌ ಠಾಕೂರ್‌ ಅವರ ಕ್ರಿಕೆಟ್‌ ಪ್ರೀತಿಯ ಕುರಿತಾದ ನೆನಪುಗಳನ್ನು ಅವರ ತಾಯಿ ಸುನಿತಾ ಅವರು ಸೋಮವಾರ ಮೆಲುಕು ಹಾಕಿದ್ದಾರೆ.

‘ಅವಳು ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದಳು. ಕ್ರಿಕೆಟರ್‌ ಆಗಬೇಕು ಎಂದು ಕನಸು ಕಂಡಿದ್ದಳು. ಬಾಲ್ಯದಲ್ಲಿ ನೆರೆಯವರೊಂದಿಗೆ ಹುಡುಗರೊಂದಿಗೆ ಕಟ್ಟಿಗೆಯ ಬ್ಯಾಟ್‌ನಲ್ಲಿ ರಸ್ತೆಬದಿಯಲ್ಲಿ ಕ್ರಿಕೆಟ್‌ ಆಡುತ್ತಿದ್ದಳು’ ಎಂದು ಸುನಿತಾ ಅವರು ಹೇಳಿದ್ದಾರೆ.

‘ನನ್ನ ಗಂಡನಿಗೆ ಕ್ರಿಕೆಟ್‌ನಲ್ಲಿ ಉತ್ಕಟ ಆಸಕ್ತಿಯಿತ್ತು. ನಮ್ಮ ಮಕ್ಕಳಲ್ಲಿ ಒಬ್ಬರು ಕ್ರೀಡಾಪಟುಗಳಾಗಬೇಕು ಎಂದು ಅವರು ಬಯಸಿದ್ದರು. ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರು ಕೂಡ, ರೇಣುಕಾ ಅವರ ಕನಸನ್ನು ನನಸು ಮಾಡಿದ್ದಾಳೆ’ ಎಂದಿದ್ದಾರೆ. ರೇಣುಕಾ ಸಿಂಗ್‌ ಅವರಿಗೆ ಮೂರು ವರ್ಷವಿದ್ದಾಗ ಅವರ ತಂದೆ ಕೆಹರ್‌ ಸಿಂಗ್‌ ಅವರು ಮೃತಪಟ್ಟಿದ್ದರು.

ADVERTISEMENT

ರೇಣುಕಾ ಅವರ ಚಿಕ್ಕಪ್ಪ ಭುಪೇಂದ್ರ ಠಾಕೂರ್‌ ದೈಹಿಕ ಶಿಕ್ಷಕರಾಗಿದ್ದರು. ಅವರು ಅವಳ ಪ್ರತಿಭೆಯನ್ನು ಗುರುತಿಸಿ, ಕ್ರಿಕೆಟ್‌ ಆಡುವಂತೆ ಪ್ರೇರೇಪಿಸಿದ್ದರು. ನಂತರ ಧರ್ಮಶಾಲಾ ಕ್ರಿಕೆಟ್‌ ಅಕಾಡೆಮಿಗೂ ಸೇರಿಸಿದ್ದರು ಎಂದು ನೆನಪು ಮೆಲುಕು ಹಾಕಿದ್ದಾರೆ.

‘ಇಂದು ನಿನಗಾಗಿ ಅಲ್ಲ, ದೇಶಕ್ಕಾಗಿ ಆಟವಾಡು. ವಿಶ್ವಕಪ್‌ ಗೆದ್ದು ಬಾ’ ಎಂದು ಫೈನಲ್‌ ಪಂದ್ಯಕ್ಕೂ ಮುನ್ನ ಕರೆ ಮಾಡಿದಾಗ ರೇಣುಕಾಗೆ ಹೇಳಿದ್ದೆ ಎಂದು ಸುನಿತಾ ತಿಳಿಸಿದ್ದಾರೆ.

‘ನಮ್ಮ ಮಗಳು ಸಾಧನೆ ಮಾಡಿದ್ದಕ್ಕೆ ಖುಷಿಯಿದೆ. ಎಲ್ಲಾ ಹೆಣ್ಣು ಮಕ್ಕಳು ಕೂಡ ಅವರ ಕನಸಿನ ಕಡೆಗೆ ಸಾಗಬೇಕು’ ಎಂದಿದ್ದಾರೆ.

ರೇಣುಕಾ ಸಿಂಗ್‌ ಅವರು ಶಿಮ್ಲಾ ಜಿಲ್ಲೆಯ ಪಾರ್ಸ ಗ್ರಾಮದವರಾಗಿದ್ದು, ಭಾರತ ವಿಶ್ವಕಪ್‌ ಗೆದ್ದ ಸಂಭ್ರಮಕ್ಕೆ ಠಾಕೂರ್‌ ಕುಟುಂಬವು ಇಡೀ ಗ್ರಾಮಕ್ಕೆ ಔತಣ ಕೂಟ ಏರ್ಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.