ಮುಂಬೈ: ಭಾರತದ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಮಂಗಳವಾರ ಮುಂಬೈ ರಣಜಿ ತಂಡದೊಂದಿಗೆ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು.
ಇದೇ 23ರಂದು ನಡೆಯಲಿರುವ ರಣಜಿ ಟ್ರೋಫಿ ಗುಂಪು ಹಂತದ ಪಂದ್ಯದಲ್ಲಿ ಮುಂಬೈ ತಂಡ ಆಡಲಿದೆ. ಎಂಸಿಎ–ಬಿಕೆಸಿ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಮುಂಬೈ ತಂಡವು ಜಮ್ಮು–ಕಾಶ್ಮೀರ ತಂಡವನ್ನು ಎದುರಿಸಲಿದೆ. ರಣಜಿ ಟೂರ್ನಿಯ ಲೀಗ್ ಹಂತದಲ್ಲಿ ಇನ್ನೆರಡು ಪಂದ್ಯಗಳಷ್ಟೇ ಉಳಿದಿದ್ದು, ನಾಕೌಟ್ ಹಂತಕ್ಕೆ ತಲುಪಲು ಈ ಹಂತದ ಫಲಿತಾಂಶ ಮುಖ್ಯವಾಗಿದೆ.
ಆದರೆ ಆ ರಣಜಿ ಪಂದ್ಯದಲ್ಲಿ ರೋಹಿತ್ ಆಡುವ ಬಗ್ಗೆ ಇನ್ನೂ ಯಾವುದೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
37 ವರ್ಷದ ರೋಹಿತ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಈಚೆಗೆ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಅವರು ಮೂರು ಪಂದ್ಯಗಳಿಂದ 31 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಸರಣಿಯ ಕೊನೆಯ ಪಂದ್ಯದಲ್ಲಿ ಅವರು ತಮ್ಮ ಫಾರ್ಮ್ ಕೊರತೆಯಿಂದಾಗಿ ತಂಡದಿಂದ ಹೊರಗುಳಿಯಬೇಕಾಯಿತು.
ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ತಮ್ಮ ಲಯವನ್ನು ಮರಳಿ ಗಳಿಸಲು ರಣಜಿ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ರೋಹಿತ್ ಅವರು 2015ರಲ್ಲಿ ರಣಜಿ ಪಂದ್ಯವನ್ನು ಉತ್ತರಪ್ರದೇಶ ವಿರುದ್ಧ ಆಡಿದ್ದರು. ನಂತರ ಇದುವರೆಗೆ ಆಡಿಲ್ಲ.
ಕಳೆದ ಭಾನುವಾರ ಆಸ್ಟ್ರೇಲಿಯಾ ಎದುರಿನ ಸರಣಿಯ ಸೋಲಿನ ಅವಲೋಕನದ ಸಭೆಯಲ್ಲಿ ಬಿಸಿಸಿಐ ನೂತನ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರೋಹಿತ್ ಕೂಡ ಹಾಜರಿದ್ದರು.
ಕರ್ನಾಟಕದ ಎದುರು ಗಿಲ್ ಕಣಕ್ಕೆ
ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅವರು ಪಂಜಾಬ್ ರಣಜಿ ಟ್ರೋಫಿ ತಂಡವನ್ನು ಸೇರಿಕೊಂಡಿದ್ದಾರೆ. ಇದೇ 23ರಂದು ಬೆಂಗಳೂರಿನಲ್ಲಿ ನಡೆಯುವ ಕರ್ನಾಟಕ ಎದುರಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯುವರು.
ಈಚೆಗೆ ನಡೆದ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಅವರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ರಾಷ್ಟ್ರೀಯ ತಂಡದಿಂದ ಬಿಡುವು ಸಿಕ್ಕಾಗ ದೇಶಿ ಟೂರ್ನಿಗಳಲ್ಲಿ ಆಟಗಾರರು ಆಡಬೇಕು ಎಂದು ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದರು.
ರಣಜಿ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಇರುವ ವಾಸೀಂ ಜಾಫರ್ ಅವರು ಪಂಜಾಬ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಇದರಿಂದಾಗಿ ಗಿಲ್ ಅವರಿಗೆ ಜಾಫರ್ ಅವರಿಂದ ಮಾರ್ಗದರ್ಶನ ಪಡೆಯುವ ಅವಕಾಶ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.