ADVERTISEMENT

ಚಲಿಸುತ್ತಿದ್ದ ಬಸ್‌ ಚಾವಣಿಗಪ್ಪಳಿಸಿದ ‘ಹಿಟ್‌ಮ್ಯಾನ್‌’ ಸಿಕ್ಸರ್!

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 17:35 IST
Last Updated 9 ಸೆಪ್ಟೆಂಬರ್ 2020, 17:35 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   

ಅಬುಧಾಬಿ: ಮುಂಬೈ ಇಂಡಿಯನ್ಸ್‌ ತಂಡದ ನಾಯಕ ‘ಹಿಟ್‌ಮ್ಯಾನ್‌‘ ಖ್ಯಾತಿಯ ರೋಹಿತ್ ಶರ್ಮಾ ಅವರ ಬ್ಯಾಟ್‌ನಿಂದ ಈಗಲೇ ಸಿಕ್ಸರ್‌ಗಳು ಸಿಡಿಯುತ್ತಿವೆ.

ಬುಧವಾರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವ ರೋಹಿತ್ ಎತ್ತಿದ ಸಿಕ್ಸರ್‌ಗೆ ಚೆಂಡು ಮೈದಾನದ ಹೊರಗೆ ರಸ್ತೆಯ ಮೇಲೆ ಸಾಗುತ್ತಿದ್ದ ಬಸ್‌ ಮೇಲ್ಚಾವಣಿಗೆ ಅಪ್ಪಳಿಸಿತು. ರೋಹಿತ್ ಸಂಭ್ರಮದಿಂದ ಕೇಕೆ ಹಾಕಿದರು.

ಮುಂಬೈ ಇಂಡಿಯನ್ಸ್‌ ತಂಡದ ಅಧಿಕೃತ ಇನ್ಸ್ಟಾಗ್ರಾಮ್‌ ಮತ್ತು ಟ್ವಿಟರ್‌ನಲ್ಲಿ ಈ ದೃಶ್ಯದ ವಿಡಿಯೊ ಹಾಕಲಾಗಿದೆ. ಪ್ರಕಟವಾದ ನಾಲ್ಕು ಗಂಟೆಗಳಲ್ಲಿ 80 ಸಾವಿರಕ್ಕೂ ಹೆಚ್ಚು ಜನರು ಈ ದೃಶ್ಯ ತುಣುಕನ್ನು ವೀಕ್ಷಿಸಿದರು. ಅವರು ಹೊಡೆದ ಚೆಂಡು ಸುಮಾರು 95 ಮೀಟರ್‌ ಎತ್ತರದಲ್ಲಿ ಸಾಗಿ ಅಂಗಳದ ಹೊರಗೆ ಹೋಗಿದೆ. ಅಲ್ಲಿ ಚಲಿಸುತ್ತಿದ್ದ ಬಸ್‌ ಮೇಲೆ ಬಿದ್ದಿದೆ.

ADVERTISEMENT

ರೋಹಿತ್ ತಮ್ಮ ಪತ್ನಿ ಮತ್ತು ಮಗಳೊಂದಿಗೆ ರೋಹಿತ್ ಅಬುಧಾಬಿಗೆ ತೆರಳಿದ್ದಾರೆ. ಹಾಲಿ ಚಾಂಪಿಯನ್ ಮುಂಬೈ ತಂಡವು ಹೊನಲು ಬೆಳಕಿನಲ್ಲಿ ಅಭ್ಯಾಸ ನಡೆಸುತ್ತಿದೆ. ಕಡ್ಡಾಯ ಕ್ವಾರಂಟೈನ್ ನಂತರ ಅಭ್ಯಾಸ ಆರಂಭಿಸಿರುವ ತಂಡದ ಆಟಗಾರರು ಪೂರ್ಣಪ್ರಮಾಣದಲ್ಲಿ ಭಾಗವಹಿಸುತ್ತಿದ್ದಾರೆ. ಸೆ. 19ರಂದು ನಡೆಯಲಿರುವ ಉದ್ಘಾಟನೆ ಪಂದ್ಯದಲ್ಲಿ ಮುಂಬೈ ತಂಡವು ಚೆನ್ನೈ ಸೂಪರ್ ಕಿಂಗ್ ವಿರುದ್ಧ ಕಣಕ್ಕಿಳಿಯಲಿದೆ.

ಪಠಾಣ್ ಹೋಟೆಲ್ ಕ್ವಾರಂಟೈನ್‌: ಐಪಿಎಲ್‌ ಟೂರ್ನಿಯ ನೇರಪ್ರಸಾರವಾಗುವ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯಲ್ಲಿ ವೀಕ್ಷಕ ವಿವರಣೆ ಮಾಡಲಿರುವ ಇರ್ಫಾನ್ ಪಠಾಣ್ ಅವರನ್ನು ಮುಂಬೈನ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಪಂಚತಾರಾ ಹೋಟೆಲ್‌ನಲ್ಲಿರುವ ಅವರು ಜೀವ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಮುಂಬೈನ ಲೋವರ್ ಪರೇಲ್‌ನಲ್ಲಿರುವ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯ ಸ್ಟುಡಿಯೊಗೆ ತೆರಳಿ ಕಾರ್ಯನಿರ್ವಹಿಸುವ ಮುನ್ನ ಪ್ರತ್ಯೇಕವಾಸದ ನಿಯಮವನ್ನು ಪಾಲಿಸುತ್ತಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಇರ್ಫಾನ್, ‘ಕಾಮೆಂಟೆಟರ್‌ಗಳಿಗೆ ತಮ್ಮ ಮನೆ, ಹೋಟೆಲ್ ಕೋಣೆಗಳೇ ಜೀವ ಸುರಕ್ಷಾ ತಾಣಗಳು’ ಎಂದಿದ್ದಾರೆ. 60 ವರ್ಷ ದಾಟಿದ ವೀಕ್ಷಕ ವಿವರಣೆಗಾರರು ತಮ್ಮ ನಿವಾಸಗಳಿಂದಲೇ ವೀಕ್ಷಕ ವಿವರಣೆ ನೀಡುವ ವ್ಯವಸ್ಥೆಯನ್ನು ವಾಹಿನಿಯು ಮಾಡುತ್ತಿದೆ.

ಸಿದ್ಧತೆ ಪರಿಶೀಲನೆ: ದುಬೈಗೆ ಗಂಗೂಲಿ ದುಬೈ

ಜೀವಸುರಕ್ಷಾ ವಾತಾವರಣದಲ್ಲಿ ನಡೆಯಲಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ಸಿದ್ಧತೆಗಳ ಮೇಲ್ವಿಚಾರಣೆಗಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಬುಧವಾರ ದುಬೈ ತಲುಪಿದರು.

ಕೋವಿಡ್‌–19 ಸೋಂಕು ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ಗೆ (ಯುಎಇ) ಸ್ಥಳಾಂತರಿಸಲಾಗಿದೆ. ‘ಐಪಿಎಲ್‌ ಕಾರಣಕ್ಕಾಗಿ ಆರು ತಿಂಗಳ ಬಳಿಕ ಇದು ಮೊದಲ ವಿಮಾನ ಪ್ರಯಾಣ. ಬದುಕು ಬದಲಾಗಿದೆ’ ಎಂದು ಗಂಗೂಲಿ ಅವರು ದುಬೈಗೆ ತೆರಳುವ ಮೊದಲು ಇನ್ಸ್ಟಾಗ್ರಾಂ ಪೋಸ್ಟ್‌ ಮಾಡಿದ್ದಾರೆ. ಕೋವಿಡ್‌ ತಡೆ ಮಾರ್ಗಸೂಚಿಗಳ ಪ್ರಕಾರ, ಮುಖಗವಸು ಹಾಗೂ ಫೇಸ್‌ಶೀಲ್ಡ್‌ ಧರಿಸಿರುವ ತಮ್ಮ ಚಿತ್ರವನ್ನೂ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.