ADVERTISEMENT

ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮಾ ನಾಯಕ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 14:09 IST
Last Updated 8 ಡಿಸೆಂಬರ್ 2021, 14:09 IST
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ    

ಬೆಂಗಳೂರು: ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಅವರನ್ನು ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ಬುಧವಾರ ಈ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟ್ವೀಟ್ ಮಾಡಿದೆ.

‘ರಾಷ್ಟ್ರೀಯ ಆಯ್ಕೆ ಸಮಿತಿಯು ರೋಹಿತ್ ಶರ್ಮಾ ಅವರನ್ನು ಟಿ20 ಮತ್ತು ಏಕದಿನ ತಂಡಗಳಿಗೆ ನಾಯಕರನ್ನಾಗಿ ನೇಮಕ ಮಾಡಲು ನಿರ್ಧರಿಸಿದೆ’ ಎಂದು ಮಂಡಳಿ ಟ್ವೀಟ್ ಮಾಡಿದೆ.

ADVERTISEMENT

ಈಚೆಗೆ ಯುಎಇಯಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಂತರ ವಿರಾಟ್ ಕೊಹ್ಲಿ ಅವರು ಭಾರತ ಟಿ20 ತಂಡದ ನಾಯಕತ್ವ ಬಿಟ್ಟುಕೊಟ್ಟಿದ್ದರು. ಆದರೆ, ಏಕದಿನ ಕ್ರಿಕೆಟ್ ತಂಡದ ನಾಯಕತ್ವ ಬಿಡುವ ಬಗ್ಗೆ ಇದುವರೆಗೂ ಅವರು ಪ್ರಸ್ತಾಪ ಮಾಡಿರಲಿಲ್ಲ. ಅವರು ಟೆಸ್ಟ್ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ. ಈ ಕುರಿತು ಆಯ್ಕೆ ಸಮಿತಿಯು ವಿರಾಟ್ ಜೊತೆಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಭಾರತ ತಂಡವು ಇದೇ ವಾರ ದಕ್ಷಿಣ ಆಫ್ರಿಕಾಗೆ ತೆರಳಲಿದೆ. ಅಲ್ಲಿ ಮೂರು ಏಕದಿನ ಮತ್ತು ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಡಲಿದೆ. ಏಕದಿನ ಸರಣಿಯಲ್ಲಿ ರೋಹಿತ್ ತಂಡವನ್ನು ಮುನ್ನಡೆಸುವರು ಎಂದು ತಿಳಿದುಬಂದಿದೆ.

ಶ್ವೇತವರ್ಣದ ಚೆಂಡಿನ ಕ್ರಿಕೆಟ್‌ಗೆ ಮತ್ತು ಕೆಂಪು ಚೆಂಡಿನ ಕ್ರಿಕೆಟ್‌ ಮಾದರಿಗೆ (ಟೆಸ್ಟ್) ಪ್ರತ್ಯೇಕ ನಾಯಕರನ್ನು ನೇಮಕ ಮಾಡುವ ಬಗ್ಗೆ ಮಂಡಳಿಯಲ್ಲಿ ಕೆಲವು ದಿನಗಳಿಂದ ಚರ್ಚೆಗಳು ನಡೆಯುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.