ADVERTISEMENT

ಕೌರ್ ಪಡೆಗೆ ಏಷ್ಯಾ ಕಿರೀಟ: ಲಂಕಾ ಮಣಿಸಿದ ಭಾರತ ಚಾಂಪಿಯನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2022, 17:58 IST
Last Updated 15 ಅಕ್ಟೋಬರ್ 2022, 17:58 IST
ಭಾರತೀಯ ಆಟಗಾರ್ತಿಯರ ಸಂಭ್ರಮ
ಭಾರತೀಯ ಆಟಗಾರ್ತಿಯರ ಸಂಭ್ರಮ   

ಸಿಲೆಟ್, ಬಾಂಗ್ಲಾದೇಶ (ಪಿಟಿಐ): ಭಾರತ ಮಹಿಳಾ ಕ್ರಿಕೆಟ್ ತಂಡವು ಏಳನೇ ಸಲ ಏಷ್ಯಾ ಕಪ್ ಜಯಿಸಿತು.

ಸಿಲೆಟ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಮಧ್ಯಮವೇಗಿ ರೇಣುಕಾ ಸಿಂಗ್ (5ಕ್ಕೆ3) ಅವರ ಅಮೋಘ ಬೌಲಿಂಗ್‌ನಿಂದಾಗಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ, 8 ವಿಕೆಟ್‌ಗಳಿಂದ ಶ್ರೀಲಂಕಾ ವಿರುದ್ಧ ಜಯಭೇರಿ ಬಾರಿಸಿತು.

2004ರಿಂದ ಇಲ್ಲಿಯವರೆಗೆ ಈ ಟೂರ್ನಿಯನ್ನು ಎಂಟು ಸಲ ಆಯೋಜಿಸಲಾಗಿದೆ. ಅದರಲ್ಲಿ ನಾಲ್ಕು ಬಾರಿ ಏಕದಿನ ಹಾಗೂ ಇನ್ನುಳಿದದ್ದು ಟಿ20 ಮಾದರಿಯ ಟೂರ್ನಿಗಳಾಗಿವೆ. ಏಕದಿನದಲ್ಲಿ ಎಲ್ಲ ವರ್ಷವೂ ಪ್ರಶಸ್ತಿ ಭಾರತದ ಪಾಲಾಗಿದೆ. ಟಿ20 ಮಾದರಿಯಲ್ಲಿ ಹೋದ ಸಲ ಭಾರತ ರನ್ನರ್ಸ್ ಅಪ್ ಹಾಗೂ ಬಾಂಗ್ಲಾದೇಶ ಪ್ರಶಸ್ತಿ ವಿಜೇತ ತಂಡವಾಗಿತ್ತು.

ADVERTISEMENT

ಈ ಟೂರ್ನಿಯ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿದ್ದ ಶ್ರೀಲಂಕಾದ ವನಿತೆಯರು ಚೆಂದದ ನೃತ್ಯ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.

ಆದರೆ ಅಂತಹದೇ ಸಂಭ್ರಮವನ್ನು ಫೈನಲ್‌ ನಂತರವೂ ಆಚರಿಸುವ ಲಂಕಾ ತಂಡದ ಆಸೆ ಈಡೇರಲಿಲ್ಲ.

ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರೇಣುಕಾ ಸಿಂಗ್ ಹಾಗೂ ಉಳಿದ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಮುಂದೆ ಚಾಮಿರ ಅಟಪಟ್ಟು ಬಳಗವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 65 ರನ್ ಗಳಿಸತು. ಅದಕ್ಕುತ್ತರವಾಗಿ ಭಾರತ ತಂಡವು 8.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 71 ರನ್‌ ಗಳಿಸಿತು. ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ (ಔಟಾಗದೆ 51; 25ಎ, 4X6, 6X3) ಅರ್ಧಶತಕ ಗಳಿಸಿದರು.

‘ಫೈನಲ್ ಜಯದ ಶ್ರೇಯವು ಬೌಲರ್‌ಗಳು ಹಾಗೂ ಫೀಲ್ಡರ್‌ಗಳಿಗೆ ಸಲ್ಲಬೇಕು. ಶ್ರೀಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ್ದರಿಂದ ಬ್ಯಾಟರ್‌ಗಳಿಗೆ ಗುರಿ ಸಾಧನೆ ಸುಲಭ ವಾಯಿತು. ಈ ಟ್ರೋಫಿ ಜಯದಿಂದಾಗಿ ತಂಡದ ಆತ್ಮಬಲ ವೃದ್ಧಿಸಿದೆ’ ಎಂದು ಹರ್ಮನ್‌ಪ್ರೀತ್ ಕೌರ್ ಪಂದ್ಯದ ನಂತರ ಮಾಧ್ಯಮದವರಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.