ADVERTISEMENT

ಹ್ಯಾಟ್ರಿಕ್ ಜಯದ ಕನಸಿನಲ್ಲಿ ಮುಂಬೈ

ಪೊಲಾರ್ಡ್‌ ಮತ್ತೊಮ್ಮೆ ಅಬ್ಬರಿಸುವ ಭರವಸೆ; ಈಡೇರುವುದೇ ಸನ್‌ರೈಸರ್ಸ್‌ ಆಸೆ?

ಪಿಟಿಐ
Published 3 ಮೇ 2021, 12:26 IST
Last Updated 3 ಮೇ 2021, 12:26 IST
ಕೀರನ್ ಪೊಲಾರ್ಡ್‌ –ಪಿಟಿಐ ಚಿತ್ರ
ಕೀರನ್ ಪೊಲಾರ್ಡ್‌ –ಪಿಟಿಐ ಚಿತ್ರ   

ನವದೆಹಲಿ: ಸತತ ಎರಡು ಜಯಗಳಿಂದಾಗಿ ಉತ್ಸಾಹದ ಚಿಲುಮೆಯಂತಾಗಿರುವ ಮುಂಬೈ ಇಂಡಿಯನ್ಸ್‌ ತಂಡ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯೊಂದಿಗೆ ಮಂಗಳವಾರ ಸನ್‌ರೈಸರ್ಸ್ ಹೈದರಾಬಾದ್ ಎದುರು ಸೆಣಸಲಿದೆ.

ಹಾಲಿ ಚಾಂಪಿಯನ್ನರು ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಗೆದ್ದಿದ್ದರು. ಬೃಹತ್‌ ಮೊತ್ತ ಬೆನ್ನತ್ತಿದ್ದ ತಂಡ ಕೀರನ್ ಪೊಲಾರ್ಡ್ ಅವರ ಏಕಾಂಗಿ ಹೋರಾಟದಿಂದ ಗೆಲುವು ಸಾಧಿಸಿತ್ತು. ಸತತ ಸೋಲುಗಳಿಂದ ಕಂಗೆಟ್ಟಿದ್ದು ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ಗೆ 55 ರನ್‌ಗಳಿಂದ ಮಣಿದಿತ್ತು. ಇದು ಏಳು ಪಂದ್ಯಗಳಲ್ಲಿ ತಂಡದ ಆರನೇ ಸೋಲಾಗಿತ್ತು.

ಫಾರ್ಮ್‌ನಲ್ಲಿಲ್ಲದ ಡೇವಿಡ್ ವಾರ್ನರ್ ಬದಲಿಗೆ ಸನ್‌ರೈಸರ್ಸ್ ತಂಡದ ನಾಯಕತ್ವವನ್ನು ಕೇನ್ ವಿಲಿಯಮ್ಸನ್‌ ಅವರಿಗೆ ವಹಿಸಲಾಗಿದೆ. ಆವರ ನೇತೃತ್ವದಲ್ಲೂ ಜಯ ಸಾಧಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ.

ADVERTISEMENT

ಮುಂಬೈನ ಆರಂಭಿಕ ಜೋಡಿ ರೋಹಿತ್ ಶರ್ಮಾ (250 ರನ್‌) ಮತ್ತು ಕ್ವಿಂಟನ್ ಡಿಕಾಕ್ (155 ರನ್‌) ಉತ್ತಮ ಫಾರ್ಮ್‌ನಲ್ಲಿದ್ದು ಅವರಿಂದ ಅಮೋಘ ಜೊತೆಯಾಟಗಳು ಬರುತ್ತಿವೆ. ಸನ್‌ರೈಸರ್ಸ್ ವಿರುದ್ಧವೂ ಅವರು ಮಿಂಚುವ ನಿರೀಕ್ಷೆ ಇದೆ.

ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಒಳಗೊಂಡಿರುವ ಮಧ್ಯಮ ಕ್ರಮಾಂಕದ ಪರಾಕ್ರಮ ಹಿಂದಿನ ಎರಡು ಪಂದ್ಯಗಳಲ್ಲಿ ಕಂಡು ಬಂದಿದೆ. ಕೀರನ್ ಪೊಲಾರ್ಡ್‌ (168 ರನ್‌) ಚೆನ್ನೈ ಎದುರಿನ ಪಂದ್ಯದಲ್ಲಿ 34 ಎಸೆತಗಳಲ್ಲಿ 87 ರನ್ ಗಳಿಸಿದ್ದರು. ಸೂರ್ಯಕುಮಾರ್ ಯಾದವ್ (173) ಕೃಣಾಲ್ ಪಾಂಡ್ಯ (100 ರನ್‌) ಮತ್ತು ಹಾರ್ದಿಕ್ ಪಾಂಡ್ಯ (52 ರನ್‌) ಮೇಲೆಯೂ ತಂಡ ಭರವಸೆ ಇರಿಸಿಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ಮುಂದೆ ದುಬಾರಿಯಾದ ಮುಂಬೈನ ಬೌಲರ್‌ಗಳು ಮರುಚಿಂತನೆ ನಡೆಸಬೇಕಾಗಿದೆ. ಹೀಗಾಗಿ ಜಸ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್‌, ರಾಹುಲ್ ಚಾಹರ್‌ ಮುಂತಾದವರ ಜವಾಬ್ದಾರಿ ಹೆಚ್ಚಾಗಿದೆ.

ಸಮಸ್ಯೆಯ ಸುಳಿಯಲ್ಲಿ ವಿಲಿಯಮ್ಸನ್ ಪಡೆ

ಕೇನ್‌ ವಿಲಿಯಮ್ಸನ್ ಬಳಗದಲ್ಲಿ ಬಗೆಹರಿಯಬೇಕಾದ ಸಮಸ್ಯೆಗಳು ಅನೇಕ ಇವೆ. ಬ್ಯಾಟಿಂಗ್ ವಿಭಾಗವು ಸಂಪೂರ್ಣವಾಗಿ ಅಗ್ರ ಕ್ರಮಾಂಕದ ಮೇಲೆ ಅವಲಂಬಿತವಾಗಿದೆ. 248 ರನ್ ಕಲೆ ಹಾಕಿರುವ ಜಾನಿ ಬೆಸ್ಟೊ ಅವರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ನಿರೀಕ್ಷಿತ ಸಾಮರ್ಥ್ಯ ತೋರಲು ಆಗುತ್ತಿಲ್ಲ. ಮನೀಷ್ ಪಾಂಡೆ ಆಗೊಮ್ಮೆ ಈಗೊಮ್ಮೆ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ವಿಜಯಶಂಕರ್‌, ಕೇದಾರ್ ಜಾಧವ್‌, ಅಬ್ದುಲ್ ಸಮದ್‌ ಮತ್ತು ಮೊಹಮ್ಮದ್ ನಬಿ ನಿರೀಕ್ಷೆ ಹುಸಿ ಮಾಡಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಬಿಟ್ಟರೆ ಬೇರೆ ಯಾರಿಗೂ ಈ ವರೆಗೆ ಎದುರಾಳಿ ತಂಡಗಳ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಲು ಸಾಧ್ಯವಾಗಲಿಲ್ಲ. ಸಂದೀಪ್ ಶರ್ಮಾ ಮತ್ತು ಸಿದ್ಧಾರ್ಥ್ ಕೌಲ್ ಪೈಕಿ ಮಂಗಳವಾರ ಯಾರು ಕಣಕ್ಕೆ ಇಳಿಯುವರು ಎಂಬ ಕುತೂಹಲವೂ ಕ್ರಿಕೆಟ್ ಪ್ರಿಯರನ್ನು ಕಾಡತೊಡಗಿದೆ.

ತಂಡಗಳು: ಮುಂಬೈ ಇಂಡಿಯನ್ಸ್‌: ರೋಹಿತ್ ಶರ್ಮಾ (ನಾಯಕ), ಆ್ಯಡಂ ಮಿಲ್ನೆ, ಆದಿತ್ಯ ತರೆ, ಅನ್ಮೋಲ್‌ ಪ್ರೀತ್‌ ಸಿಂಗ್, ಅನುಕೂಲ್ ರಾಯ್‌, ಅರ್ಜುನ್ ತೆಂಡೂಲ್ಕರ್‌, ಕ್ರಿಸ್ ಲಿನ್‌, ಧವಳ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜೇಮ್ಸ್ ನೀಶಂ, ಜಸ್‌ಪ್ರೀತ್ ಬೂಮ್ರಾ, ಜಯಂತ್ ಯಾದವ್‌, ಕೀರನ್ ಪೊಲಾರ್ಡ್‌, ಕೃಣಾಲ್ ಪಾಂಡ್ಯ, ಮಾರ್ಕೊ ಜಾನ್ಸೆನ್‌, ಮೊಹಸಿನ್ ಖಾನ್‌, ನೇಥನ್ ಕಾಲ್ಟರ್‌ನೈಲ್‌, ಪೀಯೂಷ್‌ ಚಾವ್ಲಾ, ಕ್ವಿಂಟನ್ ಡಿಕಾಕ್‌ (ವಿಕೆಟ್ ಕೀಪರ್‌), ರಾಹುಲ್ ಚಾಹರ್‌, ಸೌರಭ್ ತಿವಾರಿ, ಸೂರ್ಯಕುಮಾರ್ ಯಾದವ್‌, ಟ್ರೆಂಟ್ ಬೌಲ್ಟ್‌, ಯುದ್ಧವೀರ್ ಸಿಂಗ್‌.

ಸನ್‌ರೈಸರ್ಸ್ ಹೈದರಾಬಾದ್‌: ಕೇನ್ ವಿಲಿಯಮ್ಸನ್‌ (ನಾಯಕ), ಡೇವಿಡ್ ವಾರ್ನರ್‌, ಜಾನಿ ಬೆಸ್ಟೊ (ವಿಕೆಟ್ ಕೀಪರ್‌), ಮನೀಷ್ ಪಾಂಡೆ, ಶ್ರೀವತ್ಸ್‌ ಗೋಸ್ವಾಮಿ, ವೃದ್ಧಿಮಾನ್ ಸಹಾ, ಪ್ರಿಯಂ ಗರ್ಗ್‌, ವಿಜಯಶಂಕರ್‌, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್‌, ವಿರಾಟ್ ಸಿಂಗ್‌, ಜೇಸನ್ ಹೋಲ್ಡರ್‌, ಮೊಹಮ್ಮದ್ ನಬಿ, ರಶೀದ್ ಖಾನ್‌, ಶಹಬಾಜ್ ನದೀಂ, ಭುವನೇಶ್ವರ್ ಕುಮಾರ್‌, ಸಂದೀಪ್ ಶರ್ಮಾ,ಖಲೀಲ್ ಅಹಮ್ಮದ್‌, ಸಿದ್ಧಾರ್ಥ್ ಕೌಲ್‌, ಬೇಸಿಲ್ ಥಂಪಿ, ಜೆ.ಸುಚಿತ್‌, ಕೇದಾರ್ ಜಾಧವ್‌, ಮುಜೀಬ್ ಉರ್ ರಹಮಾನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.