ADVERTISEMENT

ಪಿಎಫ್ ವಂಚನೆ ಆರೋಪದಡಿ ಬಂಧನ ವಾರಂಟ್: ಮೌನ ಮುರಿದ ರಾಬಿನ್ ಉತ್ತಪ್ಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2024, 3:07 IST
Last Updated 22 ಡಿಸೆಂಬರ್ 2024, 3:07 IST
<div class="paragraphs"><p>ರಾಬಿನ್ ಉತ್ತಪ್ಪ</p></div>

ರಾಬಿನ್ ಉತ್ತಪ್ಪ

   

ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಹಣ ವಂಚಿಸಿದ ಆರೋಪದ ಮೇಲೆ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ವಿರುದ್ಧ ಡಿಸೆಂಬರ್ 4ರಂದು ಬಂಧನದ ವಾರಂಟ್ ಜಾರಿಗೊಳಿಸಲಾಗಿದೆ. ಈ ವಿಚಾರವಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.

ಪ್ರಸ್ತುತ ಆರೋಪ ಕೇಳಿ ಬಂದಿರುವ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಕೆಲ ವರ್ಷಗಳ ಹಿಂದೆಯೇ ನಾನು ರಾಜೀನಾಮೆ ನೀಡಿದ್ದೆ. ಈ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ADVERTISEMENT

'2018-19ರಲ್ಲಿ ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈವೇಟ್ ಲಿಮಿಟೆಡ್, ಸೆಂಟಾರಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್, ಬೆರ್ರೀಸ್ ಫ್ಯಾಶನ್ ಹೌಸ್ ಕಂಪನಿಗಳಿಗೆ ನಾನು ಸಾಲದ ರೂಪದಲ್ಲಿ ಹಣ ಹೂಡಿಕೆ ಮಾಡಿದ್ದೆ. ಇದಕ್ಕಾಗಿ ಆ ಕಂಪನಿಗಳು ನನ್ನನ್ನ ನಿರ್ದೇಶಕನಾಗಿ ನೇಮಕ ಮಾಡಿದ್ದವು. ಆದಾಗ್ಯೂ ಸಹ ನಾನು ಈ ಕಂಪನಿಗಳಲ್ಲಿ ಯಾವುದೇ ಸಕ್ರಿಯ ಕಾರ್ಯನಿರ್ವಾಹಕ ಪಾತ್ರ ಹೊಂದಿರಲಿಲ್ಲ' ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.

'ವೃತ್ತಿಪರ ಕ್ರಿಕೆಟಿಗ, ನಿರೂಪಕ, ವೀಕ್ಷಕ ವಿವರಣೆಗಾರನಾಗಿ ಇದ್ದಿದ್ದರಿಂದ ಆ ಕಂಪನಿಗಳ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ನನಗೆ ಸಮಯವಿರಲಿಲ್ಲ. ಅಲ್ಲದೇ ಆ ಕಂಪನಿಗಳ ನಿತ್ಯದ ವ್ಯವಹಾರಗಳಲ್ಲಿ ಭಾಗಿಯಾಗಿರಲಿಲ್ಲ. ವಾಸ್ತವವಾಗಿ ನಾನು ಈವರೆಗೂ ಹಣ ಹೂಡಿಕೆ ಮಾಡಿದ ಇತರೆ ಕಂಪನಿಗಳಲ್ಲಿಯೂ ಕಾರ್ಯನಿರ್ವಾಹಕನಾಗಿ ಕೆಲಸ ಮಾಡಿಲ್ಲ. ಈಗ ಆರೋಪ ಹೊತ್ತಿರುವ ಕಂಪನಿಗಳು ನಾನು ಸಾಲದ ರೂಪದಲ್ಲಿ ನೀಡಿದ ಹಣವನ್ನು ಮರುಪಾವತಿಸಲು ವಿಫಲವಾಗಿವೆ. ಹೀಗಾಗಿ ನಾನು ಹಲವು ವರ್ಷಗಳ ಹಿಂದೆಯೇ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆ ಕಂಪನಿಗಳ ವಿರುದ್ಧ ಪ್ರಸ್ತುತ ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ' ಎಂದು ಅವರು ಹೇಳಿದ್ದಾರೆ.

ಆರೋಪ ಎದುರಿಸುತ್ತಿರುವ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಬಾಕಿಯಿರುವ ಪಿಎಫ್ ಹಣ ಪಾವತಿಸುವಂತೆ ಒತ್ತಾಯಿಸಿ ಅಧಿಕಾರಿಗಳು ನೀಡಿರುವ ನೋಟಿಸ್‌ಗಳಿಗೆ ನನ್ನ ಕಾನೂನು ಸಲಹಾ ತಂಡ ಪ್ರತಿಕ್ರಿಯಿಸಿದೆ. ಆ ಕಂಪನಿಗಳಲ್ಲಿ ನನ್ನ ಪಾತ್ರವಿಲ್ಲ ಎಂದು ದೃಢೀಕರಿಸುವ ದಾಖಲೆಗಳನ್ನು ನೀಡಿದ್ದೇನೆ. ಅದರ ಹೊರತಾಗಿ ಪಿಎಫ್ ಅಧಿಕಾರಿಗಳು ಪ್ರಕ್ರಿಯೆ ಮುಂದುವರೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಷಯವನ್ನು ಬಗೆಹರಿಸಲು ನನ್ನ ಪರ ಕಾನೂನು ಸಲಹೆಗಾರರು ಕ್ರಮ ಕೈಗೊಳ್ಳಲಿದ್ದಾರೆ ಎಂದೂ ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.

ಏನಿದು ಪ್ರಕರಣ

ರಾಬಿನ್ ಅವರು ಸೆಂಚುರೀಸ್ ಲೈಫ್-ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್‌ ಲಿಮಿಟೆಡ್ ಎಂಬ ಖಾಸಗಿ ಕಂಪನಿಯ ಸಹ ಪಾಲುದಾರರಾಗಿದ್ದಾರೆ. ಕಂಪನಿಯ ಕೆಲ ಉದ್ಯೋಗಿಗಳ ಭವಿಷ್ಯ ನಿಧಿ ಹಣ ಪಾವತಿಸಿಲ್ಲ. ಸಂಬಳದಲ್ಲಿ ಭವಿಷ್ಯ ನಿಧಿ ಹಣ ಕಡಿತಗೊಳಿಸಿಕೊಂಡು,ಉದ್ಯೋಗಿಗಳ ಖಾತೆಗೆ ಹಾಕದೇ ₹ 23,36,602 ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಡಿಸೆಂಬರ್ 4ರಂದು ಬಂಧನದ ವಾರಂಟ್ ಜಾರಿಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.