ADVERTISEMENT

ಅಂದೇ ನಿವೃತ್ತಿ ನಿರ್ಧಾರ ಮಾಡಿದ್ದೆ: ಕಠಿಣ ದಿನಗಳನ್ನು ನೆನೆದ ರೋಹಿತ್ ಶರ್ಮಾ

ಪಿಟಿಐ
Published 22 ಡಿಸೆಂಬರ್ 2025, 6:16 IST
Last Updated 22 ಡಿಸೆಂಬರ್ 2025, 6:16 IST
<div class="paragraphs"><p>ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ</p></div>

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ

   

(ಪಿಟಿಐ ಚಿತ್ರ)

ನವದೆಹಲಿ: 2023ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಸೋತ ಬಳಿಕ, ‘ಕ್ರೀಡೆ ನನ್ನಿಂದ ಎಲ್ಲವನ್ನೂ ಕಸಿದುಕೊಂಡಿದೆ ಎಂದು ಭಾವಿಸಿ ನಿವೃತ್ತಿಯ ಬಗ್ಗೆ ಯೋಚಿಸಿದ್ದೆ’ ಎಂದು ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ADVERTISEMENT

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಸತತ 9 ಗೆಲುವುಗಳೊಂದಿಗೆ ಫೈನಲ್ ಪ್ರವೇಶಿಸಿತ್ತು. ಆದರೆ, ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಟ್ರಾವಿಸ್ ಹೆಡ್ ಬಾರಿಸಿದ ಅಮೋಘ ಶತಕ ಭಾರತ ತಂಡದಿಂದ ಮೂರನೇ ಏಕದಿನ ವಿಶ್ವಕಪ್ ಗೆಲುವನ್ನು ಕಸಿದುಕೊಂಡಿತ್ತು.

‘2023ರ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ನಾನು ಆತಂಕಗೊಂಡಿದ್ದೆ ಮತ್ತು ಈ ಕ್ರೀಡೆ ನನ್ನಿಂದ ಎಲ್ಲವನ್ನೂ ಕಸಿದುಕೊಂಡಿದೆ. ಇನ್ನು ಮುಂದೆ ನಾನು ಈ ಕ್ರೀಡೆಯನ್ನು ಆಡಬಾರದು. ನನ್ನಲ್ಲಿ ಏನೂ ಉಳಿದಿಲ್ಲ ಎಂದು ಭಾವಿಸಿದ್ದೆ’ ಎಂದು ಭಾನುವಾರ ಗುರುಗ್ರಾಮದಲ್ಲಿ ನಡೆದ ಮಾಸ್ಟರ್ಸ್ ಯೂನಿಯನ್ ಕಾರ್ಯಕ್ರಮದಲ್ಲಿ ರೋಹಿತ್ ಹೇಳಿದರು.

‘ನಾನು ಆ ಸೋಲಿನಿಂದ ಹೊರಬರುವುದು ಅಗತ್ಯವಾಗಿತ್ತು, ಅದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಂಡೆ. ಸದ್ಯ, ಆ ಸೋಲಿನ ನೋವಿನಿಂದ ಹೊರಬಂದು ಮತ್ತೆ ಚೈತನ್ಯ ಪಡೆದುಕೊಂಡಿದ್ದೇನೆ. ಮತ್ತೆ ಮೈದಾನದಲ್ಲಿ ಆಡಲು ಪ್ರಾರಂಭಿಸಿದ್ದೇನೆ’ ಎಂದರು.

‘ವಿಶ್ವಕಪ್ ಸೋಲು ಎಲ್ಲರಿಗೂ ನಿರಾಶೆ ಉಂಟು ಮಾಡಿತ್ತು, ವೈಯಕ್ತಿಕವಾಗಿ ಅದು ನನಗೆ ತುಂಬಾ ಕಠಿಣ ಸಮಯವಾಗಿತ್ತು. ಏಕೆಂದರೆ, ನಾನು ಆ ವಿಶ್ವಕಪ್‌ಗಾಗಿ ಕೇವಲ 2–3 ತಿಂಗಳು ಮಾತ್ರ ಅಭ್ಯಾಸ ನಡೆಸಿಲ್ಲ. ಬದಲಾಗಿ, 2022 ರಲ್ಲಿ ನಾಯಕತ್ವ ವಹಿಸಿಕೊಂಡಾಗಿನಿಂದಲೂ ವಿಶ್ವಕಪ್ ಗೆಲುವಿನ ಬಗ್ಗೆ ಯೋಚಿಸಿದ್ದೆ’ ಎಂದು ಅವರು ತಿಳಿಸಿದರು.

ರೋಹಿತ್ ಶರ್ಮಾ 2023ರ ಏಕದಿನ ವಿಶ್ವಕಪ್ ಸೋಲಿನಿಂದ ಮನನೊಂದು ಕ್ರಿಕೆಟ್‌ನಿಂದ ನಿವೃತ್ತಿ ತೆಗೆದುಕೊಳ್ಳಲು ಬಯಸಿದ್ದರು. ಆದರೆ, ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿದ ಬಳಿಕವೂ ಶುಭಮನ್ ಗಿಲ್ ನಾಯಕತ್ವದ ಭಾರತ ಏಕದಿನ ತಂಡದಲ್ಲಿ ಆಡುತ್ತಿರುವ ಅವರು, 2027ರ ಏಕದಿನ ವಿಶ್ವಕಪ್ ಆಡುವ ಗುರಿ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.