ADVERTISEMENT

ಎಚ್ಚರದಿಂದಿರಿ, ಸುರಕ್ಷಿತವಾಗಿರಿ: ಇದು ಕೋವಿಡ್–19 ಬಗ್ಗೆ ರೋಹಿತ್ ಮಾಡಿದ ಮನವಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 9:03 IST
Last Updated 19 ಮಾರ್ಚ್ 2020, 9:03 IST
   

ಮುಂಬೈ:ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್‌ ಸೋಂಕಿನ ಬಗ್ಗೆ ಎಚ್ಚರದಿಂದ ಇರುವಂತೆ ಭಾರತ ಕ್ರಿಕೆಟ್‌ ತಂಡದ ಉಪನಾಯಕ ಹಾಗೂಸ್ಫೋಟಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಮನವಿ ಮಾಡಿದ್ದಾರೆ.

ಈ ಸಂಬಂಧ ಟ್ವಿಟರ್‌ನಲ್ಲಿ ವಿಡಿಯೊ ಹರಿಬಿಟ್ಟಿರುವರೋಹಿತ್‌,‘ಕಳೆದ ಕೆಲ ದಿನಗಳು ನಮ್ಮೆಲ್ಲರ ಪಾಲಿಗೆ ಕಠಿಣವಾಗಿದ್ದವು. ಪ್ರಪಂಚ ಈಗಲೂ ತಟಸ್ಥವಾಗಿ ಉಳಿದುಬಿಟ್ಟಿರುವುದುಅತ್ಯಂತ ಬೇಸರದ ಸಂಗತಿ. ನಾವೆಲ್ಲರೂ ಒಗ್ಗಟ್ಟಾದರೆ, ಈ ಜಗತ್ತು ಸಹಜಸ್ಥಿತಿಗೆ ತರಬಹುದು. ಅದಕ್ಕಾಗಿ ನಾವು ಸ್ವಲ್ಪ ಬುದ್ದಿವಂತಿಕೆ ತೋರಬೇಕು. ಮುಂಜಾಗ್ರತೆ ವಹಿಸಬೇಕು.ನಮ್ಮ ಸುತ್ತುಮುತ್ತಲಿನ ಪ್ರದೇಶದಲ್ಲಿ ಯಾವುದೇ ರೀತಿಯ ಸೋಂಕಿನ ಗುಣಲಕ್ಷಣಗಳು ಕಂಡುಬಂದರೆ, ಹತ್ತಿರದ ವೈದ್ಯಾಡಳಿತಕ್ಕೆ ಮಾಹಿತಿ ನೀಡಬೇಕು. ಏಕೆಂದರೆ ಮಕ್ಕಳು ಶಾಲೆಗೆ ಹೋಗಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಮಾಲ್‌ಗಳಿಗೆ ಹೋಗಲು ಆಸೆಪಡುತ್ತೇವೆ. ಥಿಯೇಟರ್‌ನಲ್ಲಿ ಕುಳಿತು ಸಿನಿಮಾ ನೋಡಲು ಇಚ್ಛಿಸುತ್ತೇವೆ’ ಎಂದಿದ್ದಾರೆ.

ಮುಂದುವರಿದು,‘ತಮ್ಮ ಜೀವನವನ್ನೇ ಪಣಕ್ಕಿಟ್ಟು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಪ್ರಶಂಸಿಸಲು ಬಯಸುತ್ತೇನೆ. ಕೋವಿಡ್‌–19ನಿಂದಾಗಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದು ತುಂಬಾ ನೋವು ನೀಡಿದೆ. ಎಲ್ಲರೂ ಕಾಳಜಿವಹಿಸಿ. ಸುರಕ್ಷಿತವಾಗಿರಿ’ ಎಂದು ಕರೆ ನೀಡಿದ್ದಾರೆ.

ADVERTISEMENT

ಈ ವಿಡಿಯೊವನ್ನು ಸುಮಾರು 57 ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚಿಕೊಂಡಿದ್ದು,6 ಸಾವಿರಕ್ಕೂ ಹೆಚ್ಚಿನವರು ಶೇರ್‌ ಮಾಡಿಕೊಂಡಿದ್ದಾರೆ.

ಇದುವರೆಗೆ ಸುಮಾರು 2,20,229 ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಒಟ್ಟು85,769ಜನರು ಗುಣಮುಖರಾಗಿದ್ದು, 8,981ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.