ADVERTISEMENT

ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಬಲ್ಲ ಏಕೈಕ ಆಟಗಾರ ರೋಹಿತ್ ಶರ್ಮಾ: ಹಾಗ್

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 9:28 IST
Last Updated 23 ಮಾರ್ಚ್ 2020, 9:28 IST
   

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗಬ್ರಾಡ್‌ ಹಾಗ್ ಅವರು ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಅವರು ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡ ದ್ವಿಶತಕ ಸಿಡಿಸಿಲ್ಲ. ಹಾಗಾಗಿ ಟ್ವಿಟರ್‌ನಲ್ಲಿ ಶಿವಂ ಜೈಸ್ವಾಲ್‌ ಎನ್ನುವವರು, ‘ಬ್ರಾಡ್‌ ಹಾಗ್‌, ನಿಮ್ಮ ಪ್ರಕಾರ ಟಿ20 ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಸಿಡಿಸಬಲ್ಲ ಆಟಗಾರ ಯಾರಾಗಬಲ್ಲರು?’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹಾಗ್‌, ‘ಸದ್ಯಕ್ಕೆ ರೋಹಿತ್‌ ಶರ್ಮಾ ಅವರಿಗೆ ಮಾತ್ರವೇ ಆಸಾಮರ್ಥ್ಯವಿದೆ ಎಂದು ಅಂದುಕೊಂಡಿದ್ದೇನೆ. ಉತ್ತಮ ಸ್ಟ್ರೈಕ್‌ರೇಟ್‌, ಒಳ್ಳೆಯ ಟೈಮಿಂಗ್‌, ಕ್ರೀಡಾಂಗಣದ ಎಲ್ಲ ಮೂಲೆಗಳಿಗೂ ಸಿಕ್ಸರ್ ಎತ್ತುವಂತಹ ಶಾಟ್‌ಗಳನ್ನು ಪ್ರಯೋಗಿಸಬಲ್ಲರು’ ಎಂದಿದ್ದಾರೆ.

ರೋಹಿತ್‌ ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ದ್ವಿಶತಕ ಸಿಡಿಸಿದ್ದಾರೆ. ಟಿ20ಯಲ್ಲಿ ಹೆಚ್ಚು (4) ಶತಕ ಸಿಡಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಇದುವರೆಗೆ ಒಟ್ಟು 108 ಅಂ.ರಾ ಟಿ20 ಪಂದ್ಯಗಳನ್ನು ಆಡಿರುವ ಅವರು, 2773 ರನ್ ಗಳಿಸಿದ್ದಾರೆ.

ADVERTISEMENT

ಟಿ20ಯಲ್ಲಿ ಇನಿಂಗ್ಸ್‌ವೊಂದರಲ್ಲಿ ವೈಯಕ್ತಿಕ ಗರಿಷ್ಠ ಮೊತ್ತದ ದಾಖಲೆ ಇರುವುದು ಆಸಿಸ್‌ ನಾಯಕ ಆ್ಯರನ್‌ ಫಿಂಚ್‌ ಹೆಸರಲ್ಲಿ. ಅವರು ಜಿಂಬಾಬ್ವೆ ವಿರುದ್ಧ ಕೇವಲ 76 ಎಸೆತಗಳಲ್ಲಿ 176ರನ್‌ ಬಾರಿಸಿದ್ದರು. ಅಫ್ಗಾನಿಸ್ತಾನದ ಹಜ್ರತುಲ್ಲಾ ಜಜಾಯ್‌ (162) 2ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.