ADVERTISEMENT

ಕ್ಯಾಪ್ಟನ್ ರೋಹಿತ್ ಶರ್ಮಾ ಆಟೊಗ್ರಾಫ್‌ಗಾಗಿ ಕಾದ ಅಭಿಮಾನಿ: 10 ವರ್ಷಗಳ ಕನಸು ನನಸು

ಪಿಟಿಐ
Published 2 ಡಿಸೆಂಬರ್ 2024, 15:06 IST
Last Updated 2 ಡಿಸೆಂಬರ್ 2024, 15:06 IST
<div class="paragraphs"><p>ರೋಹಿತ್ ಶರ್ಮಾ</p></div>

ರೋಹಿತ್ ಶರ್ಮಾ

   

(ಪಿಟಿಐ ಚಿತ್ರ)

ಕ್ಯಾನ್‌ಬೆರಾ: ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್‌ ರೋಹಿತ್ ಶರ್ಮಾ ಅವರ ಉತ್ಕಟ ಅಭಿಮಾನಿಯೊಬ್ಬರು ಬರೋಬ್ಬರಿ 10 ವರ್ಷಗಳ ನಂತರ ತಮ್ಮ ನೆಚ್ಚಿನ ಆಟಗಾರನ ಆಟೊಗ್ರಾಫ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಮನುಕಾ ಓವಲ್‌ಗೆ ಬಂದಿಳಿದ ರೋಹಿತ್ ಅವರನ್ನು ಕಂಡ ಅಭಿಮಾನಿ ‘ಮುಂಬೈ ಕಾ ರಾಜಾ’ ಎಂದು ಹತ್ತಾರು ಬಾರಿ ಚೀರಿ ಹೇಳುವ ಮೂಲಕ ಅವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ನೆಚ್ಚಿನ ಆಟಗಾರನ ಗಮನ ಸೆಳೆಯಲು ಹಲವು ತಂತ್ರಗಳ ಹೂಡಿದ ಈ ಅಭಿಮಾನಿ, ಅಂತಿಮವಾಗಿ ಭಾನುವಾರ ರೋಹಿತ್‌ ಅವರ ಆಟೋಗ್ರಾಫ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 'ಪ್ರೈಮ್‌ ಮಿನಿಸ್ಟರ್‌ 11’ ವಿರುದ್ಧ ಭಾನುವಾರ ನಡೆದ ಅಭ್ಯಾಸ ಪಂದ್ಯದಲ್ಲಿ 6 ವಿಕೆಟ್‌ಗಳ ಸುಲಭ ಜಯ ಸಾಧಿಸಿದ ನಂತರ ರೋಹಿತ್ ಹಸನ್ಮುಖಿಯಾಗಿ ಪೆವಿಲಿಯನ್‌ ಕಡೆ ಹೊರಟರು. ಇಕ್ಕೆಲಗಳಲ್ಲೂ ಅಭಿಮಾನಿಗಳು ಪುಟ್ಟ ಬ್ಯಾಟ್, ಜರ್ಸಿ ಹಿಡಿದು ಆಟೋಗ್ರಾಫ್‌ಗಾಗಿ ಕೈಚಾಚಿದ್ದರು.

ಅದರ ನಡುವೆ ಮುಂಬೈನಿಂದ ಬಂದಿದ್ದ ಅಭಿಮಾನಿಯೊಬ್ಬರು, ‘ರೋಹಿತ್ ಬಾಯ್‌ ಪ್ಲೀಸ್‌, ಹತ್ತು ವರ್ಷಗಳಾಯ್ತು’ ಎಂದು ಜೋರಾಗಿ ಹೇಳಿದರು. ಇತರ ಅಭಿಮಾನಿಗಳಿಗೆ ಆಟೊಗ್ರಾಫ್‌ ಹಾಕುವ ಸಂದರ್ಭದಲ್ಲಿ, ‘ಮುಂಬೈ ಕಾ ರಾಜಾ’ ಎಂಬ ಅಭಿಮಾನಿಯ ಕೂಗು ಮುಗಿಲುಮುಟ್ಟಿತ್ತು. ನಂತರ ಹಸ್ತಾಕ್ಷರ ನೀಡುವ ಮೂಲಕ ಅಭಿಮಾನಿಯ 10 ವರ್ಷಗಳ ಕಾಯುವಿಕೆಯನ್ನು ರೋಹಿತ್ ಕೊನೆಗಾಣಿಸಿದರು.

‘ಪಿಎಂ 11’ ಪಂದ್ಯ ವೇಳೆ ಪ್ರತಿಕೂಲ ಹವಾಮಾನ ಇದ್ದ ಕಾರಣಕ್ಕೆ ಪಂದ್ಯವು 46 ಓವರ್‌ಗಳಿಗೆ ಸೀಮಿತಗೊಂಡಿತು. ಇದರಲ್ಲಿ ರೋಹಿತ್ ಅವರು 4ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದಿದ್ದರು. ಆದರೆ ಕೇವಲ ಮೂರು ರನ್‌ ಗಳಿಸಿದರು. 

ಮಗನ ಜನನದಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದ ರೋಹಿತ್, 2ನೇ ಟೆಸ್ಟ್‌ನಲ್ಲಿ ಆಡಲು ಬಂದಿಳಿದಿದ್ದಾರೆ. ಶುಕ್ರವಾರದಿಂದ ಉಭಯ ತಂಡಗಳ ನಡುವೆ ಅಡಿಲೇಡ್‌ನಲ್ಲಿ 2ನೇ ಕ್ರಿಕೆಟ್ ಟೆಸ್ಟ್ ನಡೆಯಲಿದೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ನಾಯಕತ್ವದಲ್ಲಿ 295 ರನ್‌ಗಳ ಭರ್ಜರಿ ಜಯವನ್ನು ಭಾರತ ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.