ರೋಹಿತ್ ಶರ್ಮಾ, ಅಭಿಷೇಕ್ ನಾಯರ್
(ಚಿತ್ರ ಕೃಪೆ: ರೋಹಿತ್ ಶರ್ಮಾ)
ಮುಂಬೈ: ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿ ವೇಳೆ ಮತ್ತೆ ತಂಡವನ್ನು ಸೇರುವ ನಿರೀಕ್ಷೆಯಲ್ಲಿರುವ ಟೀಮ್ ಇಂಡಿಯಾದ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ.
ಮುಂಬೈಯಲ್ಲಿ ಟೀಮ್ ಇಂಡಿಯಾದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಮಾರ್ಗದರ್ಶನದಲ್ಲಿ ರೋಹಿತ್ ಅಭ್ಯಾಸ ನಡೆಸುತ್ತಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಗೆಲುವಿನ ಬಳಿಕ ಚುಟುಕು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ಸರಣಿಗೂ ಮುನ್ನ ಟೆಸ್ಟ್ ಕ್ರಿಕೆಟ್‌ಗೂ ವಿದಾಯ ಹಾಡಿದ್ದರು.
38 ವರ್ಷದ ರೋಹಿತ್ ಈಗ, ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಆದರೆ ಬಿಸಿಸಿಐ ಯುವ ಕ್ರಿಕೆಟಿಗರಿಗೆ ಆದ್ಯತೆ ನೀಡುವ ಸಾಧ್ಯತೆ ಇರುವುದರಿಂದ ಏಕದಿನ ಕ್ರಿಕೆಟ್‌ನಲ್ಲೂ ರೋಹಿತ್ ಅವರ ಭವಿಷ್ಯಕ್ಕೆ ತೆರೆ ಬೀಳಲಿದೆಯೇ ಎಂಬ ಕುತೂಹಲ ಮೂಡಿದೆ.
ರೋಹಿತ್ ಅವರಂತೆಯೇ ವಿರಾಟ್ ಕೊಹ್ಲಿ ಸಹ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿದಿದ್ದಾರೆ. ಮುಂದಿನ ಏಕದಿನ ವಿಶ್ವಕಪ್ 2027ರಲ್ಲಿ ನಡೆಯಲಿರುವುದರಿಂದ ಅಲ್ಲಿಯವರೆಗೆ ಅವರಿಬ್ಬರಿಗೂ ಮುಂದುವರಿಯುವ ಸಾಧ್ಯತೆ ಕಷ್ಟ ಎನ್ನಲಾಗುತ್ತಿದೆ. ಹಾಗಾಗಿ ಯುವ ಕ್ರಿಕೆಟಿಗರಿಗೆ ಮಣೆ ಹಾಕುವ ಇರಾದೆಯನ್ನು ಬಿಸಿಸಿಐ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ರೋಹಿತ್ ಶರ್ಮಾ ನಾಯಕತ್ವದಲ್ಲೇ ಭಾರತ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದಿತ್ತು.
ಮುಂಬರುವ ಆಸ್ಟ್ರೇಲಿಯಾದ ವಿರುದ್ಧದ ಸರಣಿ ರೋಹಿತ್ ಹಾಗೂ ಕೊಹ್ಲಿ ಪಾಲಿಗೆ ವಿದಾಯದ ಸರಣಿ ಆಗಿರಲಿದೆ ಎಂಬ ವದಂತಿಯೂ ಹರಡುತ್ತಿದೆ. ಅದಾದ ಬಳಿಕ ಶುಭಮನ್ ಗಿಲ್ ಅವರನ್ನೇ ಏಕದಿನಕ್ಕೂ ನಾಯಕರಾಗಿ ಘೋಷಿಸುವ ಬಗ್ಗೆ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.