ADVERTISEMENT

ಬಿಸಿಸಿಐನಲ್ಲಿ ರೋಜರ್‌ಗೆ ಉನ್ನತ ಸ್ಥಾನ? ಐಸಿಸಿಯತ್ತ ಗಂಗೂಲಿ?: ವರದಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 5:41 IST
Last Updated 9 ಅಕ್ಟೋಬರ್ 2022, 5:41 IST
   

ಬೆಂಗಳೂರು: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಕರ್ನಾಟಕದ ರೋಜರ್ ಬಿನ್ನಿ ಅವರಿಗೆ ಪ್ರಮುಖ ಸ್ಥಾನ ಲಭಿಸುವ ಸಾಧ್ಯತೆ ಇದೆ.

ಇದೇ 18ರಂದು ಮುಂಬೈನಲ್ಲಿ ನಡೆಯಲಿರುವ ಸರ್ವಸದ್ಯಸರ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬಿನ್ನಿ ಈ ಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ಧಾರೆ. ಕೆಎಸ್‌ಸಿಎ ಅವರನ್ನು ನಾಮನಿರ್ದೇಶನ ಮಾಡಿದೆ. ಪ್ರಸ್ತುತ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಖ್ಯಸ್ಥರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅದರಿಂದಾಗಿ ಬಿಸಿಸಿಐ ಅಧ್ಯಕ್ಷ ಸ್ಥಾನ ತೆರವಾಗಲಿದೆ. ವಯಸ್ಸು, ಆಡಳಿತ ಅನುಭವ ಹಾಗೂ 1983ರ ವಿಶ್ವಕಪ್ ವಿಜೇತ ತಂಡದ ಆಲ್‌ರೌಂಡರ್ ಆಗಿರುವ ಬಿನ್ನಿ ಅವರ ಹೆಸರು ಕೇಳಿಬರುತ್ತಿದೆ.

ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಯಲ್ಲಿ ಸದ್ಯ ಕಾರ್ಯದರ್ಶಿಯಾಗಿರುವ ಜಯ್ ಶಾ ಅವರು ಅಧ್ಯಕ್ಷ ಹಾಗೂ ಖಜಾಂಚಿಯಾಗಿರುವ ಅರುಣಸಿಂಗ್ ಧುಮಾಲ್ ಅವರು ಕಾರ್ಯದರ್ಶಿಯಾಗಲಿದ್ದಾರೆಂದು ಹೇಳಲಾಗಿತ್ತು. ಆದರೆ ಈಗ 67 ವರ್ಷದ ರೋಜರ್ ಹೆಸರು ಕೇಳಿಬರುತ್ತಿದೆ.

ADVERTISEMENT

ಪ್ರತಿಬಾರಿಯೂ ಬಿಸಿಸಿಐ ಸರ್ವಸದಸ್ಯರ ಸಭೆಗೆ ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಅವರನ್ನು ನಾಮನಿರ್ದೇಶನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಬಿನ್ನಿಯವರ ಹೆಸರು ಕಳಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ರೋಜರ್ ಮೂರು ವರ್ಷದಿಂದ ಕೆಎಸ್‌ಸಿಎ ಅಧ್ಯಕ್ಷರಾಗಿದ್ದು, ಈ ಹಿಂದೆ ಅವರು ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥರೂ ಆಗಿದ್ದರು.

‘ಬಿಸಿಸಿಐಗೆ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ, ಜಂಟಿ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಆಡಳಿತ ಸಮಿತಿ ಸದಸ್ಯರ ಆಯ್ಕೆ ಎಜಿಎಂನಲ್ಲಿ ನಡೆಯಲಿದೆ. ಇದರಲ್ಲಿ ಯಾವುದಾದರೂ ಒಂದು ಸ್ಥಾನಕ್ಕೆ ರೋಜರ್ ಆಯ್ಕೆಯಾಗುವ ಸಾಧ್ಯತೆ ಇದೆ. ಅಧ್ಯಕ್ಷರೇ ಆಗುತ್ತಾರೆಂದು ಈಗಲೇ ಹೇಳಲು ಸಾಧ್ಯವಿಲ್ಲ. ಇದೇ ವಾರ ನಾಮಪತ್ರ ಸಲ್ಲಿಕೆಯಾಗಲಿವೆ. ಅದರ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಬಿಸಿಸಿಐ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಆದರೆ, ಸೌರವ್ ಗಂಗೂಲಿ ಅವರು ಅಧ್ಯಕ್ಷ ಸ್ಥಾನ ತೊರೆಯುತ್ತಾರೆಂದು ಸದ್ಯ ಹೇಳಲು ಸಾಧ್ಯವಿಲ್ಲವೆನ್ನುತ್ತವೆ ಕೆಲವು ಮೂಲಗಳು. ಬಂಗಾಳ ಕ್ರಿಕೆಟ್ ಸಂಸ್ಥೆಯು ಬಿಸಿಸಿಐ ಎಜಿಎಂಗೆ ಗಂಗೂಲಿ ಅವರನ್ನೇ ನಾಮನಿರ್ದೇಶನ ಮಾಡಿದೆ. ಅವಿಷೇಕ್ ದಾಲ್ಮಿಯಾ ಹೆಸರನ್ನು ಸೂಚಿಸಿಲ್ಲ. ಕರ್ನಾಟಕದಿಂದ ರೋಜರ್ ಬಿನ್ನಿ, ಹಿಮಾಚಲಪ್ರದೇಶದಿಂದ ಅರುಣ ಧುಮಾಲ್, ಸೌರಾಷ್ಟ್ರದಿಂದ ಜಯದೇವ್ ಶಾ(ನಿರಂಜನ್ ಶಾ ಪುತ್ರ), ಗುಜರಾತ್‌ನಿಂದ ಜಯ್ ಶಾ, ಹರಿಯಾಣದಿಂದ ಅನಿರುದ್ಧ ಚೌಧರಿ,ವಿದರ್ಭ ಸಂಸ್ಥೆಯಿಂದ ಅದ್ವೈತ್ ಮನೋಹರ್ (ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ಪುತ್ರ), ಉತ್ತರ‍ಪ್ರದೇಶದಿಂದ ರಾಜೀವ್ ಶುಕ್ಲಾ ಹಾಗೂ ಮುಂಬೈನಿಂದ ಆಶಿಶ್ ಶಿಲಾರ್ ಪ್ರತಿನಿಧಿಸಲಿದ್ದಾರೆ.

ಕೆಎಸ್‌ಸಿಎಗೆ ಯಾರು?
ರೋಜರ್ ಬಿಸಿಸಿಐ ಪದಾಧಿಕಾರಿ ಯಾಗಿ ತೆರಳುವುದರಿಂದ ಅಧ್ಯಕ್ಷ ಕೆಎಸ್‌ಸಿಎ ಅಧ್ಯಕ್ಷ ಸ್ಥಾನ ತೆರವಾಗಲಿದೆ. ಅಲ್ಲದೇ ಸದ್ಯ ಇರುವ ಆಡಳಿತ ಸಮಿತಿಯೂ ನವೆಂಬರ್‌ನಲ್ಲಿ ಮೂರು ವರ್ಷ ಪೂರೈಸಲಿದೆ. ಅದರಿಂದಾಗಿ ಮುಂದಿನ ತಿಂಗಳು ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.

‘ರಾಜ್ಯ ಸಂಸ್ಥೆಗೆ ಸದ್ಯ ಉಪಾಧ್ಯಕ್ಷರಾಗಿರುವ ಜೆ. ಅಭಿರಾಮ್, ಕಾರ್ಯದರ್ಶಿ ಸಂತೋಷ್‌ ಮೆನನ್ ಹಾಗೂ ಖಜಾಂಚಿ ವಿನಯ್ ಮೃತ್ಯುಂಜಯ ಅವರಲ್ಲಿ ಒಬ್ಬರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇದೆ. ಇನ್ನೂ ಯಾವುದೇ ನಿರ್ಣಯವಾಗಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೆಎಸ್‌ಸಿಎ ಸದಸ್ಯರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.