ADVERTISEMENT

ವೆಸ್ಟ್ ಇಂಡೀಸ್ ತಂಡಕ್ಕೆ ಮರಳಿದ ಆ್ಯಂಡ್ರೆ ರಸೆಲ್

ರಾಯಿಟರ್ಸ್
Published 19 ಮೇ 2021, 13:18 IST
Last Updated 19 ಮೇ 2021, 13:18 IST
ಕೀರನ್ ಪೊಲಾರ್ಡ್‌
ಕೀರನ್ ಪೊಲಾರ್ಡ್‌   

ನವದೆಹಲಿ: ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಎದುರಿನ ಟಿ20 ಸರಣಿಗಳಿಗೆ ವೆಸ್ಟ್ ಇಂಡೀಸ್ ತಂಡವನ್ನು ಬುಧವಾರ ಪ್ರಕಟಿಸಲಾಗಿದ್ದು ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಅವರನ್ನು ಕರೆಸಿಕೊಳ್ಳಲಾಗಿದೆ. ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಹಿನ್ನೆಲೆಯಲ್ಲಿ ಬಲಿಷ್ಠ ತಂಡವನ್ನು ಆಯ್ಕೆ ಮಾಡಲಾಗಿದೆ.

ಕಳೆದ ವರ್ಷದ ಮಾರ್ಚ್‌ ನಂತರ ರಸೆಲ್ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲಿಲ್ಲ. ಆದರೆ ವೆಸ್ಟ್ ಇಂಡೀಸ್‌, ಶ್ರೀಲಂಕಾ ಮತ್ತು ಭಾರತದಲ್ಲಿ ನಡೆದ ಟಿ20 ಲೀಗ್‌ಗಳಲ್ಲಿ ಸಕ್ರಿಯರಾಗಿದ್ದರು. ಕೀರನ್ ಪೊಲಾರ್ಡ್ ನಾಯಕತ್ವದ 18 ಮಂದಿಯ ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಶಿಮ್ರಾನ್ ಹೆಟ್ಮೆಯರ್, ಬೌಲರ್‌ಗಳಾದ ಶೆಲ್ಡನ್ ಕಾಟ್ರೆಲ್‌, ಒಶಾನೆ ಥಾಮಸ್‌ ಮತ್ತು ಹೇಡನ್ ವಾಲ್ಶ್‌ ಜೂನಿಯರ್ ಅವರಿಗೂ ಅವಕಾಶ ನೀಡಲಾಗಿದೆ.

ಸ್ಪಿನ್ನರ್ ಸುನಿಲ್ ನಾರಾಯಣ್ ಅವರನ್ನು ತಂಡಕ್ಕೆ ಸೇರಿಸಲಿಲ್ಲ. ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವುದಿಲ್ಲ ಎಂದು ಅವರು ಈಚೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದರು. ಅನುಭವಿ ಆಟಗಾರರಾದ ಡ್ವೇನ್ ಬ್ರಾವೊ, ಫಿಡೆಲ್ ಎಡ್ವರ್ಡ್ಸ್‌ ಮತ್ತು ಕ್ರಿಸ್ ಗೇಲ್‌ ಅವಕಾಶ ಪಡೆದುಕೊಂಡಿದ್ದಾರೆ. ಜೂನ್ 26ರಂದು ಗ್ರೆನೆಡಾದಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಎದುರಿನ ಸರಣಿಗಾಗಿ ತಂಡ ಸೇಂಟ್ ಲೂಸಿಯಾದಲ್ಲಿ ಕ್ವಾರಂಟೈನ್‌ಗೆ ಒಳಗಾಗಲಿದೆ. ಅಭ್ಯಾಸವೂ ಅಲ್ಲೇ ನಡೆಯಲಿದೆ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಎದುರಿನ ಸರಣಿಗಳು ಜುಲೈ ಹಾಗೂ ಆಗಸ್ಟ್‌ನಲ್ಲಿ ನಡೆಯಲಿವೆ.

ADVERTISEMENT

ತಂಡ: ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್‌ (ವಿಕೆಟ್ ಕೀಪರ್), ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೊ, ಶೆಲ್ಡನ್ ಕಾಟ್ರೆಲ್‌, ಫಿಡೆಲ್ ಎಡ್ವರ್ಡ್ಸ್‌, ಆ್ಯಂಡ್ರೆ ಫ್ಲೆಚರ್‌, ಕ್ರಿಸ್ ಗೇಲ್‌, ಶಿಮ್ರಾನ್ ಹೆಟ್ಮೆಯರ್‌, ಜೇಸನ್ ಹೋಲ್ಡರ್‌, ಅಕೀಲ್ ಹೊಸೇನ್‌, ಎವಿನ್ ಲ್ಯೂವಿಸ್‌, ಒಬೆದ್ ಮೆಕಾಯ್‌, ಆ್ಯಂಡ್ರೆ ರಸೆಲ್‌, ಲೆಂಡ್ಲ್‌ ಸಿಮನ್ಸ್‌, ಕೆವಿನ್ ಸಿಂಕ್ಲೇರ್‌, ಒಶಾನೆ ಥಾಮಸ್, ಹೇಡನ್ ವಾಲ್ಶ್‌ ಜೂನಿಯರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.