ADVERTISEMENT

ರಣಜಿ ಕ್ರಿಕೆಟ್: ಕರ್ನಾಟಕದ ನಾಕೌಟ್ ಕನಸು ಜೀವಂತ

ಯಶೋವರ್ಧನ್ ಪರಂತಾಪ್ ಬೌಲಿಂಗ್ ಪ್ರತಾಪ; ಶುಭಮನ್ ಗಿಲ್ ಶತಕ

ಗಿರೀಶದೊಡ್ಡಮನಿ
Published 25 ಜನವರಿ 2025, 18:53 IST
Last Updated 25 ಜನವರಿ 2025, 18:53 IST
ಕರ್ನಾಟಕ ತಂಡದ ಬೌಲರ್ ಯಶೋವರ್ಧನ್ ಪರಂತಾಪ್   –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್ 
ಕರ್ನಾಟಕ ತಂಡದ ಬೌಲರ್ ಯಶೋವರ್ಧನ್ ಪರಂತಾಪ್   –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್    

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಸೇರಿದ್ದ ಕ್ರಿಕೆಟ್  ಅಭಿಮಾನಿಗಳಿಗೆ ನಿರಾಶೆಯಾಗಲಿಲ್ಲ. ಆತಿಥೇಯ ತಂಡವು ನಿರೀಕ್ಷೆಯಂತೆ ಗೆಲುವು ಸಾಧಿಸಿತು. ಪಂಜಾಬ್ ತಂಡದ ‘ತಾರೆ’ ಶುಭಮನ್ ಗಿಲ್ ಚೆಂದದ ಶತಕ ದಾಖಲಿಸಿ ಮನರಂಜಿಸಿದರು.

ಕರ್ನಾಟಕ ತಂಡವು ಪಂಜಾಬ್ ಎದುರು ಇನಿಂಗ್ಸ್ ಮತ್ತು 207 ರನ್‌ಗಳಿಂದ ಜಯಿಸಿತು. ಇನ್ನೊಂದೆಡೆ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡದ ಉಪನಾಯಕನಾಗಿ ಆಯ್ಕೆಯಾಗಿರುವ ಶುಭಮನ್ ಗಿಲ್ (102; 171ಎ, 4X14, 6X3) ಶತಕದ ಸವಿಯನ್ನೂ ಉಣಬಡಿಸಿದರು. ಇದಲ್ಲದೇ ಅಂಪೈರ್‌ ನೀಡಿದ ಕೆಲವು ಅನುಮಾನಾಸ್ಪದ ತೀರ್ಪುಗಳೂ ಕಾವೇರಿಸಿದವು. ಎರಡೂವರೆ ದಿನಗಳಲ್ಲಿ ಮುಗಿದ ಪಂದ್ಯದ ಈ ಜಯವು ಕರ್ನಾಟಕ ತಂಡವು ಸಿ ಗುಂಪಿನಿಂದ ನಾಕೌಟ್ ಪ್ರವೇಶಿಸುವ ಸಣ್ಣ ಆಸೆಯನ್ನು ಇನ್ನೂ ಜೀವಂತವಾಗುಳಿಸಿತು.

ಕರ್ನಾಟಕ ತಂಡವು ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಮೊದಲ ಇನಿಂಗ್ಸ್‌ನಲ್ಲಿ 420 ರನ್‌ ಮುನ್ನಡೆ ಗಳಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಪಂಜಾಬ್ ತಂಡಕ್ಕೆ 63.4 ಓವರ್‌ಗಳಲ್ಲಿ 213 ರನ್‌ ಗಳಿಸಲಷ್ಟೇ  ಸಾಧ್ಯವಾಯಿತು. ಅದರಲ್ಲಿ ಗಿಲ್ ಅವರದ್ದೇ ಸಿಂಹಪಾಲು. ಅವರು ಅರ್ಧಶತಕವನ್ನು 119 ಎಸೆತಗಳಲ್ಲಿ ಪೂರೈಸಿದರು. ಗಿಲ್ ಅವರು 57 ರನ್‌ ಮಾಡಿದ್ದ ಸಂದರ್ಭದಲ್ಲಿ ಒಂದು ಜೀವದಾನ ಲಭಿಸಿತು. ನಂತರದ 50 ರನ್‌ಗಳನ್ನು ಕೇವಲ 40 ಎಸೆತಗಳಲ್ಲಿ ಗಳಿಸಿದರು.

ADVERTISEMENT

ಯಶೋವರ್ಧನ್ ಯಶಸ್ಸು

ಎರಡನೇ ದಿನದಾಟದ ಮುಕ್ತಾಯಕ್ಕೆ ಪಂಜಾಬ್ ತಂಡವು 13 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 24 ರನ್ ಗಳಿಸಿತ್ತು. 7 ರನ್ ಗಳಿಸಿದ್ದ ಗಿಲ್ ಮತ್ತು  ಜಸ್ ಇಂದರ್ ಕ್ರೀಸ್‌ನಲ್ಲಿದ್ದರು.  ಶನಿವಾರ ಬೆಳಿಗ್ಗೆ ಆಟ ಮುಂದುವರಿಸಿದ ಅವರು ಸುಮಾರು ಒಂದು ಗಂಟೆ ಬೌಲರ್‌ಗಳನ್ನು ಕಾಡಿದರು. ಕರ್ನಾಟಕದ ಮಯಂಕ್ ಅವರ ಬೌಲಿಂಗ್ ಬದಲಾವಣೆ, ಬೌಲರ್‌ಗಳ ನಿಯೋಜನೆ ಮತ್ತು ಫೀಲ್ಡಿಂಗ್ ನಿಯೋಜನೆಗಳು ಹೆಚ್ಚು ಫಲ ಕೊಡಲಿಲ್ಲ. ಇಬ್ಬರೂ ಬ್ಯಾಟರ್‌ಗಳು ಸಮಾಧಾನದಿಂದ ಬ್ಯಾಟಿಂಗ್ ಮಾಡಿದರು. 3ನೇ ವಿಕೆಟ್‌ಗೆ 38 ರನ್ ಸೇರಿಸಿದರು.

27ನೇ ಓವರ್‌ ಬೌಲಿಂಗ್ ಮಾಡಿದ ಯಶೋವರ್ಧನ್ ಕರ್ನಾಟಕ ಬಳಗದಲ್ಲಿ ಸಂತಸದ ಅಲೆ ಎಬ್ಬಿಸಿದರು. ಇದೊಂದೇ ಓವರ್‌ನಲ್ಲಿ ಅವರು ಜಸ್ ಇಂದರ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ರಮಣದೀಪ್ ಸಿಂಗ್ ಅವರ ಕ್ಯಾಚ್ ತಾವೇ ಪಡೆದರು. 21 ವರ್ಷದ ಯಶೋವರ್ಧನ್ ಅವರ ವೃತ್ತಿಜೀವನದ ಎರಡನೇ ಪ್ರಥಮ ದರ್ಜೆ ಪಂದ್ಯ ಇದು. ತಮ್ಮ ಇನ್ನೊಂದು ಓವರ್‌ನಲ್ಲಿ ಯಶೋವರ್ಧನ್ ಅವರು ಸನ್ವೀರ್ ಸಿಂಗ್ ವಿಕೆಟ್ ಎಗರಿಸಿದರು.

ಕ್ರೀಸ್‌ಗೆ ಬಂದ ಮಯಂಕ್ ಮಾರ್ಕಂಡೆ ಅವರು ಗಿಲ್  ಜೊತೆಗೂಡಿ 63 ರನ್ ಸೇರಿಸಿದರು. ನಿಧಾನವಾಗಿ ಇನಿಂಗ್ಸ್‌ಗೆ ಬಲ ತುಂಬಿದರು. ಊಟದ ವಿರಾಮದ ನಂತರ ಗಿಲ್ ತಮ್ಮ ಆಟದ ವೇಗ ಹೆಚ್ಚಿಸಿದರು. ಈ ಹಂತದಲ್ಲಿ ಬೌಲಿಂಗ್‌ ಮಾಡಿದ ಅನುಭವಿ ವೇಗಿ ಪ್ರಸಿದ್ಧ ಕೃಷ್ಣ ಅವರ ಎಸೆತದಲ್ಲಿ ಮಯಂಕ್ ಎಲ್‌ಬಿಡಬ್ಲ್ಯು ಆದರು. ಆದರೆ, ಅಂಪೈರ್ ಅಕ್ಷಯ್ ತೋತ್ರೆ ನೀಡಿದ ತೀರ್ಪಿಗೆ ಅಸಮಾಧಾನದಿಂದಲೇ ಮಯಂಕ್ ಹೊರನಡೆದರು.

ಕ್ರೀಸ್‌ಗೆ ಬಂದ ಬಜ್ವಾ (ಔಟಾಗದೆ 26; 38ಎ) ಒಂದಿಷ್ಟು ಹೋರಾಟ ಮಾಡಿದರು.  

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಪಂಜಾಬ್ 29 ಓವರ್‌ಗಳಲ್ಲಿ 55. ಕರ್ನಾಟಕ: 122.1 ಓವರ್‌ಗಳಲ್ಲಿ 475. ಎರಡನೇ ಇನಿಂಗ್ಸ್: 63.4 ಓವರ್‌ಗಳಲ್ಲಿ 213 (ಶುಭಮನ್ ಗಿಲ್ 102, ಮಯಂಕ್ ಮಾರ್ಕಂಡೆ 27, ಸುಖದೀಪ್ ಬಜ್ವಾ ಔಟಾಗದೆ 26, ಪ್ರಸಿದ್ಧ ಕೃಷ್ಣ 57ಕ್ಕೆ2, ಯಶೋವರ್ಧನ್ ಪರಂತಾಪ್ 37ಕ್ಕೆ3, ಶ್ರೇಯಸ್ ಗೋಪಾಲ್ 19ಕ್ಕೆ3) ಫಲಿತಾಂಶ: ಕರ್ನಾಟಕ ತಂಡಕ್ಕೆಇನಿಂಗ್ಸ್ ಮತ್ತು 207 ರನ್‌ ಜಯ. ಪಂದ್ಯಶ್ರೇಷ್ಠ: ಆರ್. ಸ್ಮರಣ್ (ಕರ್ನಾಟಕ).

ಪಂಜಾಬ್ ತಂಡದ ಬ್ಯಾಟರ್ ಶುಭಮನ್ ಗಿಲ್ ಶತಕ ಸಂಭ್ರಮ   –ಎಸ್‌.ಕೆ. ದಿನೇಶ್ 

- ಅಂಪೈರ್ ತೀರ್ಪಿಗೆ ಗಿಲ್ ಅಸಮಾಧಾನ

ಶತಕ ದಾಖಲಿಸಿದ ನಂತರ ಮತ್ತಷ್ಟು ರನ್‌ ಗಳಿಸುವ ಉಮೇದಿನಲ್ಲಿದ್ದ ಶುಭಮನ್ ಗಿಲ್ ಅವರು ಸ್ಪಿನ್ನರ್ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆದರು.  ಗಿಲ್ ಅವರು ಕ್ರೀಸ್‌ನಿಂದ ತುಸು ಮುಂದಡಿ ಇಟ್ಟು ಸ್ಕೂಪ್ ಮಾಡುವ ಪ್ರಯತ್ನದಲ್ಲಿ ಬೀಟ್ ಆದರು. ಚೆಂಡು ಅವರ ಪ್ಯಾಡ್‌ಗೆ ತಗುಲಿತು. ಆದರೆ ಸ್ಟಂಪ್‌ಲೈನ್‌ನಿಂದ ಹೊರಗೆ ಸಾಗುವಂತೆ ಕಾಣುತ್ತಿತ್ತು. ಅಂಪೈರ್ ಅಕ್ಷಯ್ ತೋತ್ರೆ ಎಲ್‌ಬಿಡಬ್ಲ್ಯು ನೀಡಿದರು. ಗಿಲ್ ಇದನ್ನು ಆಕ್ಷೇಪಿಸುತ್ತ ಪಿಚ್‌ನಿಂದ ಹೊರ ಬಂದರು. ತಮ್ಮ ಬ್ಯಾಟ್‌ ಮೇಲೆಸೆದರು.  ಶ್ರೇಯಸ್‌ಗೆ 3 ವಿಕೆಟ್  ಈ ಪಂದ್ಯದಲ್ಲಿ ಪಂಜಾಬ್ ತಂಡದ ಪತನವಾದ 20 ವಿಕೆಟ್‌ಗಳಲ್ಲಿ 17 ವೇಗಿಗಳ ಪಾಲಾದವು. ಮೊದಲ ಇನಿಂಗ್ಸ್‌ನಲ್ಲಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರಿಗೆ ಬೌಲಿಂಗ್ ಲಭಿಸಿರಲಿಲ್ಲ. ಎರಡನೇ ಇನಿಂಗ್ಸ್‌ನಲ್ಲಿ ಎರಡು ಸ್ಪೆಲ್ ಬೌಲಿಂಗ್ ಮಾಡುವ ಅವಕಾಶ ಲಭಿಸಿತು. ಮೊದಲ ಸ್ಪೆಲ್‌ನಲ್ಲಿ ಅವರು ಗಿಲ್ ವಿಕೆಟ್ ಪಡೆದರು. ಎರಡನೇ ಸ್ಪೆಲ್‌ನಲ್ಲಿ ಎರಡು ವಿಕೆಟ್ ಗಳಿಸಿದರು. ಒಟ್ಟು 3.4 ಓವರ್  ಬೌಲಿಂಗ್ ಮಾಡಿ 19 ರನ್ ಗಳಿಸಿದರು. 

ಮುಂಬೈಗೆ ಆಘಾತ: ಕ್ವಾರ್ಟರ್ ಸನಿಹ

ಜಮ್ಮು–ಕಾಶ್ಮೀರ ಮುಂಬೈ (ಪಿಟಿಐ):  ರಣಜಿ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿ 42 ಬಾರಿ ಚಾಂಪಿಯನ್ ಆಗಿರುವ ಮುಂಬೈ ತಂಡಕ್ಕೆ ಆಘಾತ ನೀಡಿದ ಜಮ್ಮು ಕಾಶ್ಮೀರ ತಂಡವು ಎಲೀಟ್ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.  ಅಜಿಂಕ್ಯ ರಹಾನೆ ನಾಯಕತ್ವದ ತಂಡವನ್ನು ಶನಿವಾರ 5 ವಿಕೆಟ್‌ಗಳಿಂದ ಜಮ್ಮು–ಕಾಶ್ಮೀರ ತಂಡವು ಸೋಲಿಸಿತು. ಒಟ್ಟು 29 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿತು. ಆ ಮೂಲಕ ಕ್ವಾರ್ಟರ್‌ಫೈನಲ್‌ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿತು.  ಮುಂಬೈ ತಂಡದಲ್ಲಿ ಭಾರತ ತಂಡದ ಈಗಿನ  ನಾಯಕ ರೋಹಿತ್ ಶರ್ಮಾ ರಾಷ್ಟ್ರೀಯ ತಂಡದ ಆಟಗಾರರಾದ ಯಶಸ್ವಿ ಜೈಸ್ವಾಲ್ ಅಜಿಂಕ್ಯ ರಹಾನೆ ಶ್ರೇಯಸ್ ಅಯ್ಯರ್ ಮತ್ತು ಶಾರ್ದೂಲ್ ಠಾಕೂರ್ ಅವರಿದ್ದ ತಂಡವನ್ನು ಪಾರಸ್ ಡೋಗ್ರಾ ನಾಯಕತ್ವದ ತಂಡವು ಸೋಲಿಸಿತು.  207 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಜಮ್ಮು–ಕಾಶ್ಮೀರ ತಂಡವು  49 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಸಾಧಿಸಿತು.   ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಮುಂಬೈ: 33.2 ಓವರ್‌ಗಳಲ್ಲಿ 120 . ಜಮ್ಮು–ಕಾಶ್ಮೀರ: 46.3 ಓವರ್‌ಗಳಲ್ಲಿ 206. ಎರಡನೇ ಇನಿಂಗ್ಸ್: ಮುಂಬೈ: 74 ಓವರ್‌ಗಳಲ್ಲಿ 290. ಜಮ್ಮು–ಕಾಶ್ಮೀರ: 49 ಓವರ್‌ಗಳಲ್ಲಿ 5ಕ್ಕೆ207 (ಶುಭನಮ್ ಖಜುರಿಯಾ 45 ಯಾವೆರ್ ಹಸನ್ 24 ವಿವ್ರಾಂತ್ ಶರ್ಮಾ 38 ಅಬ್ದುಲ್ ಸಮದ್ 24 ಅಬಿದ್ ಮುಷ್ತಾಕ್ ಔಟಾಗದೆ32 ಶಮ್ಸ್ ಮುಲಾನಿ 54ಕ್ಕೆ4) ಫಲಿತಾಂಶ: ಮುಂಬೈ ತಂಡಕ್ಕೆ5 ವಿಕೆಟ್‌ ಜಯ. ಪಂದ್ಯಶ್ರೇಷ್ಠ: ಯುಧ್‌ವೀರ್ ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.